ಪಟ್ಟಣ ಪಂಚಾಯಿತಿ ಅಧ್ಯಕ್ಷ–ಉಪಾಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ಗೆಲುವು

ಕಲಬುರಗಿ, ಅ.2- ತಾಲ್ಲೂಕಿನ ಪಟ್ಟಣ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿ ಅಧಿಕಾರದ ಜವಾಬ್ದಾರಿ ವಹಿಸಿಕೊಂಡ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದರು.
ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀಮತಿ ಸಹೀರಾ ಬೇಗಂ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾದ ಶರಣಪ್ಪ ಅವರನ್ನು ಕಾಂಗ್ರೆಸ್ ಮುಖಂಡರು ಸನ್ಮಾನಿಸಿ, ಹಾರ್ದಿಕ ಅಭಿನಂದನೆ ಹಾಗೂ ಶುಭಾಶಯಗಳನ್ನು ಕೋರಿದರು. ಅಧ್ಯಕ್ಷೆ ಸಹೀರಾ ಬೇಗಂ ಅವರ ಪತಿ ಮೆಹಬೂಬ್ ಬೇಗಂ ಅವರಿಗೂ ಮುಖಂಡರು ಅಭಿನಂದನೆ ಸಲ್ಲಿಸಿದರು.
ಕಲಬುರಗಿ ಜಿಲ್ಲಾ ಕಾಂಗ್ರೆಸ್ ಸಮಿತಿ ನೂತನ ಅಧ್ಯಕ್ಷ ಡಾ. ಕಿರಣ್ ದೇಶಮುಖ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೀದರ್ ಲೋಕಸಭಾ ಸದಸ್ಯ ಸಾಗರ್ ಖಂಡ್ರೆ ಅವರ ಸಮುಖದಲ್ಲಿ, ವಿಧಾನ ಪರಿಷತ್ ಸದಸ್ಯ ಜಗದೇವ ಗುತೇದಾರ್ ಅವರ ನೇತೃತ್ವದಲ್ಲಿ ನೂತನ ಅಧ್ಯಕ್ಷ–ಉಪಾಧ್ಯಕ್ಷರನ್ನು ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಕೆಪಿಸಿಸಿ ಉಪಾಧ್ಯಕ್ಷ ಸುಭಾಷ್ ರಾಠೋಡ್, ಕಾಂಗ್ರೆಸ್ ಮುಖಂಡರಾದ ಭೀಮರಾವ್ ಟಿ.ಟಿ., ಮಹಾಂತಪ್ಪ ಸಂಗಾವಿ, ಶರಣಗೌಡ ಪಾಟೀಲ, ರಾಜೇಶ್ ಗುತೇದಾರ್ ಸೇರಿದಂತೆ ಅನೇಕ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ನೂತನ ಅಧ್ಯಕ್ಷ–ಉಪಾಧ್ಯಕ್ಷರ ಆಯ್ಕೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪರಸ್ಪರ ಸಿಹಿ ಹಂಚಿಕೊಂಡು ಸಂಭ್ರಮ ವ್ಯಕ್ತಪಡಿಸಿದರು.



