ಬೆಂಗಳೂರಿನಿಂದ ಬೀದರ್ಗೆ ದಸರಾ ವಿಶೇಷ ರೈಲು: ನಾಲ್ಕು ಜಿಲ್ಲೆಗಳ ಪ್ರಯಾಣಿಕರಿಗೆ ಅನುಕೂಲ

ಬೀದರ್, ಅ.8– ದಸರಾ ಹಬ್ಬ ಹಾಗೂ ವಾರಾಂತ್ಯದ ಪ್ರಯಾಣಿಕರ ದಟ್ಟಣೆ ನಿಯಂತ್ರಿಸುವ ಉದ್ದೇಶದಿಂದ ನೈಋತ್ಯ ರೈಲ್ವೆ ಬೆಂಗಳೂರಿನಿಂದ ಬೀದರ್ಗೆ ವಿಶೇಷ ಎಕ್ಸ್ಪ್ರೆಸ್ ರೈಲುಗಳ ಸಂಚಾರವನ್ನು ಘೋಷಿಸಿದೆ. ಬೆಂಗಳೂರು–ಬೀದರ್ ನಡುವೆ ಎರಡು ಬಾರಿ ಸಂಚರಿಸಲಿರುವ ಈ ವಿಶೇಷ ರೈಲುಗಳು ಬೀದರ್ ಸೇರಿದಂತೆ ಕಲಬುರಗಿ, ಯಾದಗಿರಿ ಹಾಗೂ ರಾಯಚೂರು ಭಾಗದ ಪ್ರಯಾಣಿಕರಿಗೆ ಅನುಕೂಲವಾಗಲಿದೆ.
ಬೆಂಗಳೂರು ಕಂಟೋನ್ಮೆಂಟ್–ಬೀದರ್ ಮಾರ್ಗದಲ್ಲಿ ಹೆಚ್ಚುವರಿ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಎರಡು ಬಾರಿ ವಿಶೇಷ ರೈಲು ಸಂಚಾರ ನಡೆಸಲಾಗುತ್ತಿದೆ.
ರೈಲು ಸಂಖ್ಯೆ 06589 ಬೆಂಗಳೂರು ಕಂಟೋನ್ಮೆಂಟ್–ಬೀದರ್ ಎಕ್ಸ್ಪ್ರೆಸ್ ವಿಶೇಷ ರೈಲು ಅಕ್ಟೋಬರ್ 9 ಮತ್ತು 16ರಂದು ರಾತ್ರಿ 11 ಗಂಟೆಗೆ ಬೆಂಗಳೂರು ಕಂಟೋನ್ಮೆಂಟ್ನಿಂದ ಹೊರಟು ಮರುದಿನ ಮಧ್ಯಾಹ್ನ 2.15ಕ್ಕೆ ಬೀದರ್ ತಲುಪಲಿದೆ.
ಹಿಂತಿರುಗುವ ಮಾರ್ಗದಲ್ಲಿ ರೈಲು ಸಂಖ್ಯೆ 06590 ಬೀದರ್–ಬೆಂಗಳೂರು ಕಂಟೋನ್ಮೆಂಟ್ ಎಕ್ಸ್ಪ್ರೆಸ್ ವಿಶೇಷ ರೈಲು ಅಕ್ಟೋಬರ್ 10 ಮತ್ತು 17ರಂದು ಸಂಜೆ 4 ಗಂಟೆಗೆ ಬೀದರ್ನಿಂದ ಹೊರಟು ಮರುದಿನ ಬೆಳಿಗ್ಗೆ 9.45ಕ್ಕೆ ಬೆಂಗಳೂರು ಕಂಟೋನ್ಮೆಂಟ್ ತಲುಪಲಿದೆ.
ಈ ವಿಶೇಷ ರೈಲುಗಳು ಯಲಹಂಕ, ಹಿಂದೂಪುರ, ಧರ್ಮಾವರಂ, ಅನಂತಪುರ, ಗುಂತಕಲ್, ಆದೋನಿ, ಮಂತ್ರಾಲಯಂ ರಸ್ತೆ, ರಾಯಚೂರು, ಕೃಷ್ಣ, ಯಾದಗಿರಿ, ವಾಡಿ, ಶಹಾಬಾದ್, ಕಲಬುರಗಿ ಹಾಗೂ ಹುಮ್ನಾಬಾದ್ ಸೇರಿದಂತೆ ಪ್ರಮುಖ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರಲಿವೆ.
ರೈಲಿನಲ್ಲಿ ಒಂದು ಹವಾನಿಯಂತ್ರಿತ ದ್ವಿತೀಯ ದರ್ಜೆ ಬೋಗಿ, ಮೂರು ಹವಾನಿಯಂತ್ರಿತ ತೃತೀಯ ದರ್ಜೆ ಬೋಗಿಗಳು, 10 ಮಲಗುವ ವರ್ಗದ ಬೋಗಿಗಳು ಹಾಗೂ ಮೂರು ಸಾಮಾನ್ಯ ದ್ವಿತೀಯ ದರ್ಜೆ ಬೋಗಿಗಳು ಸೇರಿದಂತೆ ಒಟ್ಟು 19 ಬೋಗಿಗಳು ಇರಲಿವೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ.
ದಸರಾ ಹಬ್ಬದ ಹಿನ್ನೆಲೆಯಲ್ಲಿ ಹೆಚ್ಚುತ್ತಿರುವ ಪ್ರಯಾಣಿಕರ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ಘೋಷಿಸಿರುವ ಈ ವಿಶೇಷ ರೈಲು ಸೇವೆಯಿಂದ ಬೀದರ್, ಕಲಬುರಗಿ, ಯಾದಗಿರಿ ಹಾಗೂ ರಾಯಚೂರು ಜಿಲ್ಲೆಗಳ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ.



