ಡ್ರಗ್ ಪೆಡ್ಲರ್‌ಗಳಿಗೆ ಖಡಕ್ ಎಚ್ಚರಿಕೆ ನೀಡಿದ ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್.ಡಿ.

ಕಲಬುರಗಿ, ಅ.2- ಮಾದಕ ವಸ್ತುಗಳ ಅಕ್ರಮ ಮಾರಾಟ ಹಾಗೂ ಸೇವನೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕಲಬುರಗಿ ನಗರ ಪೊಲೀಸ್ ಆಯುಕ್ತಾಲಯದ ವತಿಯಿಂದ ಗಾಂಜಾ ಪೆಡ್ಲರ್‌ಗಳ ಪರೇಡ್ ನಡೆಸಲಾಯಿತು. ಯಾವುದೇ ಅಕ್ರಮ ಚಟುವಟಿಕೆಗಳಲ್ಲಿ ತೊಡಗದಂತೆ ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್.ಡಿ. ಅವರು ಖಡಕ್ ಎಚ್ಚರಿಕೆ ನೀಡಿದರು.
ನಗರ ಪೊಲೀಸ್ ಆಯುಕ್ತಾಲಯದ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಕ್ರಮ ಹಾಗೂ ಕಾನೂನುಬಾಹಿರ ಚಟುವಟಿಕೆಗಳ ಮೇಲೆ ನಿಗಾ ವಹಿಸಿ, ಅವುಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಗುರುವಾರ ಪರೇಡ್ ಆಯೋಜಿಸಲಾಗಿತ್ತು. ನಗರ ಪೊಲೀಸ್ ಆಯುಕ್ತಾಲಯದ ವ್ಯಾಪ್ತಿಯ ಕಾನೂನು ಮತ್ತು ಸುವ್ಯವಸ್ಥೆಯ 10 ಪೊಲೀಸ್ ಠಾಣೆಗಳಿಂದ ಒಟ್ಟು 67 ಗಾಂಜಾ ಪೆಡ್ಲರ್‌ಗಳನ್ನು ಪರೇಡ್‌ಗೆ ಹಾಜರುಪಡಿಸಲಾಯಿತು.
ಈ ಸಂದರ್ಭದಲ್ಲಿ 29 ಗಾಂಜಾ ಪೆಡ್ಲರ್‌ಗಳ ವಿರುದ್ಧ ಮುನ್ನೆಚ್ಚರಿಕೆ ಕ್ರಮವಾಗಿ ಪ್ರಕರಣ ದಾಖಲಿಸಲಾಗಿದ್ದು, 19 ಮಂದಿಯಿಂದ ಬಾಂಡ್ ಓವರ್ ಮಾಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.
ಪರೇಡ್‌ನಲ್ಲಿ ಗಾಂಜಾ ಪೆಡ್ಲರ್‌ಗಳನ್ನು ಉದ್ದೇಶಿಸಿ ಮಾತನಾಡಿದ ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್.ಡಿ., ಮಾದಕ ವಸ್ತುಗಳ ಸೇವನೆ ಹಾಗೂ ಮಾರಾಟದಂತಹ ಅಕ್ರಮ ಚಟುವಟಿಕೆಗಳಿಂದ ದೂರವಿದ್ದು, ಸಮಾಜಕ್ಕೆ ಉತ್ತಮ ಕೊಡುಗೆ ನೀಡುವಂತೆ ಸಲಹೆ ನೀಡಿದರು.
ಮಾದಕ ವಸ್ತುಗಳ ಮಾರಾಟವು ವ್ಯಕ್ತಿಯ ಜೀವನದ ಮೇಲೆ ಮಾತ್ರವಲ್ಲದೆ ಕುಟುಂಬ ಹಾಗೂ ಇಡೀ ಸಮಾಜದ ಮೇಲೂ ದುಷ್ಪರಿಣಾಮ ಬೀರುತ್ತದೆ. ಆದ್ದರಿಂದ ಇಂತಹ ಚಟುವಟಿಕೆಗಳಿಂದ ಸಂಪೂರ್ಣವಾಗಿ ದೂರವಿದ್ದು, ಆರೋಗ್ಯಕರ ಹಾಗೂ ಸುಂದರ ಜೀವನ ನಡೆಸಬೇಕು ಎಂದು ಕಿವಿಮಾತು ಹೇಳಿದರು.
ಸಮಾಜದ ಸ್ವಾಸ್ಥ್ಯ ಹದಗೆಡಿಸುವ ಮಾದಕ ವಸ್ತುಗಳ ಮಾರಾಟದಲ್ಲಿ ಮತ್ತೆ ತೊಡಗಿಸಿಕೊಂಡರೆ ಯಾವುದೇ ಮುಲಾಜಿಲ್ಲದೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಡಿಸಿಪಿ ಶ್ರೀಮತಿ ಶಾಲೂ, ಎಸಿಪಿಗಳು, ವಿವಿಧ ಪೊಲೀಸ್ ಠಾಣೆಗಳ ಪಿಐಗಳು ಸೇರಿದಂತೆ ಪೊಲೀಸ್ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.



