ಜಿಲ್ಲಾಸುದ್ದಿ

ಎಸ್‌ಐಆರ್ ಹೆಸರಿನಲ್ಲಿ ಮತದಾರರನ್ನು ಅನರ್ಹಗೊಳಿಸುವ ಹುನ್ನಾರ: ಹ್ಯಾರಿಸ್ ಆರೋಪ

ಕಲಬುರಗಿ, ಅ.7- ಕೇಂದ್ರದ ಬಿಜೆಪಿ ಸರ್ಕಾರ ಚುನಾವಣಾ ಆಯೋಗದಂತಹ ಸಾಂವಿಧಾನಿಕ ಸಂಸ್ಥೆಯನ್ನು ರಾಜಕೀಯ ಅಸ್ತ್ರವಾಗಿ ಬಳಸಿಕೊಂಡು, ಚುನಾವಣೆಗಳಲ್ಲಿ ಗೆಲ್ಲುವ ಉದ್ದೇಶದಿಂದ ವಿಶೇಷ ತೀವ್ರ ಪರಿಷ್ಕರಣೆ ಹೆಸರಿನಲ್ಲಿ ಅರ್ಹ ಮತದಾರರ ಮತದಾನದ ಹಕ್ಕು ಕಸಿಯುವ ಕುತಂತ್ರ ನಡೆಸುತ್ತಿದೆ ಎಂದು ಕರ್ನಾಟಕ ಮುಸ್ಲಿಂ ಶಾಸಕರ ಒಕ್ಕೂಟದ ಅಧ್ಯಕ್ಷ ಎನ್.ಎ. ಹ್ಯಾರಿಸ್ ಆರೋಪಿಸಿದರು.

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ನಡೆದ ಕಾಂಗ್ರೆಸ್ ಪಕ್ಷದ ಸಭೆಯಲ್ಲಿ ಮಾತನಾಡಿದ ಅವರು, ಭಾರತ ಚುನಾವಣಾ ಆಯೋಗ ಹಾಗೂ ಅಧಿಕಾರಿಗಳ ಮೇಲೆ ಒತ್ತಡ ಹೇರಿ ಅರ್ಹ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕುವ ಪ್ರಯತ್ನ ನಡೆಯುತ್ತಿದೆ ಎಂದು ದೂರಿದರು.

ವಿಶೇಷವಾಗಿ ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ದುರ್ಬಲ ವರ್ಗಗಳಿಗೆ ಸೇರಿದ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡುವಂತೆ ಒತ್ತಡ ಹೇರಲಾಗುತ್ತಿದೆ. ನಮೂನೆ-7ರ ಮೂಲಕ ಅರ್ಹ ಮತದಾರರನ್ನೇ ಅನರ್ಹಗೊಳಿಸುವ ಪ್ರಯತ್ನ ನಡೆಯುತ್ತಿದೆ ಎಂದು ಅವರು ಆರೋಪಿಸಿದರು.

ಬಿಜೆಪಿಗೆ ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ಹೆಸರು ಹೇಳದಿದ್ದರೆ ನಿದ್ದೆ ಬರುವುದಿಲ್ಲ ಎಂದು ಟೀಕಿಸಿದ ಹ್ಯಾರಿಸ್, ಅನರ್ಹ ಮತದಾರರು ಹಾಗೂ ವಲಸಿಗರ ಬಗ್ಗೆ ಮಾತನಾಡುವ ಬಿಜೆಪಿಗೆ ಅಷ್ಟು ಧೈರ್ಯವಿದ್ದರೆ ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ಮತದಾರರ ಹೆಸರುಗಳನ್ನು ತೋರಿಸಲಿ ಎಂದು ಸವಾಲು ಹಾಕಿದರು.

