ಜಿಲ್ಲಾಸುದ್ದಿ

ಯುವಕನ ಅಪಹರಣ, ಕೊಲೆ: ಐವರು ಆರೋಪಿಗಳ ಬಂಧನ

ಬೀದರ್, ಅ.1- ಯುವಕನೊಬ್ಬನನ್ನು ಅಪಹರಿಸಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಭಾಲ್ಕಿ ಪಟ್ಟಣದಲ್ಲಿ ನಡೆದಿದೆ. ಫೈನಾನ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ 21 ವರ್ಷದ ಸುದರ್ಶನ್ ರಟಕಲ್ ಕೊಲೆಯಾದ ಯುವಕ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾಗ್ಯವಾನ್, ವಿಠಲ್, ಸಚಿನ್, ಸಾಯಿ ಕಾಂಬ್ಳೆ ಹಾಗೂ ಆದಿತ್ಯ ಕಾಂಬ್ಳೆ ಎಂಬ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಭಾಲ್ಕಿ ಪಟ್ಟಣದ ಮಾಸುಮಪಾಶಾ ಕಾಲೋನಿಯಲ್ಲಿ ಯುವಕನನ್ನು ಐವರು ಆರೋಪಿಗಳು ಅಪಹರಿಸಿದ್ದರು ಎನ್ನಲಾಗಿದೆ. ಬಳಿಕ ಮನಬಂದಂತೆ ಹಲ್ಲೆ ನಡೆಸಿ ಕೊಲೆ ಮಾಡಿದ್ದು, ಮೃತದೇಹವನ್ನು ಕಾಡ್ಯಾಳ ಗ್ರಾಮದ ಬಳಿಯ ರೈಲ್ವೆ ಹಳಿಯ ಸಮೀಪ ತಂದು ಎಸೆದು ಪರಾರಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ವಿಷಯ ತಿಳಿದ ತಕ್ಷಣ ರೈಲ್ವೆ ಪೊಲೀಸರು ಹಾಗೂ ಭಾಲ್ಕಿ ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಜಂಟಿಯಾಗಿ ಪರಿಶೀಲನೆ ನಡೆಸಿದರು. ಯುವಕನ ಕೊಲೆಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಿ ಸಾರ್ವಜನಿಕರು ಪೊಲೀಸ್ ಠಾಣೆ ಎದುರು ಜಮಾಯಿಸಿದ್ದರು.

ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಭಾಲ್ಕಿ ನಗರ ಪೊಲೀಸರು, ಕಾರ್ಯಾಚರಣೆ ನಡೆಸಿ ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಯುವಕನನ್ನು ಅಪಹರಿಸಿ ಕೊಲೆ ಮಾಡಿದ ಆರೋಪದಡಿ ಐವರ ವಿರುದ್ಧ ಭಾಲ್ಕಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯುವಕನ ಕೊಲೆಗೆ ನಿಖರ ಕಾರಣವೇನು ಎಂಬುದರ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಕೊಲೆಗೆ ಕಾರಣ, ಘಟನೆಗೆ ಸಂಬಂಧಿಸಿದ ಸಂಪೂರ್ಣ ಹಿನ್ನೆಲೆ ಹಾಗೂ ಆರೋಪಿಗಳ ಪಾತ್ರದ ಕುರಿತು ತನಿಖೆಯ ನಂತರ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ.

sswnews

https://sswnewskannada.com

Related Articles

Leave a Reply

Your email address will not be published. Required fields are marked *

Back to top button