ಔಷಧಗಳ ಗುಣಮಟ್ಟದ ಬಗ್ಗೆ ಜಾಗೃತಿ ವಹಿಸಿ: ಧನಂಜಯ ಹತಪಾಕಿ

ಬೀದರ್, ಅ.1- ರೋಗಿಗಳಿಗೆ ಔಷಧ ನೀಡುವಾಗ ಔಷಧ ತಜ್ಞರು ಔಷಧಗಳ ಗುಣಮಟ್ಟದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು ಎಂದು ಸಹಾಯಕ ಔಷಧ ನಿಯಂತ್ರಣಾಧಿಕಾರಿ ಧನಂಜಯ ಹತಪಾಕಿ ಸಲಹೆ ನೀಡಿದರು.
ನಗರದ ಜನವಾಡ ರಸ್ತೆಯ ಬಸವೇಶ್ವರ ಬಡಾವಣೆಯಲ್ಲಿರುವ ಫಾರ್ಮಾ ಭವನದಲ್ಲಿ ಬುಧವಾರ ಆಹಾರ ಸುರಕ್ಷತೆ ಮತ್ತು ಔಷಧ ಮಂಡಳಿ ಹಾಗೂ ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ ವತಿಯಿಂದ ಆಯೋಜಿಸಿದ್ದ ವಿಶ್ವ ಔಷಧ ತಜ್ಞರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ರೋಗಿಗಳು ಹಾಗೂ ಸಾರ್ವಜನಿಕರ ಸುರಕ್ಷತೆಯೇ ಔಷಧ ತಜ್ಞರ ಮೊದಲ ಆದ್ಯತೆಯಾಗಬೇಕು. ವೈದ್ಯರ ಚೀಟಿ ಇಲ್ಲದೆ ರೋಗಿಗಳಿಗೆ ಔಷಧಗಳನ್ನು ನೀಡಬಾರದು. ಔಷಧಗಳ ಬಳಕೆ, ಪ್ರಮಾಣ ಹಾಗೂ ಗುಣಮಟ್ಟದ ಕುರಿತು ಸಾರ್ವಜನಿಕರಿಗೆ ಅಗತ್ಯ ಮಾಹಿತಿ ನೀಡಬೇಕು ಎಂದು ಹೇಳಿದರು.
ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ ಅಧ್ಯಕ್ಷ ಬಸವರಾಜ ಪಾಟೀಲ ಹಾರೂಗೇರಿ ಅಧ್ಯಕ್ಷತೆ ವಹಿಸಿದ್ದರು. ಮಾತನಾಡಿದ ಅವರು, ವೈದ್ಯರಷ್ಟೇ ಔಷಧ ತಜ್ಞರ ಪಾತ್ರವೂ ಮಹತ್ವದ್ದಾಗಿದೆ. ವೈದ್ಯರು ರೋಗಿಗಳನ್ನು ತಪಾಸಣೆ ನಡೆಸಿ ಔಷಧ ಬರೆದುಕೊಟ್ಟ ನಂತರ, ಅದನ್ನು ಹೇಗೆ ಹಾಗೂ ಯಾವ ಪ್ರಮಾಣದಲ್ಲಿ ತೆಗೆದುಕೊಳ್ಳಬೇಕು ಎಂಬುದರ ಕುರಿತು ರೋಗಿಗಳಿಗೆ ಮಾರ್ಗದರ್ಶನ ನೀಡುವ ಜವಾಬ್ದಾರಿ ಔಷಧ ತಜ್ಞರ ಮೇಲಿದೆ ಎಂದು ಹೇಳಿದರು.
ಕರ್ನಾಟಕ ರಾಜ್ಯ ಔಷಧ ವ್ಯಾಪಾರಿಗಳ ಸಂಘದ ಉಪಾಧ್ಯಕ್ಷ ಶಿವರಾಜ ಪಾಟೀಲ ಮಾತನಾಡಿ, ಔಷಧ ತಜ್ಞರ ಮಾನ್ಯತೆ ನವೀಕರಣದ ಅವಧಿಯನ್ನು ಒಂದು ವರ್ಷದಿಂದ ಐದು ವರ್ಷಕ್ಕೆ ವಿಸ್ತರಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯ ಸರ್ಕಾರದ ಆಹಾರ ಸುರಕ್ಷತೆ ಮತ್ತು ಔಷಧ ಮಂಡಳಿ ವತಿಯಿಂದ ಹುಮನಾಬಾದ್ನ ಡೆಕ್ಕನ್ ಮೆಡಿಕಲ್ನ ಮೊಹಮ್ಮದ್ ಇಲಿಯಾಸ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಳೆದ ವರ್ಷ ಬೀದರ್ನ ಮೋದಿ ಮೆಡಿಕಲ್ನ ಶಶಿಕಾಂತ ಮೋದಿ ಅವರಿಗೆ ಈ ಪ್ರಶಸ್ತಿ ಲಭಿಸಿತ್ತು.
ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ ವತಿಯಿಂದ 20 ಔಷಧ ತಜ್ಞರಿಗೆ ಉತ್ತಮ ಔಷಧ ತಜ್ಞ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ ಉಪಾಧ್ಯಕ್ಷ ಎಂ.ಡಿ. ಖಾಲೀದ್ ಷರೀಫ್, ಕಾರ್ಯದರ್ಶಿ ರಾಜೇಂದ್ರ ನಮೋಶಿ, ಸಹ ಕಾರ್ಯದರ್ಶಿ ಅಬ್ದುಲ್ ಖದೀರ್, ಸಂಘಟನಾ ಕಾರ್ಯದರ್ಶಿ ಶಿವರಾಜ ರಾಗಾ, ಖಜಾಂಚಿ ಸಿದ್ದರಾಮಪ್ಪ ಆನಂದೆ, ದೂರು ವಿಭಾಗದ ಅಧ್ಯಕ್ಷ ಎಹತೇಶಾಮುಲ್ ಹಕ್, ಸದಸ್ಯರಾದ ಮಾದಪ್ಪ ಶಿರಶೆಟ್ಟಿ, ಸಾಯಿಬಣ್ಣ, ಸುರೇಶ್ ಬಿರಾದಾರ, ಬಸವರಾಜ ಮಡಕಿ, ಎಂ.ಡಿ. ಶಮಿ, ಮಲ್ಲಿಕಾರ್ಜುನ, ನವನಾಥ ಬಿರಾದಾರ, ಸಂತೋಷ ಸ್ವಾಮಿ, ಕಿರಣ್, ಬಸವರಾಜ ವೈರಾಗಿ, ದತ್ತಾತ್ರೇಯ ಕದಂ, ಮಾಣಿಕ ಕರಂಜಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.



