ಮೂಲಸೌಕರ್ಯ ಕಲ್ಪಿಸದ ಪಾಲಿಕೆ ವಿರುದ್ಧ ಅ.9ರಂದು ಬೀಗ ಜಡಿದು ಪ್ರತಿಭಟನೆ

ಕಲಬುರಗಿ, ಅ. 6: ಬೀದಿ ವ್ಯಾಪಾರಿಗಳಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸುವಲ್ಲಿ ವಿಫಲವಾಗಿರುವ ಮಹಾನಗರ ಪಾಲಿಕೆ ವಿರುದ್ಧ ಅಕ್ಟೋಬರ್ 9ರಂದು ಬೆಳಿಗ್ಗೆ 11.30ಕ್ಕೆ ಪಾಲಿಕೆ ಕಚೇರಿಗೆ ಬೀಗ ಜಡಿದು ಮುತ್ತಿಗೆ ಪ್ರತಿಭಟನೆ ನಡೆಸಲಾಗುವುದು ಎಂದು ಅಖಿಲ ಕರ್ನಾಟಕ ರಾಜ್ಯ ಬೀದಿ ವ್ಯಾಪಾರಿಗಳ ಸಂಘದ ರಾಜ್ಯಾಧ್ಯಕ್ಷ ಜಗನ್ನಾಥ ಸೂರ್ಯವಂಶಿ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾನಗರ ಪಾಲಿಕೆಯ ವ್ಯಾಪ್ತಿಯ ವಲಯ–1, ವಲಯ–2 ಹಾಗೂ ವಲಯ–3ರಲ್ಲಿ ಬೀದಿ ವ್ಯಾಪಾರಿಗಳಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುವಂತೆ ಹಲವು ಬಾರಿ ಮನವಿ ಮಾಡಿದ್ದರೂ ಪಾಲಿಕೆ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.
2015ರ ಏಪ್ರಿಲ್ 25ರಂದು ಅಂದಿನ ಪಾಲಿಕೆ ಆಯುಕ್ತ ಎಸ್.ಬಿ. ಕಟ್ಟಿಮನಿ ಅವರು ಬೀದಿ ವ್ಯಾಪಾರಿಗಳಿಗೆ ಸ್ಥಳಾವಕಾಶ ಕಲ್ಪಿಸುವ ಉದ್ದೇಶದಿಂದ ನಗರದ ಏಳು ವ್ಯಾಪಾರಿ ವಲಯಗಳನ್ನು ಗುರುತಿಸಿ, ಅವುಗಳನ್ನು ತೆರವುಗೊಳಿಸಿ ಸ್ವಚ್ಛಗೊಳಿಸಲು ಸೂಚಿಸಿದ್ದರು. ಆದರೆ ಈವರೆಗೂ ಆ ಕಾರ್ಯ ಅನುಷ್ಠಾನಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಗರದ ಎಂಎಸ್ಕೆ ಮಿಲ್ ರಸ್ತೆಯ ಸರ್ಕಾರಿ ಐಟಿಐ ಕಾಲೇಜು ಎದುರು, ಡಂಕಾ ವೃತ್ತದಿಂದ ಪಾಕಿಜಾ ವೈನ್ ಶಾಪ್ವರೆಗೆ, ಕೆಎಂಎಫ್ ಡೇರಿ ಎದುರು, ಅಣಕಲ್ ಪೆಟ್ರೋಲ್ ಪಂಪ್ ಎದುರು, ಹಳೆ ಅಂಡರ್ಬ್ರಿಡ್ಜ್, ಪಂಚಶೀಲ ನಗರ, ಆಳಂದ ಚೆಕ್ಪೋಸ್ಟ್ ಹಾಗೂ ಸೂಪರ್ ಮಾರ್ಕೆಟ್ ಸೇರಿದಂತೆ ವಿವಿಧ ಪ್ರದೇಶಗಳನ್ನು ಬೀದಿ ವ್ಯಾಪಾರಿಗಳ ವ್ಯಾಪಾರಕ್ಕಾಗಿ ಗುರುತಿಸಲಾಗಿತ್ತು.
ಆದರೆ ಈ ಸ್ಥಳಗಳಲ್ಲಿ ಬೀದಿ ದೀಪ, ಶೌಚಾಲಯ, ಕುಡಿಯುವ ನೀರು ಸೇರಿದಂತೆ ಅಗತ್ಯ ಮೂಲಸೌಕರ್ಯ ಕಲ್ಪಿಸಿಲ್ಲ. ಈ ಕುರಿತು ನ್ಯಾಯಾಲಯದ ಆದೇಶವಿದ್ದರೂ ಮಹಾನಗರ ಪಾಲಿಕೆ ವಿಳಂಬ ಮಾಡುತ್ತಿದೆ ಎಂದು ಅವರು ದೂರಿದರು.
