ಅ.11ರಂದು ಚಲವಾದಿ (ಬಲಗೈ) ಸಮುದಾಯದ ವಧು–ವರರ ಸಮಾವೇಶ

ಕಲಬುರಗಿ, ಅ.8– ನಗರದ ತಿಮ್ಮಾಪುರ ಸರ್ಕಲ್‌ನ ಕನ್ನಡ ಸಾಹಿತ್ಯ ಭವನದಲ್ಲಿ ಅ.11ರಂದು ಬೆಳಿಗ್ಗೆ 11ರಿಂದ ಮಧ್ಯಾಹ್ನ 1ರವರೆಗೆ ಚಲವಾದಿ (ಬಲಗೈ) ಸಮುದಾಯದ ವಧು–ವರರ ಸಮಾವೇಶ ಹಾಗೂ ಬಲಗೈ ಸಮುದಾಯದ ಉದ್ಯಮಿಗಳಿಗೆ ಅರಿವು ಮೂಡಿಸುವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಎಜಿಟಿ ಫೌಂಡೇಶನ್‌ನ ಚಿಕ್ಕೋಡಿ ಹಾಗೂ ಶ್ರೀಧರ್ ಹೆಬ್ಬಾಳಕರ್, ಚಲವಾದಿ (ಬಲಗೈ) ಸಮುದಾಯದ ಮುಖಂಡರು ಮತ್ತು ಉದ್ಯಮಿಗಳ ಸಂಘದ ಪ್ರಮುಖರು ತಿಳಿಸಿದ್ದಾರೆ.
ಈ ಕುರಿತು ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮುದಾಯದ ಯುವಜನರಿಗೆ ಸೂಕ್ತ ವೈವಾಹಿಕ ಸಂಬಂಧಗಳನ್ನು ಕಲ್ಪಿಸುವುದು ಹಾಗೂ ಉದ್ಯಮಿಗಳಿಗೆ ಅಗತ್ಯ ಮಾರ್ಗದರ್ಶನ ಮತ್ತು ಅರಿವು ಮೂಡಿಸುವ ಉದ್ದೇಶದಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಪ್ರೊ. ವಿಠಲ ವಗ್ಗಣ ವಹಿಸಲಿದ್ದಾರೆ. ಬೆಳಗಾವಿಯ ಉದ್ಯಮಿ ಶಿವಾನಂದ ಸಂಜೀವಗೋಳ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪ್ರೊ. ರವೀಂದ್ರ ಗಡ್ಡೇಕರ ಆಗಮಿಸಲಿದ್ದಾರೆ.
ಉದ್ಯಮಿಗಳಾದ ಬಸಣ್ಣ ಸಿಂಗೇ, ಶೆಳ್ಳಗಿ ದೇವೇಂದ್ರ, ಸುಭಾಷಚಂದ್ರ ಬರ್ಮಾ, ಶಿವಶಂಕರ ಪಟ್ಟಣಕರ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಶಿವಲಿಂಗಪ್ಪ ಕಲಕೇರಿ ಉಪಸ್ಥಿತರಿದ್ದರು.



