ಜಿಲ್ಲಾಸುದ್ದಿ

ಅಲ್ಲಮಪ್ರಭು ಪಾಟೀಲರಿಂದ ಅಭಿವೃದ್ಧಿ ಕಾರ್ಯಗಳಾದರೂ ಬಿಜೆಪಿ ಅವಹೇಳನ: ಹೇರುರ್ ಆಕ್ಷೇಪ

ಕಲಬುರಗಿ, ಅ.8– ಮಹಾನಗರ ಪಾಲಿಕೆಯ ವಾರ್ಡ್ ನಂ.52ರಲ್ಲಿ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಕಳೆದ ಮೂರು ವರ್ಷಗಳಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿದ್ದರೂ, ಬಿಜೆಪಿ ಮುಖಂಡರು ಪ್ರತಿಭಟನೆಯ ನೆಪದಲ್ಲಿ ಶಾಸಕರನ್ನು ಅವಹೇಳನ ಮಾಡಿರುವುದು ಖಂಡನೀಯ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿಯ ಹಿಂದುಳಿದ ವರ್ಗಗಳ ವಿಭಾಗದ ಜಿಲ್ಲಾಧ್ಯಕ್ಷ ಧರ್ಮರಾಜ ಬಿ. ಹೇರುರ್ ಆರೋಪಿಸಿದರು.

ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ವಿವಿಧ ವಿಷಯಗಳ ಕುರಿತು ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಬಿಜೆಪಿ ಮುಖಂಡರೊಬ್ಬರು ಶಾಸಕ ಅಲ್ಲಮಪ್ರಭು ಪಾಟೀಲರ ವಿರುದ್ಧ ಏಕವಚನದಲ್ಲಿ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಜನಪ್ರತಿನಿಧಿಯೊಬ್ಬರ ಬಗ್ಗೆ ಈ ರೀತಿಯ ಭಾಷೆ ಬಳಸಿರುವುದನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸುತ್ತದೆ ಎಂದರು.

ದಕ್ಷಿಣ ಮತಕ್ಷೇತ್ರದ ವ್ಯಾಪ್ತಿಯ ವಾರ್ಡ್ ನಂ.52ರಲ್ಲಿ ಕಳೆದ ಮೂರು ವರ್ಷಗಳಲ್ಲಿ ಶಾಸಕರು ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡು ಜನರ ಗಮನ ಸೆಳೆದಿದ್ದಾರೆ. ವಿವಿಧ ಯೋಜನೆಗಳನ್ನು ಜಾರಿಗೆ ತಂದು ಹಲವು ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದ್ದು, ಇನ್ನೂ ಕೆಲವು ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಹೇಳಿದರು.

ವಾರ್ಡ್‌ನಲ್ಲಿ ಸುಮಾರು ಮೂರು ವರ್ಷಗಳ ಅವಧಿಯಲ್ಲಿ ಸಿಸಿ ರಸ್ತೆ, ಬೋರ್‌ವೆಲ್, ಒಳಚರಂಡಿ, ದೇವಾಲಯ ಅಭಿವೃದ್ಧಿ, ಪೈಪ್‌ಲೈನ್ ಕಾಮಗಾರಿ, ಡಾಂಬರೀಕರಣ ರಸ್ತೆ, ಒಳರಸ್ತೆ, ಉದ್ಯಾನವನ ಅಭಿವೃದ್ಧಿ, ಸಿಮೆಂಟ್ ಗುಮ್ಮಿಗಳು ಹಾಗೂ ಕೊಳವೆ ಬಾವಿ ಸೇರಿದಂತೆ ಅನೇಕ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಈಗಾಗಲೇ ಕೈಗೊಂಡಿರುವ ಕಾಮಗಾರಿಗಳ ಪೈಕಿ ಸುಮಾರು ಶೇ.50ರಷ್ಟು ಕಾಮಗಾರಿಗಳು ಪೂರ್ಣಗೊಂಡಿದ್ದು, ಉಳಿದ ಕಾಮಗಾರಿಗಳು ಪ್ರಗತಿಯಲ್ಲಿವೆ. ಅವುಗಳನ್ನೂ ಶೀಘ್ರ ಪೂರ್ಣಗೊಳಿಸಲಾಗುವುದು ಎಂದು ಹೇರುರ್ ತಿಳಿಸಿದರು.