2017ರ ಫೆಬ್ರುವರಿ 21ರಂದು ದೀನದಯಾಳ ಅಂತ್ಯೋದಯ ಯೋಜನೆ ಹಾಗೂ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದಡಿ ಬೀದಿ ವ್ಯಾಪಾರಿಗಳ ಅಭಿವೃದ್ಧಿಗಾಗಿ ₹50 ಲಕ್ಷ ಅನುದಾನ ಬಿಡುಗಡೆ ಮಾಡಲಾಗಿತ್ತು. ಅಲ್ಲದೆ, ಮಹಾನಗರ ಪಾಲಿಕೆಯಲ್ಲಿ ಗುರುತಿಸಲಾದ ಏಳು ವ್ಯಾಪಾರಿ ವಲಯಗಳ ಅಭಿವೃದ್ಧಿಗೂ ಹಣ ಬಿಡುಗಡೆ ಮಾಡಲಾಗಿದೆ. ಆದರೂ ಇದುವರೆಗೆ ಬೀದಿ ವ್ಯಾಪಾರಿಗಳಿಗೆ ಸ್ಥಳ ಗುರುತಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹಣ ಬಿಡುಗಡೆಯಾದರೂ ಸೌಲಭ್ಯವಿಲ್ಲ
ಅನುದಾನ ಬಿಡುಗಡೆಯಾದರೂ ಬೀದಿಬದಿಯಲ್ಲಿ ಕುಳಿತು ವ್ಯಾಪಾರ ಮಾಡುತ್ತಿರುವ ವ್ಯಾಪಾರಿಗಳಿಗೆ ಪ್ರತ್ಯೇಕವಾಗಿ ವ್ಯಾಪಾರ ನಡೆಸಲು ಅಗತ್ಯ ವ್ಯವಸ್ಥೆ ಕಲ್ಪಿಸಿಲ್ಲ. ಬೀದಿ ವ್ಯಾಪಾರಿಗಳಿಗಾಗಿ ಸೂಕ್ತ ಸ್ಥಳ ಹಾಗೂ ಮೂಲಸೌಕರ್ಯ ಒದಗಿಸುವಂತೆ ನ್ಯಾಯಾಲಯದ ಆದೇಶವಿದ್ದರೂ ಪಾಲಿಕೆ ಅಧಿಕಾರಿಗಳು ಅದನ್ನು ಪಾಲಿಸುತ್ತಿಲ್ಲ ಎಂದು ಜಗನ್ನಾಥ ಸೂರ್ಯವಂಶಿ ಆರೋಪಿಸಿದರು.
ನಗರದ ಅಭಿವೃದ್ಧಿ ಹಾಗೂ ಸೌಂದರ್ಯೀಕರಣದ ಬಗ್ಗೆ ಮಾತನಾಡುವ ಮಹಾನಗರ ಪಾಲಿಕೆ, ಬೀದಿ ವ್ಯಾಪಾರಿಗಳ ಸಮಸ್ಯೆ ಪರಿಹರಿಸುವ ಕುರಿತು ಯಾವುದೇ ಸಮಗ್ರ ಯೋಜನೆ ರೂಪಿಸಿಲ್ಲ. ಪಾಲಿಕೆಯ ಈ ಧೋರಣೆಯನ್ನು ಖಂಡಿಸಿ ಬೀಗ ಜಡಿದು ಪ್ರತಿಭಟನೆ ನಡೆಸಲಾಗುವುದು. ಪ್ರತಿಭಟನೆಯಲ್ಲಿ ಕನ್ನಡಪರ ಸಂಘಟನೆಗಳು, ದಲಿತಪರ ಸಂಘಟನೆಗಳು, ಜನಪರ ಸಂಘಟನೆಗಳು ಹಾಗೂ ಬೀದಿ ವ್ಯಾಪಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಘಟಕದ ಅಧ್ಯಕ್ಷ ಅಮೃತ ಪಾಟೀಲ ಸಿರನೂರ, ನಗರ ಘಟಕದ ಅಧ್ಯಕ್ಷ ರವಿ ಒಂಟಿ, ಪ್ರಧಾನ ಕಾರ್ಯದರ್ಶಿಗಳಾದ ಚಂದ್ರ ಚಿತ್ರೆ ಹಾಗೂ ಜಂಗ್ಸಿಂಗ್, ಮಹಮ್ಮದ್ ಶಾಹ ದರವೇಶ್, ಜೈ ಕರವೇ ಅಧ್ಯಕ್ಷ ಸಚಿನ್ ಫರಹತಾಬಾದ್, ಜೈ ಕನ್ನಡಿಗರ ಸೇನೆ ಅಧ್ಯಕ್ಷ ದತ್ತು ಭಾಸಗಿ, ಕರವೇ ಜಿಲ್ಲಾ ಅಧ್ಯಕ್ಷ ಮಂಜುನಾಥ ನಾಲವಾರಕರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.



