ಕುಡ್ಡಳ್ಳಿ ರಾಮಣ್ಣ ಗೊಟೂರ್ ಕೊಲೆ ಪ್ರಕರಣ: ಪತ್ನಿ ಸೇರಿ ನಾಲ್ವರಿಗೆ ಜೀವಾವಧಿ ಶಿಕ್ಷೆ

ಕಲಬುರಗಿ, ಅ.7- ಸುಲೇಪೇಟ ಪೊಲೀಸ್ ಠಾಣೆ ವ್ಯಾಪ್ತಿಯ ಕುಡ್ಡಳ್ಳಿ ಗ್ರಾಮದಲ್ಲಿ ನಡೆದ ರಾಮಣ್ಣ ಗೊಟೂರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತನ ಪತ್ನಿ ಸೇರಿದಂತೆ ನಾಲ್ವರು ಆರೋಪಿಗಳಿಗೆ ನ್ಯಾಯಾಲಯ ಜೀವಾವಧಿ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ಒಟ್ಟು ₹2.39 ಲಕ್ಷ ದಂಡ ವಿಧಿಸಿ ತೀರ್ಪು ನೀಡಿದೆ.
ನಾಲ್ಕನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಸಿರಾಜುದ್ದೀನ್ ಎ. ಅವರು ತೀರ್ಪು ಪ್ರಕಟಿಸಿದ್ದು, ಪ್ರಕರಣದ ಆರೋಪಿಗಳಾದ ಮೃತ ರಾಮಣ್ಣ ಅವರ ಪತ್ನಿ ಶ್ರೀಮತಿ ಸುನೀತಾ, ಆಕೆಯ ಪ್ರಿಯಕರ ಮಲ್ಲಪ್ಪ, ಸಾಬಣ್ಣ ಹಾಗೂ ಬಸಪ್ಪ ಅವರಿಗೆ ಜೀವಾವಧಿ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದ್ದಾರೆ. ಅಲ್ಲದೆ, ಮೃತ ರಾಮಣ್ಣ ಅವರ ಮಕ್ಕಳಾದ ಸಾಹಿತ್ಯ ಮತ್ತು ಅಜಯರಾಜ್ ಅವರಿಗೆ ತಲಾ ₹1 ಲಕ್ಷ ಪರಿಹಾರ ನೀಡುವಂತೆ ಆದೇಶಿಸಿದ್ದಾರೆ.
ಪ್ರಕರಣದ ಹಿನ್ನೆಲೆ:
ರಾಮಣ್ಣ ಗೊಟೂರ್ ಹಾಗೂ ಮಲ್ಲಪ್ಪ ಗೆಳೆಯರಾಗಿದ್ದರು. ಮಲ್ಲಪ್ಪನು ರಾಮಣ್ಣ ಅವರ ಪತ್ನಿ ಸುನೀತಾ ಜತೆ ಅನೈತಿಕ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಈ ವಿಚಾರ ತಿಳಿದ ರಾಮಣ್ಣ ಪತ್ನಿಯನ್ನು ಆಕ್ಷೇಪಿಸಿ ಬುದ್ಧಿವಾದ ಹೇಳಿದ್ದರೂ, ಸಂಬಂಧ ಮುಂದುವರಿದಿತ್ತು ಎಂದು ಪ್ರಕರಣದ ವಿಚಾರಣೆಯಲ್ಲಿ ತಿಳಿದುಬಂದಿದೆ.
ರಾಮಣ್ಣನನ್ನು ಕೊಲೆ ಮಾಡಿದರೆ ಅನೈತಿಕ ಸಂಬಂಧಕ್ಕೆ ಯಾವುದೇ ತೊಂದರೆ ಇರುವುದಿಲ್ಲ ಎಂದು ಆರೋಪಿಗಳು ಸಂಚು ರೂಪಿಸಿದ್ದರು ಎನ್ನಲಾಗಿದೆ. ಮಲ್ಲಪ್ಪನಿಗೆ ಅಪರಾಧ ಪ್ರಕರಣವೊಂದರಲ್ಲಿ ರಾಮಣ್ಣ ಸಹಾಯ ಮಾಡಿದ್ದ ಹಿನ್ನೆಲೆಯಲ್ಲಿ, ಬಸಪ್ಪನಿಗೆ ರಾಮಣ್ಣನಿಂದ ₹2 ಲಕ್ಷ ಸಾಲವಿದ್ದ ಕಾರಣ ಅದನ್ನು ಮನ್ನಾ ಮಾಡಿಸುವುದಾಗಿ ಸುನೀತಾ ಹಾಗೂ ಮಲ್ಲಪ್ಪ ಹೇಳಿದ್ದರಿಂದ ಕೊಲೆಗೆ ಒಪ್ಪಿಕೊಂಡಿದ್ದರು ಎಂದು ಪ್ರಕರಣದ ದಾಖಲೆಗಳಲ್ಲಿ ಉಲ್ಲೇಖಿಸಲಾಗಿದೆ.
