ಜಿಲ್ಲಾಸುದ್ದಿ

ವಿಶೇಷ ಅಧಿವೇಶನದಲ್ಲಿ ಅನ್ನದಾತನಿಗೆ ಅನ್ಯಾಯ: ಎಕರೆಗೆ ₹25 ಸಾವಿರ ಪರಿಹಾರಕ್ಕೆ ತೇಲ್ಕೂರ್ ಆಗ್ರಹ

ಕಲಬುರಗಿ, ಅ.8– ವಿಶೇಷ ಅಧಿವೇಶನದ ಹೆಸರಿನಲ್ಲಿ ರೈತರ ಭಾವನೆಗಳೊಂದಿಗೆ ಕಾಂಗ್ರೆಸ್ ಸರ್ಕಾರ ಚೆಲ್ಲಾಟವಾಡುತ್ತಿದೆ. ತಿಪ್ಪೆ ಸಾರಿಸಿದಂತೆ ಕೇವಲ ₹2,500 ಪರಿಹಾರ ಘೋಷಿಸಿ ಅನ್ನದಾತನನ್ನು ಭಿಕ್ಷುಕನಂತೆ ಕಾಣುವ ಹೀನ ಕೆಲಸ ಮಾಡಿದೆ ಎಂದು ಸೇಡಂ ಮಾಜಿ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರೈತರ ಸಂಕಷ್ಟಕ್ಕೆ ಸ್ಪಂದಿಸಿ ವಿಶೇಷ ಅಧಿವೇಶನದಲ್ಲಿ ಐತಿಹಾಸಿಕ ಪರಿಹಾರ ಅಥವಾ ಬೆಳೆ ಸಾಲ ಮನ್ನಾ ಘೋಷಣೆಯಾಗಲಿದೆ ಎಂದು ರಾಜ್ಯದ ರೈತ ಸಮುದಾಯ ನಿರೀಕ್ಷೆ ಇಟ್ಟುಕೊಂಡಿತ್ತು. ಆದರೆ ಕೇವಲ ₹2,500 ಪರಿಹಾರ ನೀಡುವ ಮೂಲಕ ಕಾಂಗ್ರೆಸ್ ಸರ್ಕಾರ ರೈತರ ನಿರೀಕ್ಷೆಗೆ ತಣ್ಣೀರು ಎರಚಿದೆ. ಇದು ಪರಿಹಾರವಲ್ಲ, ರೈತರ ಸ್ವಾಭಿಮಾನಕ್ಕೆ ಮಾಡಿದ ಅವಮಾನ ಎಂದು ಅವರು ವಾಗ್ದಾಳಿ ನಡೆಸಿದರು.

ಎನ್‌ಡಿಆರ್‌ಎಫ್ ಮಾರ್ಗಸೂಚಿಯ ಪ್ರಕಾರವೇ ಬರ ಪರಿಹಾರವಾಗಿ ಎಕರೆಗೆ ಕನಿಷ್ಠ ₹8,000 ನೀಡಬೇಕಾಗುತ್ತದೆ. ಕೋವಿಡ್‌ನಂತಹ ಸಾಂಕ್ರಾಮಿಕ ಹಾಗೂ ಯುದ್ಧದಂತಹ ತುರ್ತು ಪರಿಸ್ಥಿತಿ ಇಲ್ಲದಿದ್ದರೂ ಬೊಕ್ಕಸ ಖಾಲಿಯಾಗಿದೆ ಎಂದು ಹೇಳುತ್ತಿರುವುದು ಹಾಸ್ಯಾಸ್ಪದವಾಗಿದೆ. ರೈತರು ಸಂಕಷ್ಟದಲ್ಲಿರುವಾಗ ಅವರ ಕೈಹಿಡಿಯಬೇಕಾದ ಸರ್ಕಾರ ಕೈಗೆ ಚೊಂಬು ನೀಡುತ್ತಿದೆ ಎಂದು ತೇಲ್ಕೂರ್ ಟೀಕಿಸಿದರು.

ರೈತರು ಪರಿಹಾರಕ್ಕಾಗಿ ಭಿಕ್ಷೆ ಬೇಡುತ್ತಿಲ್ಲ. ತಮ್ಮ ಹಕ್ಕನ್ನು ಕೇಳುತ್ತಿದ್ದಾರೆ. ರೈತರ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸಬೇಕು ಎಂದು ಅವರು ಒತ್ತಾಯಿಸಿದರು.

ಇತರೆ ಎಲ್ಲ ಅಭಿವೃದ್ಧಿ ಕಾಮಗಾರಿಗಳನ್ನು ತಾತ್ಕಾಲಿಕವಾಗಿ ಮುಂದೂಡಿ, ಆ ಹಣವನ್ನು ರೈತರಿಗೆ ಎಕರೆಗೆ ₹25 ಸಾವಿರ ಪರಿಹಾರವಾಗಿ ನೀಡಬೇಕು. ಇಲ್ಲದಿದ್ದರೆ ಈ ಜನವಿರೋಧಿ ನಡೆಯನ್ನು ಜನತಾ ನ್ಯಾಯಾಲಯದ ಮುಂದೆ ಕೊಂಡೊಯ್ಯುತ್ತೇವೆ ಎಂದು ತೇಲ್ಕೂರ್ ಎಚ್ಚರಿಸಿದರು.

ರೈತರಿಗೆ ದ್ರೋಹ ಬಗೆದರೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ 25 ಸ್ಥಾನಗಳೂ ಉಳಿಯುವುದಿಲ್ಲ. ಈಗಾಗಲೇ ಆಡಳಿತ ಪಕ್ಷದ ಶಾಸಕರೇ ಬಂಡಾಯದ ಧ್ವನಿ ಎತ್ತಿದ್ದಾರೆ. ರೈತರ ಪರ ನಿಲ್ಲಲು ಇದು ಮುಖ್ಯಮಂತ್ರಿ ಅವರಿಗೆ ಇರುವ ಕೊನೆಯ ಅವಕಾಶವಾಗಿದೆ ಎಂದು ಅವರು ಹೇಳಿದರು.

ರೈತರು ತೀವ್ರ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಕಳೆದ ವರ್ಷ ನೀಡಿದ ಪರಿಹಾರದಲ್ಲಿ ರೈತರಿಗೆ ಮಾಡಿದ ತಾರತಮ್ಯವನ್ನು ಈ ವರ್ಷ ಮಾಡದೆ, ರಾಜಕೀಯ ರಹಿತವಾಗಿ ಹಾಗೂ ಪಕ್ಷಾತೀತವಾಗಿ ಕೂಡಲೇ ಎಲ್ಲ ರೈತರಿಗೆ ಪರಿಹಾರ ವಿತರಿಸಬೇಕು ಎಂದು ತೇಲ್ಕೂರ್ ಆಗ್ರಹಿಸಿದರು.

sswnews

https://sswnewskannada.com

Related Articles

Leave a Reply

Your email address will not be published. Required fields are marked *

Back to top button