ಸರ್ವೆ ನಂತರವೇ ಸ್ಮಶಾನಭೂಮಿ ಮಂಜೂರು ಮಾಡಿ: ಅಂಬಾದಾಸ ಸೈನ ಆಗ್ರಹ

ಬೀದರ್, ಅ.3- ಹೈಕೋರ್ಟ್ ಆದೇಶದಂತೆ ತುಕ್ಕಪ್ಪ ತಂದೆ ಲಾಲಪ್ಪ ಅವರಿಗೆ ಸೇರಿದ ಜಮೀನಿನ ಸರ್ವೆ ನಡೆಸಿದ ನಂತರವೇ ಸ್ಮಶಾನಭೂಮಿ ಮಂಜೂರು ಮಾಡಬೇಕು ಎಂದು ಅಮಲಾಪುರ ಗ್ರಾಮದ ನಿವಾಸಿ ಅಂಬಾದಾಸ ಸೈನ ಆಗ್ರಹಿಸಿದ್ದಾರೆ.
ಭಾಲ್ಕಿ ತಾಲ್ಲೂಕಿನ ಅಮಲಾಪುರ ಗ್ರಾಮದ ಸರ್ವೆ ನಂ. 71ರಲ್ಲಿ ಭೂಮಿರಹಿತ 40 ಬಡ ಕುಟುಂಬಗಳಿಗೆ ಭೂಮಿ ಮಂಜೂರು ಸಮಿತಿ 1993-94ರಲ್ಲಿ ಜಮೀನು ನೀಡಿತ್ತು. ಈ ಪೈಕಿ ತುಕ್ಕಪ್ಪ ತಂದೆ ಲಾಲಪ್ಪ ಅವರಿಗೆ ಮಂಜೂರಾಗಿರುವ 4 ಎಕರೆ 38 ಗುಂಟೆ ಜಮೀನು ಖಾಲಿ ಇರುವುದರಿಂದ, ಸ್ಮಶಾನಭೂಮಿಗೆ ಅಗತ್ಯವಿರುವಷ್ಟು ಜಾಗವನ್ನು ಇದೇ ಜಮೀನಿನಲ್ಲಿ ನೀಡಬಹುದು ಎಂದು ಈ ವರ್ಷದ ಜೂನ್ನಲ್ಲಿ ವರದಿ ನೀಡಲಾಗಿತ್ತು ಎನ್ನಲಾಗಿದೆ.
ಆದರೆ ಜುಲೈನಲ್ಲಿ ನೀಡಲಾದ ವರದಿಯಲ್ಲಿ ಸದರಿ ಜಮೀನು ವಿವಾದಿತ ಜಮೀನು ಎಂದು ತಹಶೀಲ್ದಾರ್ ರವೀಂದ್ರ ದಾಮಾ ಅವರು ಮೇಮೊ ಮೂಲಕ ತಿಳಿಸಿದ್ದಾರೆ ಎಂದು ಅಂಬಾದಾಸ ಸೈನ ಹೇಳಿದ್ದಾರೆ.
ಸ್ಮಶಾನ ನಿರ್ಮಾಣಕ್ಕೆ ಸಂಬಂಧಿಸಿದಂತೆ ನಡೆಸಿದ ಸರ್ವೆಯಲ್ಲಿ ಸ್ಥಳೀಯರು ತೋರಿಸಿದಂತೆ ಸರ್ವೆ ಮಾಡಲಾಗಿದೆ ಎಂದು ಭೂಮಾಪಕ ವಿವೇಕಾನಂದ ಸ್ವಾಮಿ ತಿಳಿಸಿದ್ದಾರೆ. ಆದರೆ ವಿವಾದಿತ ಜಮೀನಿನ ಸಮಸ್ಯೆ ಬಗೆಹರಿಯುವವರೆಗೆ ಅಥವಾ ವಿವಾದಿತ ವ್ಯಕ್ತಿಯನ್ನು ಕರೆಸಿ ಸಹಿ ಪಡೆದು ಸರ್ವೆ ನಡೆಸಬಹುದಾಗಿದ್ದರೂ, ಆ ಕ್ರಮ ಕೈಗೊಳ್ಳದೆ ಸರ್ವೆ ನಡೆಸಿ ನಕ್ಷೆ ಸಿದ್ಧಪಡಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಸುಮಾರು 30 ವರ್ಷಗಳ ಹಿಂದೆ ತುಕ್ಕಪ್ಪ ತಂದೆ ಲಾಲಪ್ಪ ಅವರು ಕುಣಿಗೇರಿಗಾಗಿ ಮೀಸಲಿಟ್ಟಿದ್ದ ಜಮೀನಿನಲ್ಲಿ ಶವಸಂಸ್ಕಾರಕ್ಕೆ ಕುಣಿಯನ್ನು ಹೊಡೆಯುತ್ತಿದ್ದಾಗ ನೀರು ಬಂದ ಕಾರಣ, ತಮ್ಮ ಜಮೀನಿನ ಕೊನೆಯ ಮೂಲೆಯಲ್ಲಿ ಶವಸಂಸ್ಕಾರ ನಡೆಸಲು ಅವಕಾಶ ನೀಡಿದ್ದರು. ಅಂದಿನಿಂದ ಅಲ್ಲಿ ಶವಸಂಸ್ಕಾರ ನಡೆಯುತ್ತಿದೆ ಎಂದು ಅಂಬಾದಾಸ ಸೈನ ತಿಳಿಸಿದ್ದಾರೆ.