ಚುನಾವಣೆಯಲ್ಲಿ ಗೆಲ್ಲುವ ಉದ್ದೇಶದಿಂದ ಎಸ್‌ಐಆರ್ ಹೆಸರಿನಲ್ಲಿ ಮತದಾರರ ಹಕ್ಕುಗಳನ್ನು ಕಸಿಯುವ ಯಾವುದೇ ಪ್ರಯತ್ನವನ್ನು ಕಾಂಗ್ರೆಸ್ ಪಕ್ಷ ಸಹಿಸುವುದಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ಅರ್ಹ ಮತದಾರನ ಮತದಾನದ ಹಕ್ಕನ್ನು ರಕ್ಷಿಸುವುದು ಕಾಂಗ್ರೆಸ್‌ನ ಪ್ರಮುಖ ಆದ್ಯತೆಯಾಗಿದೆ ಎಂದು ಅವರು ಹೇಳಿದರು.

ಸಂಘಟನೆ ಬಲಪಡಿಸಲು ‘ಸಂಘಟನಾ ಸೃಜನ ಅಭಿಯಾನ-2’

ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಲ್ಲಿ ಮತ್ತಷ್ಟು ಸಂಘಟಿಸುವ ಹಾಗೂ ಹೊಸ ನಾಯಕತ್ವವನ್ನು ಬೆಳೆಸುವ ಉದ್ದೇಶದಿಂದ ಎಐಸಿಸಿ ವತಿಯಿಂದ ‘ಸಂಘಟನಾ ಸೃಜನ ಅಭಿಯಾನ-2’ ಆರಂಭಿಸಲಾಗಿದೆ ಎಂದು ಹ್ಯಾರಿಸ್ ತಿಳಿಸಿದರು.

ಅಭಿಯಾನದ ಅಂಗವಾಗಿ ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳು ಹಾಗೂ ಬ್ಲಾಕ್‌ಗಳಿಗೆ ತೆರಳಿ ಪಕ್ಷದ ಕಾರ್ಯಕರ್ತರು ಮತ್ತು ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಲಾಗುವುದು. ಬಳಿಕ ಬ್ಲಾಕ್ ಹಾಗೂ ಗ್ರಾಮ ಮಟ್ಟದಲ್ಲಿ ಪದಾಧಿಕಾರಿಗಳ ನೇಮಕ ಪ್ರಕ್ರಿಯೆ ಮುಂದುವರಿಯಲಿದೆ ಎಂದು ಹೇಳಿದರು.

ಕಳೆದ ಐದು ವರ್ಷಗಳಿಂದ ಒಂದೇ ಹುದ್ದೆಯಲ್ಲಿ ಮುಂದುವರಿದಿರುವ ಪದಾಧಿಕಾರಿಗಳನ್ನು ಬದಲಾಯಿಸಿ, ಹೊಸ ನಾಯಕತ್ವಕ್ಕೆ ಅವಕಾಶ ನೀಡಲು ಆದ್ಯತೆ ನೀಡಲಾಗುತ್ತಿದೆ. ಈ ಪ್ರಕ್ರಿಯೆಯಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ಸಾರ್ವಜನಿಕರ ಅಭಿಪ್ರಾಯಕ್ಕೂ ಹೆಚ್ಚಿನ ಮಹತ್ವ ನೀಡಲಾಗುವುದು ಎಂದು ಅವರು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ಕಿರಣ್ ದೇಶಮುಖ್, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ರೇಣುಕಾ ಸಿಂಗೆ, ರಾಜ್ಯ ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ಉತ್ತರ ಕ್ಷೇತ್ರದ ಶಾಸಕಿ ಶ್ರೀಮತಿ ಕನೀಜ್ ಫಾತಿಮಾ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜರ್ ಆಲಂಖಾನ್, ಜೇಸ್ಕಾಂ ಅಧ್ಯಕ್ಷ ಪ್ರವೀಣ್ ಪಾಟೀಲ ಹರವಾಳ್, ಮಾಜಿ ಮೇಯರ್ ಶ್ರೀಮತಿ ಚಂದ್ರಿಕಾ ಪರಮೇಶ್ವರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

sswnews

https://sswnewskannada.com

Related Articles

Leave a Reply

Your email address will not be published. Required fields are marked *

Back to top button