ಜಿಲ್ಲಾಸುದ್ದಿ

ಗಣೇಶ ವಿಸರ್ಜನಾ ಮೆರವಣಿಗೆ ಮೇಲೆ ಕಲ್ಲು ತೂರಾಟ: ಕಿಡಿಗೇಡಿಗಳ ಬಂಧನಕ್ಕೆ ಬಿಜೆಪಿ ಆಗ್ರಹ

ಕಲಬುರಗಿ, ಅ.7- ಜಿಲ್ಲೆಯ ಆಳಂದ ಪಟ್ಟಣದ ಶ್ರೀರಾಮ ಮಾರುಕಟ್ಟೆ ವ್ಯಾಪ್ತಿಯಲ್ಲಿ ನಡೆದ ಹಿಂದೂ ಮಹಾ ಗಣಪತಿ ವಿಸರ್ಜನಾ ಶೋಭಾಯಾತ್ರೆ ವೇಳೆ ಕಲ್ಲು ತೂರಾಟ ನಡೆಸಿದವರ ವಿರುದ್ಧ ತಕ್ಷಣ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಹಾಗೂ ಬಿಜೆಪಿ ಮುಖಂಡ ಹರ್ಷಾನಂದ ಎಸ್. ಗುತೇದಾರ್ ಆಗ್ರಹಿಸಿದರು.

ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ನಾಲ್ಕು ದಿನಗಳಿಂದ ಆಳಂದ ಪಟ್ಟಣದ ಶ್ರೀರಾಮ ಮಾರುಕಟ್ಟೆ ಆವರಣದಲ್ಲಿ ಅತ್ಯಂತ ಭಕ್ತಿ, ಸೌಹಾರ್ದತೆ ಹಾಗೂ ಸಾರ್ವಜನಿಕ ಶ್ರದ್ಧೆಯೊಂದಿಗೆ ಗಣೇಶೋತ್ಸವ ಕಾರ್ಯಕ್ರಮ ನಡೆಯುತ್ತಿದ್ದು, ಕಳೆದ 11 ವರ್ಷಗಳಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ಗಣೇಶ ವಿಸರ್ಜನಾ ಶೋಭಾಯಾತ್ರೆಯ ವೇಳೆ ಕೆಲ ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿ ಕಲ್ಲು ತೂರಾಟ ನಡೆಸಿ ಸಾರ್ವಜನಿಕ ಶಾಂತಿ, ನೆಮ್ಮದಿ ಹಾಗೂ ಸುವ್ಯವಸ್ಥೆಗೆ ಧಕ್ಕೆ ತರಲು ಯತ್ನಿಸಿದ್ದಾರೆ ಎಂದು ಆರೋಪಿಸಿದರು.

ಶೋಭಾಯಾತ್ರೆಯು ಶಾಂತಿಯುತವಾಗಿ ಆಳಂದ ಮಾರುಕಟ್ಟೆ ರಸ್ತೆಯ ಮೂಲಕ ಸಾಗುತ್ತಿದ್ದ ಸಂದರ್ಭದಲ್ಲಿ ಭಕ್ತರು ಉತ್ಸಾಹದಿಂದ ಮೆರವಣಿಗೆಯನ್ನು ವೀಕ್ಷಿಸುತ್ತಿದ್ದರು. ಈ ವೇಳೆ ಏಕಾಏಕಿ ಭಕ್ತರ ಗುಂಪನ್ನು ಗುರಿಯಾಗಿಸಿಕೊಂಡು ಕಲ್ಲು ತೂರಾಟ ನಡೆಸಲಾಗಿದೆ. ದೇವರ ಕೃಪೆಯಿಂದ ಯಾವುದೇ ವ್ಯಕ್ತಿಗೆ ಪ್ರಾಣಾಪಾಯ ಅಥವಾ ಗಂಭೀರ ಗಾಯಗಳಾಗಿಲ್ಲ ಎಂದು ಅವರು ತಿಳಿಸಿದರು.

ಕಲ್ಲು ತೂರಾಟದಿಂದ ಮೆರವಣಿಗೆ ಸ್ವಲ್ಪ ಸಮಯ ಆತಂಕಕ್ಕೆ ಒಳಗಾದರೂ, ಎಸ್‌ಆರ್‌ಜಿ ಕಾಂಪ್ಲೆಕ್ಸ್ ಸಮೀಪದ ನಿಸಾರ್ ಪೆಟ್ರೋಲ್ ಬಂಕ್ ಬಳಿ ಮತ್ತೊಂದು ಕಡೆಯಿಂದ ಯುವಕನೊಬ್ಬ ಸಾರ್ವಜನಿಕರ ಮೇಲೆ ನೇರವಾಗಿ ಕಲ್ಲು ಎಸೆಯಲು ಹಾಗೂ ಪ್ರಚೋದನೆಗೆ ಮುಂದಾಗಿದ್ದಾನೆ. ಸ್ಥಳದಲ್ಲಿದ್ದ ಜಾಗೃತ ಸಾರ್ವಜನಿಕರು ಮತ್ತು ಸಮಿತಿ ಕಾರ್ಯಕರ್ತರು ಆತನನ್ನು ತಕ್ಷಣ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ಹರ್ಷಾನಂದ ಗುತೇದಾರ್ ಹೇಳಿದರು.

