ಕನಿಷ್ಠ ವೇತನ ಜಾರಿಗೆ ಆಗ್ರಹಿಸಿ ಹಾಸ್ಟೆಲ್ ಗುತ್ತಿಗೆ ನೌಕರರ ಪ್ರತಿಭಟನೆ

ಕಲಬುರಗಿ, ಅ.3- ಕನಿಷ್ಠ ವೇತನ ಜಾರಿಗೊಳಿಸಬೇಕು, ಬಾಕಿ ವೇತನ ಪಾವತಿಸಬೇಕು, ಕೆಲಸದಿಂದ ತೆಗೆದುಹಾಕಿರುವ ನೌಕರರನ್ನು ಪುನಃ ಸೇವೆಗೆ ಮುಂದುವರಿಸಬೇಕು ಹಾಗೂ ತಾತ್ಕಾಲಿಕ ನೇಮಕಾತಿ ಆದೇಶ ನೀಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲೆಗಳ ಹೊರಗುತ್ತಿಗೆ ನೌಕರರು ಶನಿವಾರ ಸಮಾಜ ಕಲ್ಯಾಣ ಇಲಾಖೆಯ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.
ಸಂಘದ ರಾಜ್ಯಾಧ್ಯಕ್ಷ ಭೀಮಶೆಟ್ಟಿ ಯಂಪಳ್ಳಿ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ನೌಕರರು ಹಲವು ದಿನಗಳಿಂದ ಧರಣಿ ಸತ್ಯಾಗ್ರಹ ನಡೆಸುತ್ತಿದ್ದರೂ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾಕಾರರ ಪ್ರಕಾರ, ರಾಜ್ಯದಲ್ಲಿ ಕಳೆದ ಒಂಬತ್ತು ವರ್ಷಗಳಿಂದ ಕನಿಷ್ಠ ವೇತನದಲ್ಲಿ ಯಾವುದೇ ಹೆಚ್ಚಳವಾಗಿಲ್ಲ. ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಸ್ತುತ ವೇತನದಲ್ಲಿ ಜೀವನ ನಿರ್ವಹಣೆ ಕಷ್ಟವಾಗಿದೆ. ಹಾಸ್ಟೆಲ್ ನೌಕರರು ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಅವರು ಹೇಳಿದರು.
ಕಳೆದ ಒಂದು ವರ್ಷದಿಂದ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸುಮಾರು 31 ಸಾವಿರ ಹಾಸ್ಟೆಲ್ ಹಾಗೂ ವಸತಿ ಶಾಲೆಗಳ ಹೊರಗುತ್ತಿಗೆ ನೌಕರರು ಕನಿಷ್ಠ ವೇತನ ಜಾರಿಗೆ ಆಗ್ರಹಿಸಿ ಹೋರಾಟ ನಡೆಸುತ್ತಿದ್ದಾರೆ. ನಿರಂತರ ಹೋರಾಟದ ಹಿನ್ನೆಲೆಯಲ್ಲಿ ಕಳೆದ ಮೇ 22ರಂದು ಕನಿಷ್ಠ ವೇತನ ಜಾರಿಗೆ ಸಂಬಂಧಿಸಿದಂತೆ ಆದೇಶ ಹೊರಡಿಸಲಾಗಿತ್ತು. ಅದರಂತೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳ ವ್ಯಾಪ್ತಿಯಲ್ಲಿ ಮೇ ಮತ್ತು ಜೂನ್ ತಿಂಗಳ ಪರಿಷ್ಕೃತ ವೇತನವನ್ನು ಪಾವತಿಸಲಾಗಿದೆ. ಆದರೆ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯಲ್ಲಿ ಈ ಆದೇಶ ಇನ್ನೂ ಜಾರಿಯಾಗಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಸರ್ಕಾರ ವೇತನ ಪರಿಷ್ಕರಣೆಗೆ ಪುನಃ ಸಮಿತಿ ರಚಿಸಿರುವುದಕ್ಕೂ ನೌಕರರು ಅಸಮಾಧಾನ ವ್ಯಕ್ತಪಡಿಸಿದರು. ಕಳೆದ ಆಗಸ್ಟ್ 8ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಸುಮಾರು 25 ಸಾವಿರ ಕಾರ್ಮಿಕರು ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಕಾರ್ಮಿಕ ಸಚಿವರು ಮನವಿ ಸ್ವೀಕರಿಸಿ, ಸೆಪ್ಟೆಂಬರ್ 15ರಂದು ಸಭೆ ನಡೆಸಿ ಪರಿಷ್ಕೃತ ವೇತನ ಜಾರಿಗೊಳಿಸುವುದಾಗಿ ಭರವಸೆ ನೀಡಿದ್ದರು. ಆದರೆ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ದೂರಿದರು.