ಪ್ರಸ್ತುತ ಆ ಜಾಗವನ್ನು ಸಂಪೂರ್ಣವಾಗಿ ಸ್ಮಶಾನಭೂಮಿಗಾಗಿ ಮೀಸಲಿಡುವಂತೆ ಜಿಲ್ಲಾಧಿಕಾರಿ, ಸಹಾಯಕ ಆಯುಕ್ತ, ತಹಶೀಲ್ದಾರ್ ಹಾಗೂ ಭೂಮಾಪನ ಇಲಾಖೆಗೆ ಗ್ರಾಮಸ್ಥರು ಒತ್ತಡ ಹೇರುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ತಮ್ಮ ತಂದೆಯ ಜಮೀನು ತಮ್ಮ ಕುಟುಂಬದ ಆಸ್ತಿಯಾಗಿದ್ದು, ನ್ಯಾಯಕ್ಕಾಗಿ ಕಲಬುರಗಿ ಹೈಕೋರ್ಟ್ ಪೀಠದಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಜಮೀನಿಗೆ ಸಂಬಂಧಿಸಿದಂತೆ ಹೈಕೋರ್ಟ್ನಿಂದ ಸರ್ಕಾರದ ಮುಖ್ಯ ಕಾರ್ಯದರ್ಶಿ, ಕಂದಾಯ ಇಲಾಖೆ, ಜಿಲ್ಲಾಧಿಕಾರಿ, ಸಹಾಯಕ ಆಯುಕ್ತ ಹಾಗೂ ತಹಶೀಲ್ದಾರ್ ಅವರಿಗೆ ಜುಲೈ 31ರಂದು ನೀಡಿರುವ ಆದೇಶದ ಪ್ರತಿಯನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಸಲ್ಲಿಸಲಾಗಿದೆ ಎಂದು ಅಂಬಾದಾಸ ಸೈನ ತಿಳಿಸಿದ್ದಾರೆ.
ಹೈಕೋರ್ಟ್ ಆದೇಶವನ್ನು ಗೌರವಿಸಿ, ತುಕ್ಕಪ್ಪ ತಂದೆ ಲಾಲಪ್ಪ ಅವರಿಗೆ ಸೇರಿದ 4 ಎಕರೆ 38 ಗುಂಟೆ ಜಮೀನಿನ ಸರ್ವೆ ನಡೆಸಬೇಕು. ಈ ಜಮೀನಿನಲ್ಲಿ ಹಿಂದೆ ಶವಸಂಸ್ಕಾರ ಮಾಡಿರುವ ಒಂದು ಎಕರೆ ಜಾಗವನ್ನು ಹೊರತುಪಡಿಸಿ ಉಳಿದ 3 ಎಕರೆ 38 ಗುಂಟೆ ಜಮೀನನ್ನು ತಮ್ಮ ಕುಟುಂಬದ ಹೆಸರಿಗೆ ಮಾಡಿಕೊಡಬೇಕು. ಜನಸಂಖ್ಯೆ ಆಧರಿಸಿ ಬೇರೆ ಸರ್ಕಾರಿ ಜಮೀನಿನಲ್ಲಿ ಸ್ಮಶಾನಭೂಮಿ ಮಂಜೂರು ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ತಪ್ಪು ಸರ್ವೆ ನಡೆಸಿದ್ದಾರೆ ಎಂದು ಆರೋಪಿಸಿರುವ ಭೂಮಾಪಕ ವಿವೇಕಾನಂದ ಸ್ವಾಮಿ ಅವರನ್ನು ಸೇವೆಯಿಂದ ಅಮಾನತು ಮಾಡಬೇಕು. ವಿವಾದಿತ ಜಮೀನನ್ನು ಸ್ಮಶಾನಕ್ಕಾಗಿ ಬಳಸದೆ, ಬೇರೆ ಸ್ಥಳದಲ್ಲಿ ಸ್ಮಶಾನಭೂಮಿ ಮಂಜೂರು ಮಾಡಬೇಕು ಎಂದು ಅಂಬಾದಾಸ ಸೈನ ಆಗ್ರಹಿಸಿದ್ದಾರೆ.
ಹೈಕೋರ್ಟ್ ಆದೇಶವನ್ನು ಅಧಿಕಾರಿಗಳು ನಿರ್ಲಕ್ಷಿಸಿದರೆ ಮುಂದಿನ ದಿನಗಳಲ್ಲಿ ಉಂಟಾಗುವ ಪರಿಸ್ಥಿತಿಗೆ ಸಂಬಂಧಪಟ್ಟ ಅಧಿಕಾರಿಗಳೇ ಹೊಣೆಗಾರರಾಗಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.



