ಆರೋಗ್ಯ ಇಲಾಖೆಯಲ್ಲಿ ನಕಲಿ ಅಂಕಪಟ್ಟಿ ಹಗರಣ: ಆರೋಪಿಗಳ ವಿರುದ್ಧ ಕ್ರಿಮಿನಲ್ ಪ್ರಕರಣಕ್ಕೆ ಆಗ್ರಹ

ಕಲಬುರಗಿ, ಅ. 6: ಆರೋಗ್ಯ ಇಲಾಖೆಯಲ್ಲಿ ನಕಲಿ ಅಂಕಪಟ್ಟಿ ಹಾಗೂ ಶೈಕ್ಷಣಿಕ ದಾಖಲೆಗಳನ್ನು ಸಲ್ಲಿಸಿ ಸರ್ಕಾರಿ ಉದ್ಯೋಗ ಪಡೆದಿರುವ ಆರೋಪಿಗಳ ಸೇವೆಯನ್ನು ಕೂಡಲೇ ರದ್ದುಪಡಿಸಿ, ಅವರನ್ನು ಬಂಧಿಸಿ ಸೂಕ್ತ ತನಿಖೆ ನಡೆಸಬೇಕು ಎಂದು ಸಮಾಜ ಸೇವಾ ಕಾರ್ಯಕರ್ತರ ವೇದಿಕೆಯ ಕರ್ನಾಟಕ ರಾಜ್ಯ ಕಾರ್ಯದರ್ಶಿ ಮನೋಜಕುಮಾರ ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಗಳ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ನಕಲಿ ಎಸ್ಎಸ್ಎಲ್ಸಿ ಶೈಕ್ಷಣಿಕ ದಾಖಲೆಗಳು ಹಾಗೂ ಅಂಕಪಟ್ಟಿಗಳನ್ನು ಸಲ್ಲಿಸಿ ವಿಶೇಷ ನೇಮಕಾತಿಯಡಿ ‘ಡಿ’ ಗುಂಪಿನ ಹುದ್ದೆಗಳನ್ನು ಪಡೆದುಕೊಂಡಿರುವ ಪ್ರಕರಣ ಸರ್ಕಾರದ ಇತ್ತೀಚಿನ ಅಮಾನತು ಆದೇಶದಿಂದ ಬಹಿರಂಗವಾಗಿದೆ ಎಂದು ಹೇಳಿದರು.
ಅರ್ಹತೆ ಹಾಗೂ ಕಠಿಣ ಪರಿಶ್ರಮದಿಂದ ಉದ್ಯೋಗ ಪಡೆಯಲು ಕಾಯುತ್ತಿರುವ ಲಕ್ಷಾಂತರ ನಿರುದ್ಯೋಗಿ ಯುವಜನರಿಗೆ ದ್ರೋಹ ಬಗೆದು, ನಕಲಿ ದಾಖಲೆಗಳನ್ನು ಸೃಷ್ಟಿಸಿ ಸರ್ಕಾರಿ ಉದ್ಯೋಗ ಗಿಟ್ಟಿಸಿಕೊಂಡಿರುವವರ ವಿರುದ್ಧ ಕೇವಲ ಅಮಾನತು ಶಿಕ್ಷೆ ವಿಧಿಸಿ ಕೈಬಿಡುತ್ತಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ ಎಂದು ಅವರು ಹೇಳಿದರು.
ಸೇವೆಯಿಂದ ವಜಾ ಮಾಡಿ, ಬಂಧಿಸಬೇಕು
ನಕಲಿ ದಾಖಲೆಗಳನ್ನು ಸಲ್ಲಿಸಿ ಅಕ್ರಮವಾಗಿ ಸರ್ಕಾರಿ ಸೇವೆಗೆ ಸೇರಿದ ಆರೋಪಿಗಳನ್ನು ಕೂಡಲೇ ಕಾಯಂ ಸೇವೆಯಿಂದ ವಜಾಗೊಳಿಸಿ, ಕ್ರಿಮಿನಲ್ ಪ್ರಕರಣ ದಾಖಲಿಸಿ ಬಂಧಿಸಬೇಕು. ಸರ್ಕಾರ ಹಾಗೂ ಸಾರ್ವಜನಿಕರಿಗೆ ವಂಚಿಸಿರುವ ಆರೋಪಿಗಳ ವಿರುದ್ಧ ಬಾಲನ್ಯಾಯ ಹಾಗೂ ವಂಚನೆಗೆ ಸಂಬಂಧಿಸಿದ ಕಾನೂನುಗಳಡಿ ತಕ್ಷಣ ಎಫ್ಐಆರ್ ದಾಖಲಿಸಬೇಕು. ಅವರು ಪಡೆದಿರುವ ವೇತನ ಹಾಗೂ ಇತರೆ ಸೌಲಭ್ಯಗಳನ್ನು ಬಡ್ಡಿ ಸಮೇತ ಕಾನೂನುಬದ್ಧವಾಗಿ ವಸೂಲಿ ಮಾಡಬೇಕು ಎಂದು ಮನೋಜಕುಮಾರ ಆಗ್ರಹಿಸಿದರು.
