ಹರವಾಳ ಸೇತುವೆ–ಬಾಂದಾರ್ ಯೋಜನೆಗೆ ಸಚಿವ ಡಾ. ಅಜಯಸಿಂಗ್ ಭೇಟಿ

ಜೇವರ್ಗಿ, ಅ.8– ಮತಕ್ಷೇತ್ರದ ಹರವಾಳ ಗ್ರಾಮ ಸಮೀಪ ಭೀಮಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗುತ್ತಿರುವ ಸೇತುವೆ–ಬಾಂದಾರ್ ಯೋಜನೆಗೆ ರಾಜ್ಯದ ಸಣ್ಣ ನೀರಾವರಿ ಸಚಿವ ಹಾಗೂ ಕ್ಷೇತ್ರದ ಶಾಸಕ ಡಾ. ಅಜಯಸಿಂಗ್ ಗುರುವಾರ ಭೇಟಿ ನೀಡಿ ಕಾಮಗಾರಿಯ ಪ್ರಗತಿ ಪರಿಶೀಲಿಸಿದರು.
ಸುಮಾರು ₹130 ಕೋಟಿ ಅಂದಾಜು ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿರುವ ಈ ಮಹತ್ವದ ಯೋಜನೆಯು 368.60 ಮೀಟರ್ ಉದ್ದ ಹಾಗೂ 4 ಮೀಟರ್ ಎತ್ತರ ಹೊಂದಿದೆ. ನೀರಿನ ಸಂಗ್ರಹಣೆ, ಕೃಷಿಗೆ ಅಗತ್ಯವಾದ ನೀರಿನ ಲಭ್ಯತೆ ಹೆಚ್ಚಿಸುವುದು ಹಾಗೂ ಹರವಾಳ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಸಂಪರ್ಕ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಯೋಜನೆ ರೂಪಿಸಲಾಗಿದೆ.
ಜೇವರ್ಗಿ ಹಾಗೂ ಅಫಜಲಪುರ ಮತಕ್ಷೇತ್ರಗಳ ಅಭಿವೃದ್ಧಿಯಲ್ಲಿ ಉತ್ತಮ ಸಂಪರ್ಕ ವ್ಯವಸ್ಥೆ, ನೀರಾವರಿ ಹಾಗೂ ಮೂಲಸೌಕರ್ಯಕ್ಕೆ ಸಮಾನ ಆದ್ಯತೆ ನೀಡಲಾಗುತ್ತಿದೆ. ಗ್ರಾಮೀಣ ಪ್ರದೇಶಗಳ ಅಗತ್ಯಗಳನ್ನು ಸ್ಥಳದಲ್ಲಿಯೇ ಆಲಿಸಿ, ದೀರ್ಘಕಾಲಿಕ ಹಾಗೂ ಶಾಶ್ವತ ಪರಿಹಾರಗಳನ್ನು ಒದಗಿಸುವ ಮೂಲಕ ಪ್ರತಿಯೊಂದು ಗ್ರಾಮಕ್ಕೂ ಅಭಿವೃದ್ಧಿಯ ಫಲ ತಲುಪಿಸುವುದು ಸರ್ಕಾರದ ಸಂಕಲ್ಪವಾಗಿದೆ ಎಂದು ಸಚಿವ ಡಾ. ಅಜಯಸಿಂಗ್ ಹೇಳಿದರು.
ಯೋಜನೆಯಿಂದ ಈ ಭಾಗದ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುವುದರ ಜತೆಗೆ ನೀರಿನ ಲಭ್ಯತೆ ಸುಧಾರಿಸಲಿದೆ. ಸೇತುವೆ ನಿರ್ಮಾಣದಿಂದ ಹರವಾಳ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ನಡುವಿನ ಸಂಚಾರ ಮತ್ತು ಸಂಪರ್ಕ ವ್ಯವಸ್ಥೆಯೂ ಮತ್ತಷ್ಟು ಬಲಗೊಳ್ಳಲಿದೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು, ಸ್ಥಳೀಯ ಗ್ರಾಮಸ್ಥರು ಹಾಗೂ ಇತರರು ಉಪಸ್ಥಿತರಿದ್ದರು.