ಸಮಾಜ ಕಲ್ಯಾಣ ಇಲಾಖೆ, ಮೊರಾರ್ಜಿ ದೇಸಾಯಿ ಹಾಗೂ ಕಿತ್ತೂರು ರಾಣಿ ಚನ್ನಮ್ಮ ಮತ್ತು ಇಂದಿರಾಗಾಂಧಿ ವಸತಿ ನಿಲಯಗಳ ನೌಕರರಿಗೆ ಮೂರರಿಂದ ನಾಲ್ಕು ತಿಂಗಳ ವೇತನ ಬಾಕಿ ಇದೆ ಎಂದು ಪ್ರತಿಭಟನಾಕಾರರು ತಿಳಿಸಿದರು. ವೇತನ ಪಾವತಿಯಾಗದ ಕಾರಣ ನೌಕರರು ಸಾಲದ ಹೊರೆಯಲ್ಲಿ ಸಿಲುಕಿದ್ದಾರೆ. ಕೆಲವು ನೌಕರರ ವಿರುದ್ಧ ಸುಳ್ಳು ಆರೋಪ ಹೊರಿಸಿ ಕೆಲಸದಿಂದ ತೆಗೆದುಹಾಕಲಾಗುತ್ತಿದೆ ಎಂಬ ಆರೋಪವನ್ನೂ ಅವರು ಮಾಡಿದರು.
ಮೊರಾರ್ಜಿ ದೇಸಾಯಿ ವಸತಿ ನಿಲಯದಲ್ಲಿ ಸುಮಾರು 18 ವರ್ಷ ಸೇವೆ ಸಲ್ಲಿಸಿದ ಐವರು ನೌಕರರನ್ನು ಸುಳ್ಳು ಆರೋಪದಡಿ ಕೆಲಸದಿಂದ ತೆಗೆದುಹಾಕಲಾಗಿದೆ. ಅವರ ಬದಲಿಗೆ ಹೊಸ ನೌಕರರನ್ನು ನೇಮಕ ಮಾಡಿಕೊಳ್ಳುವ ಸಂದರ್ಭದಲ್ಲಿ ಲಂಚ ಪಡೆಯಲಾಗುತ್ತಿದೆ ಎಂಬ ಆರೋಪಗಳೂ ಕೇಳಿಬರುತ್ತಿವೆ. ಕೆಲಸದಿಂದ ತೆಗೆದಿರುವ ನೌಕರರನ್ನು ಪುನಃ ಸೇವೆಗೆ ಸೇರಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಹಾಸ್ಟೆಲ್ಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಅಗತ್ಯ ಸಿಬ್ಬಂದಿಯನ್ನು ನೇಮಿಸಬೇಕು. ಸಿಬ್ಬಂದಿ ಕೊರತೆಯಿಂದ ಹಾಲಿ ನೌಕರರ ಮೇಲಿನ ಕೆಲಸದ ಹೊರೆ ಹೆಚ್ಚಾಗಿದೆ. ಹಿಂದೆ 100 ವಿದ್ಯಾರ್ಥಿಗಳಿಗೆ ಐವರು ಸಿಬ್ಬಂದಿ ಇದ್ದರೆ, ಇದೀಗ ನಾಲ್ವರು ಸಿಬ್ಬಂದಿಯಿಂದಲೇ ಕಾರ್ಯನಿರ್ವಹಿಸಲಾಗುತ್ತಿದೆ ಎಂದು ಅವರು ಹೇಳಿದರು.