ನಕಲಿ ನೌಕರರು ಹುದ್ದೆಗೆ ಸೇರಿದ ದಿನದಿಂದ ಇಲ್ಲಿಯವರೆಗೆ ಸರ್ಕಾರದಿಂದ ಪಡೆದಿರುವ ಪ್ರತಿಯೊಂದು ರೂಪಾಯಿ ವೇತನ ಹಾಗೂ ಸೌಲಭ್ಯಗಳನ್ನು ಬಡ್ಡಿ ಸಮೇತ ವಾಪಸ್ ಪಡೆಯಬೇಕು. ಅಕ್ರಮ ನೇಮಕಾತಿಗೆ ಕಾರಣರಾದ ಭ್ರಷ್ಟ ಆಯ್ಕೆ ಸಮಿತಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧವೂ ಸಮಗ್ರ ಕ್ರಿಮಿನಲ್ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ದಾಖಲೆಗಳನ್ನು ಪರಿಶೀಲಿಸದೆ ನಕಲಿ ಅಂಕಪಟ್ಟಿಗಳನ್ನು ಸ್ವೀಕರಿಸಿ ವಿಶೇಷ ನೇಮಕಾತಿ ನಡೆಸಿದ ಅಂದಿನ ಆಯ್ಕೆ ಸಮಿತಿಯ ಅಧಿಕಾರಿಗಳು ಹಾಗೂ ಸಿಬ್ಬಂದಿಯೂ ಈ ಅಕ್ರಮದ ನೇರ ಪಾಲುದಾರರಾಗಿದ್ದಾರೆ. ಅವರ ವಿರುದ್ಧವೂ ಸಮಗ್ರ ತನಿಖೆ ನಡೆಸಿ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಅವರು ಆಗ್ರಹಿಸಿದರು.
ರಾಜ್ಯಾದ್ಯಂತ ತನಿಖೆಗೆ ಒತ್ತಾಯ
ಈ ಹಗರಣ ಕೇವಲ ಕೆಲವು ನೌಕರರಿಗೆ ಸೀಮಿತವಾಗಿಲ್ಲ. ಇದರ ಹಿಂದೆ ದೊಡ್ಡ ಜಾಲವೇ ಸಕ್ರಿಯವಾಗಿರುವ ಸಾಧ್ಯತೆ ಇದೆ. ವಿಶೇಷ ನೇಮಕಾತಿಯಡಿ ರಾಜ್ಯಾದ್ಯಂತ ನಡೆದಿರುವ ಎಲ್ಲ ನೇಮಕಾತಿಗಳನ್ನು ಉನ್ನತ ಮಟ್ಟದ ತನಿಖೆಗೆ ಒಳಪಡಿಸಬೇಕು ಎಂದು ಮನೋಜಕುಮಾರ ಒತ್ತಾಯಿಸಿದರು.
ಕೇವಲ ಅಮಾನತು ಮಾಡಿ ಬೇರೆಡೆಗೆ ವರ್ಗಾವಣೆ ಮಾಡುವ ಮೂಲಕ ಪ್ರಕರಣವನ್ನು ಮುಚ್ಚಿಹಾಕುವುದು ಸಾರ್ವಜನಿಕರ ಕಣ್ಣಿಗೆ ಮಣ್ಣೆರಚುವ ತಂತ್ರವಾಗಿದೆ. ಸರ್ಕಾರ ಹಾಗೂ ಆರೋಗ್ಯ ಇಲಾಖೆ ಕೂಡಲೇ ನಕಲಿ ನೌಕರರನ್ನು ಸೇವೆಯಿಂದ ವಜಾಗೊಳಿಸಿ, ಕ್ರಿಮಿನಲ್ ಪ್ರಕರಣ ದಾಖಲಿಸದಿದ್ದರೆ ಅರ್ಹ ನಿರುದ್ಯೋಗಿ ಯುವಕರನ್ನು ಸಂಘಟಿಸಿ ಇಲಾಖೆಯ ವಿರುದ್ಧ ಉಗ್ರ ಹೋರಾಟ ಹಾಗೂ ರಾಜ್ಯವ್ಯಾಪಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ರಾಮಕೃಷ್ಣ ಎಂ. ಸೇರಿದಂತೆ ಹಲವರು ಉಪಸ್ಥಿತರಿದ್ದರು.