ಮೆರವಣಿಗೆಯ ಭದ್ರತೆಗಾಗಿ ಸ್ಥಳದಲ್ಲಿ ನಿಯೋಜಿಸಲಾಗಿದ್ದ ಪೊಲೀಸರು ಯಾವುದೇ ಕಾನೂನು ಕ್ರಮ ಕೈಗೊಳ್ಳದೆ ಯುವಕನನ್ನು ಸುರಕ್ಷಿತವಾಗಿ ವಶಕ್ಕೆ ಪಡೆದಿದ್ದಾರೆ ಎಂದು ಅವರು ಆರೋಪಿಸಿದರು. ಮೆರವಣಿಗೆ ಸಾಗುವ ಪ್ರಮುಖ ವಾಣಿಜ್ಯ ಸಂಕೀರ್ಣಗಳ ಮೇಲ್ಭಾಗದಲ್ಲಿ ಕಲ್ಲುಗಳನ್ನು ಸಂಗ್ರಹಿಸಿಟ್ಟಿರುವುದು ಹಾಗೂ ಪೆಟ್ರೋಲ್ ಬಂಕ್‌ನಂತಹ ಸೂಕ್ಷ್ಮ ಪ್ರದೇಶದ ಬಳಿ ಸಾರ್ವಜನಿಕರ ಮೇಲೆ ಕಲ್ಲು ಎಸೆಯಲು ಯತ್ನಿಸಿರುವುದು ಗಮನಿಸಿದರೆ, ಘಟನೆ ಆಕಸ್ಮಿಕವಾಗಿ ನಡೆದದ್ದಲ್ಲ ಎಂಬ ಅನುಮಾನ ಮೂಡುತ್ತದೆ ಎಂದು ಅವರು ಹೇಳಿದರು.

ಆಳಂದ ಪಟ್ಟಣದಲ್ಲಿ ಹಲವು ವರ್ಷಗಳಿಂದ ನಡೆದುಕೊಂಡು ಬಂದಿರುವ ಕೋಮು ಸೌಹಾರ್ದತೆಯನ್ನು ಹಾಳುಗೆಡವಿ, ದೊಡ್ಡ ಮಟ್ಟದ ಗಲಭೆ ಸೃಷ್ಟಿಸುವ ಉದ್ದೇಶದಿಂದ ವ್ಯವಸ್ಥಿತ ಸಂಚು ರೂಪಿಸಲಾಗಿದೆಯೇ ಎಂಬುದನ್ನು ಪೊಲೀಸರು ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದರು.

ಕಲ್ಲು ತೂರಾಟ ನಡೆಸಿದವರನ್ನು ತಕ್ಷಣ ಬಂಧಿಸಿ, ವಶಕ್ಕೆ ಪಡೆದಿರುವ ಯುವಕನನ್ನು ವಿಚಾರಣೆಗೆ ಒಳಪಡಿಸಿ, ಘಟನೆಯ ಹಿಂದಿರುವವರನ್ನು ಪತ್ತೆಹಚ್ಚಬೇಕು. ಆಳಂದ ಪಟ್ಟಣದ ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆ ತರಲು ಯತ್ನಿಸಿದ ಎಲ್ಲ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ಕಲ್ಲು ತೂರಾಟದ ಘಟನೆಯಲ್ಲಿ ಇಬ್ಬರನ್ನು ಪೊಲೀಸರು ಬಿಟ್ಟು ಕಳುಹಿಸಿದ್ದಾರೆ ಎಂದು ಅವರು ಆರೋಪಿಸಿದರು. ಮಹೇಶ್ ಗೌಳಿ ಅವರು ದೂರು ಸಲ್ಲಿಸಿದ್ದರೂ ಪ್ರಕರಣ ದಾಖಲಿಸಿಲ್ಲ. ಈ ಹಿನ್ನೆಲೆಯಲ್ಲಿ ನ್ಯಾಯಾಲಯದ ಮೊರೆ ಹೋಗಲು ಪೊಲೀಸರು ಹಿಂಬರಹ ನೀಡಿದ್ದಾರೆ ಎಂದು ಅವರು ತಿಳಿಸಿದರು.

ಪೊಲೀಸರು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ, ಕಿಡಿಗೇಡಿಗಳ ವಿರುದ್ಧ ತಕ್ಷಣ ಪ್ರಕರಣ ದಾಖಲಿಸಬೇಕು. ಘಟನೆಗೆ ಕಾರಣರಾದವರನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳುವುದರ ಜೊತೆಗೆ, ಆಳಂದ ಪಟ್ಟಣದ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹರ್ಷಾನಂದ ಗುತೇದಾರ್ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಮಹೇಶ್ ಗೌಳಿ, ಅಮೃತ ಬಿರ್ಮಾಣಿ, ಶಾಂತಕುಮಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

sswnews

https://sswnewskannada.com

Related Articles

Leave a Reply

Your email address will not be published. Required fields are marked *

Back to top button