ಮನೆಯಲ್ಲೇ ಕೊಲೆ
2022ರ ಆಗಸ್ಟ್ 5ರಂದು ರಾತ್ರಿ ರಾಮಣ್ಣ, ಅವರ ಮಕ್ಕಳು ಹಾಗೂ ಆರೋಪಿ ಸುನೀತಾ ಊಟ ಮಾಡಿ ಮನೆಯಲ್ಲಿ ಮಲಗಿದ್ದರು. ಈ ಸಂದರ್ಭದಲ್ಲಿ ಸುನೀತಾ ಮನೆಯ ಬಾಗಿಲು ತೆರೆದು ಆರೋಪಿಗಳನ್ನು ಒಳಗೆ ಕರೆದುಕೊಂಡಿದ್ದಳು ಎನ್ನಲಾಗಿದೆ.
ಮಕ್ಕಳು ಎಚ್ಚರಗೊಂಡಿದ್ದರಿಂದ ಅವರಿಗೆ ಹೊಡೆದು ಕೊಲೆ ಮಾಡುವುದಾಗಿ ಬೆದರಿಸಿ ಅಡುಗೆ ಮನೆಯಲ್ಲಿರಿಸಿ ಬಾಗಿಲು ಹಾಕಲಾಗಿತ್ತು. ಬಳಿಕ ಮಂಚದ ಮೇಲೆ ಮಲಗಿದ್ದ ರಾಮಣ್ಣನ ಕುತ್ತಿಗೆಗೆ ಮಲ್ಲಪ್ಪ ಹಗ್ಗ ಬಿಗಿದು, ಅವರು ಧರಿಸಿದ್ದ ಲುಂಗಿಯನ್ನೇ ಬಾಯಿಗೆ ತುರುಕಿದ್ದ. ನಂತರ ಕಡೆಯಿಂದ ಬಾಯಿಗೆ ಚುಚ್ಚಿ ಹಾಗೂ ಬಡಿಗೆಯಿಂದ ಹೊಡೆದು ಕೊಲೆ ಮಾಡಲಾಗಿದೆ ಎಂದು ಆರೋಪಪಟ್ಟಿಯಲ್ಲಿ ತಿಳಿಸಲಾಗಿತ್ತು.
ಕೊಲೆಯ ಬಳಿಕ ಮೃತದೇಹವನ್ನು ಹಗ್ಗದಿಂದ ಕುತ್ತಿಗೆ ಮತ್ತು ಕೈಗಳನ್ನು ಬಿಗಿದು ಗೋಣಿ ಚೀಲದಲ್ಲಿ ಹಾಕಿ, ಮೋಟಾರ್ ಸೈಕಲ್ ಮೇಲೆ ಸಾಗಿಸಲಾಗುತ್ತಿತ್ತು. ಅದನ್ನು ಪೊಲೀಸ್ ಪಾಟೀಲರ ಹೊಲದಲ್ಲಿರುವ ಬಾವಿಗೆ ಹಾಕಲು ಆರೋಪಿಗಳು ಮುಂದಾಗಿದ್ದರು ಎನ್ನಲಾಗಿದೆ.
ಈ ವೇಳೆ ಮೃತ ರಾಮಣ್ಣ ಅವರ ಪುತ್ರ ಸಾಹಿತ್ಯ ಮನೆಯಿಂದ ಹೊರಗೆ ಓಡಿ ಹೋಗಿ, ಮೊಹರಂ ಹಬ್ಬದ ಹಿನ್ನೆಲೆಯಲ್ಲಿ ಹನುಮಂತ ದೇವರ ಗುಡಿಯ ಬಳಿ ಕುಳಿತಿದ್ದ ದೂರುದಾರ ರಾಮಪ್ಪ ಅವರ ಅಣ್ಣ ನಾಗಪ್ಪನಿಗೆ ಘಟನೆ ಕುರಿತು ಮಾಹಿತಿ ನೀಡಿದ್ದ. ತಕ್ಷಣ ನಾಗಪ್ಪ ಹಾಗೂ ಇತರರು ಸ್ಥಳಕ್ಕೆ ಧಾವಿಸಿದಾಗ ಆರೋಪಿಗಳು ಪರಾರಿಯಾಗಿದ್ದರು.
ಆರೋಪಿಗಳು ಪರಾರಿಯಾಗುವಾಗ ಚಿಂಚೋಳಿ–ಕಲಬುರಗಿ ಮುಖ್ಯ ರಸ್ತೆಯ ಪಕ್ಕದಲ್ಲಿ ರಾಮಣ್ಣನ ಶವ ಹಾಗೂ ಮೋಟಾರ್ ಸೈಕಲ್ ಬಿಟ್ಟು ಓಡಿ ಹೋಗಿದ್ದರು. ಪೊಲೀಸರು ನಡೆಸಿದ ತನಿಖೆ ಹಾಗೂ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಆರೋಪಿಗಳ ವಿರುದ್ಧದ ಆರೋಪಗಳು ಸಾಬೀತಾಗಿವೆ.
ಸುಲೇಪೇಟ ಪೊಲೀಸ್ ಠಾಣೆಯ ಆರಕ್ಷಕ ವೃತ್ತ ನಿರೀಕ್ಷಕ ಜಗದೀಶ್ ಕೆ.ಜಿ. ಅವರು ತನಿಖೆ ಪೂರ್ಣಗೊಳಿಸಿ ಆರೋಪಿಗಳ ವಿರುದ್ಧ ಆರೋಪಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಸರ್ಕಾರಿ ಅಭಿಯೋಜಕರು ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು.