2017ರ ನಂತರ ಆರಂಭವಾದ ಕ್ರೈಸ್ತ ವಸತಿ ನಿಲಯಗಳಲ್ಲಿ ಏಳು ಸಿಬ್ಬಂದಿ ನೇಮಕ ಮಾಡಲಾಗಿದ್ದು, ನಾಲ್ವರನ್ನು ಕಡಿತಗೊಳಿಸಲಾಗಿದೆ. ಇದರಿಂದ ಉಳಿದ ನೌಕರರ ಮೇಲೆ ಹೆಚ್ಚುವರಿ ಕೆಲಸದ ಹೊರೆ ಬಿದ್ದಿದೆ. ವಾರಕ್ಕೊಮ್ಮೆ ಕಡ್ಡಾಯ ರಜೆ ನೀಡಬೇಕು ಹಾಗೂ ನೌಕರರ ಸೇವಾ ಷರತ್ತುಗಳನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಮೈಸೂರಿನ ಶಾಪ್ ಏಜೆನ್ಸಿಗೆ ಕಳೆದ ಎರಡು ವರ್ಷಗಳಿಂದ ನೌಕರರಿಗೆ ತಾತ್ಕಾಲಿಕ ನೇಮಕಾತಿ ಆದೇಶ ನೀಡಿಲ್ಲ. ಸಂಬಂಧಪಟ್ಟ ಸಂಸ್ಥೆಯ ಟೆಂಡರ್ ಅವಧಿ ಮುಗಿದಿದ್ದರೂ ಅದೇ ಸಂಸ್ಥೆಯನ್ನು ಮುಂದುವರಿಸಲಾಗಿದೆ. ಈ ಕುರಿತು ವಿವಿಧ ಆರೋಪಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯಲ್ಲಿ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಕೆ. ಹನುಮೇಗೌಡ, ಕೆ. ಪರಶುರಾಮ್, ಮೊಹಮ್ಮದ್ ಜಮೀರೋದ್ದೀನ್, ಮೇಘರಾಜ್ ಕಠಾರೆ, ಹುಲಗಪ್ಪ ಚಲವಾದಿ, ನಾಗರಾಜ್ ಕಟ್ಟಿಮನಿ, ಇಸ್ಮಾಯಿಲ್ ಮೀರಾಸಾಬ್, ದಾವಲಸಾಬ್ ನದಾಫ್, ನಾಗರತ್ನ ಮದನಕರ್, ಕಲ್ಯಾಣಿ ಪೂಜಾರಿ, ರವಿ ಯರಗೋಳ್, ಅಣ್ಣಬಸಪ್ಪ, ನರಸಮ್ಮ ಚಂದನಕೇರಾ, ಶಿವರಾಜ್ ಆಡಕಿ, ನರಸಮ್ಮ ಕೊಂಡಂಪಳ್ಳಿ, ಶಿವಪುತ್ರ ಕೋಗನೂರು, ಬಾಬು ಹೊಸಮನಿ, ಮಾಪಣ್ಣ ಜಾನಕರ್ ಸೇರಿದಂತೆ ಹಲವರು ಭಾಗವಹಿಸಿದ್ದರು.
ಪ್ರತಿಭಟನಾಕಾರರು ಬಳಿಕ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ, ಕನಿಷ್ಠ ವೇತನ ಜಾರಿ, ಬಾಕಿ ವೇತನ ಪಾವತಿ, ಸೇವೆಯಿಂದ ತೆಗೆದ ನೌಕರರ ಮರುನೇಮಕ ಹಾಗೂ ಇಲಾಖೆಯಲ್ಲಿನ ಆರೋಪಗಳ ಕುರಿತು ಸಮಗ್ರ ತನಿಖೆ ನಡೆಸುವಂತೆ ಒತ್ತಾಯಿಸಿದರು.



