ಕತ್ತು ಹಿಸುಕಿ ಪತ್ನಿಯ ಕೊಲೆ ಆರೋಪ ಶರಣಸಿರಸಗಿಯಲ್ಲಿ ಘಟನೆ; ಪತಿ ವಿರುದ್ಧ ತಂದೆಯಿಂದ ದೂರು

ಕಲಬುರಗಿ, ಸೆ.30: ತಾಲ್ಲೂಕಿನ ಶರಣಸಿರಸಗಿ ಗ್ರಾಮದಲ್ಲಿ ಮಹಿಳೆಯೊಬ್ಬರು ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಪತಿಯೇ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎಂದು ಆರೋಪಿಸಿ ಮೃತಳ ತಂದೆ ದೂರು ನೀಡಿದ್ದಾರೆ.
ಶರಣಸಿರಸಗಿ ಗ್ರಾಮದ ರೇಣುಕಾ ಎಂಬುವವರ ಶವ ಮಲಗುವ ಕೋಣೆಯ ಹಾಸಿಗೆ ಮೇಲೆ ಪತ್ತೆಯಾಗಿದೆ. ಆಕೆಯ ಪತಿ ಸಂಜೀವಕುಮಾರ ಮಹಾದೇವಪ್ಪ ಶಿಂಧೆ ಅವರು ಶೀಲ ಶಂಕಿಸಿ ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಿ ಮೃತಳ ತಂದೆ, ಆಳಂದ ತಾಲ್ಲೂಕಿನ ಸಂಗೋಳಗಿ (ಸಿ) ಗ್ರಾಮದ ನಿವಾಸಿ ಬಸವರಾಜ ರುಕ್ಕಪ್ಪ ಭಳ್ಳಿ ಅವರು ದೂರು ಸಲ್ಲಿಸಿದ್ದಾರೆ.
ರೇಣುಕಾ ಅವರಿಗೆ ಸುಮಾರು 18 ವರ್ಷಗಳ ಹಿಂದೆ ಶರಣಸಿರಸಗಿ ಗ್ರಾಮದ ಸಂಜೀವಕುಮಾರ ಮಹಾದೇವಪ್ಪ ಶಿಂಧೆ ಅವರೊಂದಿಗೆ ವಿವಾಹವಾಗಿತ್ತು. ದಂಪತಿಗೆ ಒಬ್ಬ ಪುತ್ರ ಹಾಗೂ ಒಬ್ಬ ಪುತ್ರಿ ಇದ್ದಾರೆ. ಮದುವೆಯ ಸಂದರ್ಭದಲ್ಲಿ ಎರಡು ತೊಲೆ ಚಿನ್ನವನ್ನು ವರದಕ್ಷಿಣೆಯಾಗಿ ನೀಡಲಾಗಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಮದುವೆಯಾದ ಆರಂಭದಲ್ಲಿ ಸುಮಾರು ಒಂದು ವರ್ಷ ದಂಪತಿ ಅನ್ಯೋನ್ಯವಾಗಿದ್ದರು. ಬಳಿಕ ಪತಿ ಶೀಲ ಶಂಕಿಸಿ ರೇಣುಕಾಗೆ ಕಿರುಕುಳ ನೀಡಲು ಆರಂಭಿಸಿದ್ದಾನೆ ಎಂದು ಆರೋಪಿಸಲಾಗಿದೆ. ತಂದೆಯ ಮನೆಯಿಂದ ಹಣ ತರುವಂತೆ ಒತ್ತಾಯಿಸಿ ಹಲ್ಲೆ ನಡೆಸುತ್ತಿದ್ದನೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಕಿರುಕುಳ ಮುಂದುವರಿದ ಹಿನ್ನೆಲೆಯಲ್ಲಿ ಆಕೆಯ ಕುಟುಂಬದವರು ಪತಿಗೆ ಕಾರನ್ನೂ ಕೊಡಿಸಿದ್ದರು. ಆದರೂ ಕಿರುಕುಳ ನಿಂತಿರಲಿಲ್ಲ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಪತಿಯ ಸಹೋದರ ರಮೇಶ್ ಶಿಂಧೆ, ಅಕ್ಕ ಅಂಬಿಕಾ ಹಾಗೂ ರಮೇಶ್ ಅವರ ಪುತ್ರ ರೋಹನ್ ಅವರು ಕೂಡ ಕಿರುಕುಳಕ್ಕೆ ಪ್ರಚೋದನೆ ನೀಡುತ್ತಿದ್ದರು ಎಂದು ಮೃತಳ ತಂದೆ ಆರೋಪಿಸಿದ್ದಾರೆ.
ಪತಿಯ ಮನೆಯವರ ಕಿರುಕುಳದಿಂದ ಬೇಸತ್ತ ರೇಣುಕಾ ಸುಮಾರು ಒಂದೂವರೆ ವರ್ಷಗಳ ಹಿಂದೆ ತವರು ಮನೆಗೆ ಬಂದಿದ್ದರು. ನಾಲ್ಕು ತಿಂಗಳ ಹಿಂದೆ ಅಳಿಯ ಸಂಜೀವಕುಮಾರ ಮಾವನ ಮನೆಗೆ ಬಂದು, ಪತ್ನಿಯನ್ನು ಚೆನ್ನಾಗಿ ನೋಡಿಕೊಳ್ಳುವುದಾಗಿ ಭರವಸೆ ನೀಡಿ ತನ್ನೂರಿಗೆ ಕರೆದುಕೊಂಡು ಹೋಗಿದ್ದನು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಸೆ.28ರಂದು ದಂಪತಿ ನಡುವೆ ಜಗಳ ನಡೆದಿದ್ದು, ಬಳಿಕ ರೇಣುಕಾ ಅಸಹಜವಾಗಿ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಮಲಗುವ ಕೋಣೆಯ ಹಾಸಿಗೆ ಮೇಲೆ ಆಕೆಯ ಶವ ಪತ್ತೆಯಾಗಿದೆ.
ಮೃತಳ ತಂದೆ ಪತಿಯ ವಿರುದ್ಧ ಶಂಕೆ ವ್ಯಕ್ತಪಡಿಸಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.



