ಜಿಲ್ಲಾಸುದ್ದಿ

ಧುತ್ತರಗಾಂವ್ ಶಿವಶಕ್ತಿ ದೇವಾಲಯದಲ್ಲಿ ಅ.11ರಿಂದ ನವರಾತ್ರಿ ನವದುರ್ಗೆಯರ ಪೂಜೆ

ಕಲಬುರಗಿ, ಅ.8– ಜಿಲ್ಲೆಯ ಆಳಂದ ತಾಲ್ಲೂಕಿನ ಧುತ್ತರಗಾಂವ್ ಗ್ರಾಮದ ಶ್ರೀ ಶಿವಶಕ್ತಿ ದೇವಾಲಯದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ನವರಾತ್ರಿ ಅಂಗವಾಗಿ ನವದುರ್ಗೆಯರ ವಿಶೇಷ ಪೂಜಾ ಕಾರ್ಯಕ್ರಮ ಅ.11ರಿಂದ 21ರವರೆಗೆ ನಡೆಯಲಿದೆ ಎಂದು ದೇವಾಲಯದ ಧರ್ಮದರ್ಶಿ ಚಂದ್ರಶೇಖರ ಎಸ್. ಹಿರೇಮಠ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧುತ್ತರಗಾಂವ್ ಗ್ರಾಮದಲ್ಲಿರುವ ಶ್ರೀ ಶಿವಶಕ್ತಿ ದೇವಾಲಯದಲ್ಲಿ ನವರಾತ್ರಿ ಉತ್ಸವಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಜಿಲ್ಲೆಯಲ್ಲೇ ನವದುರ್ಗೆಯರ ಒಂಬತ್ತು ಮೂರ್ತಿಗಳನ್ನು ಹೊಂದಿರುವ ಏಕೈಕ ದೇವಾಲಯ ಇದಾಗಿದೆ ಎಂದು ಹೇಳಿದರು.

ಶ್ರೀ ಶಿವಕಾಂತಯ್ಯ ಹಿರೇಮಠ ಅವರ ನೇತೃತ್ವದಲ್ಲಿ ನಾಲ್ವರು ಅರ್ಚಕರ ತಂಡವು ಪ್ರತಿದಿನ ನವದುರ್ಗೆಯರ ಪೂಜಾ ವಿಧಿವಿಧಾನಗಳನ್ನು ನೆರವೇರಿಸಲಿದೆ. ವೈದಿಕ ನಿಯಮಾನುಸಾರ ಪ್ರತಿದಿನ ದೇವಿಗೆ ಆಹ್ವಾನ ನೀಡಿ ವಿಶೇಷ ಪೂಜೆ ಸಲ್ಲಿಸಲಾಗುವುದು. ಎಂಟು ಭುಜಗಳನ್ನು ಹೊಂದಿರುವ ದುರ್ಗಾದೇವಿಯ ಮೂರ್ತಿ ವಿಶೇಷ ಆಕರ್ಷಣೆಯಾಗಿದ್ದು, ಭಕ್ತರ ಬೇಡಿಕೆಗಳನ್ನು ಈಡೇರಿಸುವ ಶಕ್ತಿ ದೇವಿಗಿದೆ ಎಂಬ ನಂಬಿಕೆ ಇದೆ ಎಂದು ಅವರು ತಿಳಿಸಿದರು.

ದೇವಾಲಯದಲ್ಲಿ ತಮಿಳುನಾಡಿನ ವೈದಿಕ ಪರಂಪರೆಯ ಮೂಲಕ ಶ್ರೀಚಕ್ರ ಸ್ಥಾಪನೆ ಮಾಡಲಾಗಿದ್ದು, ನವರಾತ್ರಿ ಸಂದರ್ಭದಲ್ಲಿ ವಿಶೇಷ ಕುಂಕುಮಾರ್ಚನೆ ಸೇರಿದಂತೆ ವಿವಿಧ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಪ್ರತಿದಿನ ಸಂಜೆ ಶ್ರೀ ದಾನಾನಂದ ಅವಧೂತ ವಿರಚಿತ ದೇವಿ ಪುರಾಣ ಪ್ರವಚನ ನಡೆಯಲಿದ್ದು, ಶ್ರೀ ಗುರುಲಿಂಗಯ್ಯ ಹಿರೇಮಠ ಹಿತ್ತಲಶಿರೂರ ಅವರು ಪ್ರವಚನ ನೀಡಲಿದ್ದಾರೆ. ಶ್ರೀ ಚೆನ್ನಬಸವ ಒಮಣಿ ಗಾಯಕರಾಗಿ ಹಾಗೂ ಶ್ರೀ ಶಿವಾನಂದ ಬಳಗುರಗಿ ತಬಲಾ ವಾದಕರಾಗಿ ಸಾಥ್ ನೀಡಲಿದ್ದಾರೆ.

ಪೂಜಾ ಕಾರ್ಯಕ್ರಮಗಳ ನಂತರ ಪ್ರತಿದಿನ ಗ್ರಾಮಸ್ಥರು ಹಾಗೂ ಭಕ್ತರಿಗೆ ಅನ್ನಪ್ರಸಾದ ವ್ಯವಸ್ಥೆ ಮಾಡಲಾಗುವುದು. ದೇವಾಲಯದಲ್ಲಿ ಯಾವುದೇ ಪೂಜೆಗೆ ಶುಲ್ಕ ವಿಧಿಸಲಾಗುವುದಿಲ್ಲ ಎಂದು ಧರ್ಮದರ್ಶಿ ಚಂದ್ರಶೇಖರ ಹಿರೇಮಠ ತಿಳಿಸಿದರು.

ಅ.11ರಿಂದ 21ರವರೆಗೆ ನಡೆಯಲಿರುವ ನವರಾತ್ರಿ ಪುಣ್ಯ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವಿಯ ದರ್ಶನ ಪಡೆದು ಆಶೀರ್ವಾದ ಪಡೆಯಬೇಕು ಎಂದು ಅವರು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಗಿರೀಶ ಧುಮ್ಮದ್ರಿ, ಭೀಮಶೆಟ್ಟಿ ಮುಕಾ, ರಾಜು ಜೈನ್, ಎಸ್.ಎಸ್. ಬರಗಾಲಿ, ಸಿದ್ದು ಹರವಾಳ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

sswnews

https://sswnewskannada.com

Related Articles

Leave a Reply

Your email address will not be published. Required fields are marked *

Back to top button