ಸಂತೋಷ ಕಾಲೋನಿಯಿಂದ ಹೈಕೋರ್ಟ್‌ಗೆ ಹೋಗುವ ರಸ್ತೆಯಲ್ಲಿ ಉದ್ಯಾನವನ ಅಭಿವೃದ್ಧಿ ಹಾಗೂ ಸಿಸಿ ರಸ್ತೆ ನಿರ್ಮಾಣ, ಬೇತನಿ ಶಾಲೆ ಎದುರು ಮತ್ತು ಶಾಲೆ ಸಮೀಪ ಸಿಸಿ ರಸ್ತೆ, ಜಯತೀರ್ಥ ನಗರದಲ್ಲಿ ಸಿಸಿ ರಸ್ತೆ, ನವಲಗಾ ಹನುಮಾನ ದೇವಸ್ಥಾನದ ಬಳಿ ಸಿಸಿ ರಸ್ತೆ, ಶ್ರೀದತ್ತ ನಗರದಲ್ಲಿ ಉದ್ಯಾನವನ ಅಭಿವೃದ್ಧಿ, ಸಂತೋಷ ಕಾಲೋನಿ ಹನುಮಾನ ಮಂದಿರದ ಎದುರು ಸಿಸಿ ರಸ್ತೆ ಹಾಗೂ ದರ್ಶನಾಪುರ ಬಡಾವಣೆಯಲ್ಲಿ ಸಿಸಿ ರಸ್ತೆ ನಿರ್ಮಾಣ ಮಾಡಲಾಗಿದೆ ಎಂದು ವಿವರಿಸಿದರು.

ಕೆಎಚ್‌ಬಿ ಕಾಲೋನಿ ವೆಸ್ಟ್ ವಿಂಗ್‌ನಲ್ಲಿ ಸುಮಾರು ಎರಡು ಕಿಲೋಮೀಟರ್ ಪೈಪ್‌ಲೈನ್ ಕಾಮಗಾರಿ, 60 ಅಡಿ ಅಗಲದ ಡಾಂಬರೀಕರಣ ರಸ್ತೆ, ಯುಜಿಡಿ ಹಾಗೂ ಒಳಚರಂಡಿ ನಿರ್ಮಾಣ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಕೆಎಚ್‌ಬಿ ಕಾಲೋನಿ ರಂಗಮಂದಿರದ ಉದ್ಯಾನವನ ಅಭಿವೃದ್ಧಿ, ಈಸ್ಟ್ ಮತ್ತು ವೆಸ್ಟ್ ವಿಂಗ್‌ನಲ್ಲಿ ಒಳರಸ್ತೆ ಹಾಗೂ ಸಿಸಿ ರಸ್ತೆ ನಿರ್ಮಾಣ, ಕಲ್ಯಾಣ ಮಂಟಪದ ಎದುರು ಒಳರಸ್ತೆ ಮತ್ತು ಸಿಸಿ ರಸ್ತೆ ನಿರ್ಮಾಣ, ಮಾಕಾ ಬಡಾವಣೆಯ ಬಸವ ಮಂಟಪ ಉದ್ಯಾನವನದಲ್ಲಿ ಪೇವರ್ ಅಳವಡಿಕೆ ಸೇರಿದಂತೆ ಹಲವು ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದರು.

ಶ್ರೀದತ್ತ ನಗರದಲ್ಲಿ ಸಿಸಿ ರಸ್ತೆ ನಿರ್ಮಾಣ ಕಾಮಗಾರಿ ಸೇರಿದಂತೆ ಇನ್ನೂ ಹಲವು ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿವೆ. ಜನರ ಮೂಲಸೌಕರ್ಯ ಅಗತ್ಯಗಳಿಗೆ ಆದ್ಯತೆ ನೀಡಿ ಶಾಸಕರು ಅಭಿವೃದ್ಧಿ ಕಾರ್ಯಗಳನ್ನು ಮುಂದುವರಿಸಿದ್ದಾರೆ ಎಂದು ಅವರು ಹೇಳಿದರು.

ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿರುವ ಜನಪ್ರತಿನಿಧಿಯ ಬಗ್ಗೆ ಬಿಜೆಪಿ ಮುಖಂಡರು ಹಗುರವಾಗಿ ಮಾತನಾಡುವುದು ಸರಿಯಲ್ಲ. ರಾಜಕೀಯ ಭಿನ್ನಾಭಿಪ್ರಾಯಗಳಿದ್ದರೂ ವೈಯಕ್ತಿಕ ಅವಹೇಳನಕ್ಕೆ ಇಳಿಯಬಾರದು. ಇಂತಹ ಹೇಳಿಕೆಗಳನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸುತ್ತದೆ ಎಂದು ಧರ್ಮರಾಜ ಹೇರುರ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಆನಂದ್ ಎಸ್.ಎಂ., ಟೈಗರ್ ವಿಶ್ವೇಶ್ವರ, ವಿದ್ಯಾಸಾಗರ, ಕೃಷ್ಣ ಸಿಂಧೆ, ಸಂಗಯ್ಯಸ್ವಾಮಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

sswnews

https://sswnewskannada.com

Related Articles

Leave a Reply

Your email address will not be published. Required fields are marked *

Back to top button