ಅ.24ರಿಂದ 26ರವರೆಗೆ ಕಲ್ಯಾಣ ಪರ್ವ: ಭಿತ್ತಿಪತ್ರ ಬಿಡುಗಡೆ

ಬೀದರ್, ಅ.3- ಬಸವ ಧರ್ಮ ಪೀಠದ ವತಿಯಿಂದ ಬಸವಕಲ್ಯಾಣದ ಮಹಾಮಠದ ಮಹಾಮನೆ ಆವರಣದಲ್ಲಿ ಅಕ್ಟೋಬರ್ 24ರಿಂದ 26ರವರೆಗೆ ನಡೆಯಲಿರುವ ಕಲ್ಯಾಣ ಪರ್ವದ ಬೆಳ್ಳಿ ಮಹೋತ್ಸವಕ್ಕೆ ಸಿದ್ಧತೆಗಳು ಆರಂಭಗೊಂಡಿವೆ. ಜಿಲ್ಲೆಯಾದ್ಯಂತ ಕಲ್ಯಾಣ ಪರ್ವದ ಪ್ರಚಾರ ಕಾರ್ಯವೂ ಈಗಾಗಲೇ ಆರಂಭವಾಗಿದೆ.
ನಗರದ ರಾಮಪುರ ಕಾಲೊನಿ ಕ್ರಾಸ್‌ನಲ್ಲಿರುವ ಬಸವೇಶ್ವರ ವೃತ್ತದಲ್ಲಿ ಬಸವಕಲ್ಯಾಣದ ಬಸವ ಧರ್ಮ ಪೀಠದ ಮಾತೆ ಲಾವಣ್ಯ ಅವರು ಶುಕ್ರವಾರ ಕಲ್ಯಾಣ ಪರ್ವದ ಭಿತ್ತಿಪತ್ರವನ್ನು ಬಿಡುಗಡೆಗೊಳಿಸಿದರು.
ಈ ಬಾರಿಯ ಕಲ್ಯಾಣ ಪರ್ವವು 25ನೇ ಕಲ್ಯಾಣ ಪರ್ವವಾಗಿದ್ದು, ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಹಾಗೂ ಯಶಸ್ವಿಯಾಗಿ ಆಯೋಜಿಸಲು ಸಿದ್ಧತೆಗಳು ನಡೆಯುತ್ತಿವೆ ಎಂದು ಕಲ್ಯಾಣ ಪರ್ವದ ಪ್ರಚಾರ ಸಮಿತಿ ಅಧ್ಯಕ್ಷ ಡಾ. ಶಿವಶರಣಪ್ಪ ಹುಗ್ಗಿ ಪಾಟೀಲ ತಿಳಿಸಿದರು.
ಮೂರು ದಿನಗಳ ಕಾಲ ವಿವಿಧ ಗೋಷ್ಠಿಗಳು ನಡೆಯಲಿದ್ದು, ಜಿಲ್ಲೆ, ರಾಜ್ಯ ಹಾಗೂ ನೆರೆಯ ರಾಜ್ಯಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಬಸವಾನುಯಾಯಿಗಳು ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮದ ಯಶಸ್ಸಿಗಾಗಿ ಈಗಾಗಲೇ ವಿವಿಧ ಸಮಿತಿಗಳನ್ನು ರಚಿಸಿ ಜವಾಬ್ದಾರಿಗಳನ್ನು ವಹಿಸಲಾಗಿದೆ ಎಂದು ಹೇಳಿದರು.
ಕಲ್ಯಾಣ ಪರ್ವದ ಪ್ರಚಾರ ಸಮಿತಿ ಪ್ರಧಾನ ಕಾರ್ಯದರ್ಶಿ ಯೋಗೇಶ್ ಶ್ರೀಗೇರಿ, ಮುಖಂಡರಾದ ಬಸವರಾಜ ಬುಳ್ಳಾ, ರಾಜೇಂದ್ರಕುಮಾರ ಗಂದಗೆ, ಬಸವರಾಜ ಭತಮುರ್ಗೆ, ರವಿ ಪಾಪಡೆ, ಸಿದ್ರಾಮ ಶೆಟಕಾರ್, ಸಂಜುಕುಮಾರ ಪಾಟೀಲ, ಜಗದೀಶ ಪಾಟೀಲ, ಗಣೇಶ್ ಬಿರಾದಾರ, ವೀರಶೆಟ್ಟಿ ಪಾಟೀಲ, ಅರವಿಂದ ಕಾರಬಾರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.



