ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಅಜಯ್ ಸಿಂಗ್ ಆಗ್ರಹ

ಕಲಬುರಗಿ, ಸೆ.30: ಚುನಾವಣಾ ಆಯೋಗದ ಕಾರ್ಯನಿರ್ವಹಣೆ ಹಾಗೂ ನಿರ್ಧಾರ ಪ್ರಕ್ರಿಯೆ ಕುರಿತು ಸಾರ್ವಜನಿಕ ವಲಯದಲ್ಲಿ ಪ್ರಶ್ನೆಗಳು ಎದ್ದಿರುವ ಹಿನ್ನೆಲೆಯಲ್ಲಿ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ಜನತೆಗೆ ಸ್ಪಷ್ಟ ಉತ್ತರ ನೀಡಬೇಕು ಹಾಗೂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ. ಅಜಯ್ ಧರಂ ಸಿಂಗ್ ಆಗ್ರಹಿಸಿದರು.
ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಚುನಾವಣಾ ಆಯೋಗದಂತಹ ಸಂವಿಧಾನಾತ್ಮಕ ಸಂಸ್ಥೆಯ ಕಾರ್ಯನಿರ್ವಹಣೆಯಲ್ಲಿ ಪಾರದರ್ಶಕತೆ, ಒಮ್ಮತ ಮತ್ತು ಸಾರ್ವಜನಿಕ ವಿಶ್ವಾಸ ಅತ್ಯಂತ ಮುಖ್ಯ ಎಂದರು.
ಚುನಾವಣಾ ಆಯೋಗದ ನಿರ್ಧಾರ ಪ್ರಕ್ರಿಯೆ ಕುರಿತು ಪ್ರಶ್ನೆಗಳು ಎದುರಾದಾಗ ಜನತೆಗೆ ಸ್ಪಷ್ಟನೆ ನೀಡುವುದು ಮುಖ್ಯ ಚುನಾವಣಾ ಆಯುಕ್ತರ ಜವಾಬ್ದಾರಿ. ಇದು ಯಾವುದಾದರೂ ಒಂದು ಪಕ್ಷಕ್ಕೆ ಸಂಬಂಧಿಸಿದ ಪ್ರಶ್ನೆಯಲ್ಲ; ಚುನಾವಣಾ ಪ್ರಕ್ರಿಯೆಯ ಮೇಲಿನ ಸಾರ್ವಜನಿಕ ವಿಶ್ವಾಸಕ್ಕೆ ಸಂಬಂಧಿಸಿದ ವಿಷಯವಾಗಿದೆ ಎಂದು ಹೇಳಿದರು.
ಇತ್ತೀಚಿನ ಮಾಧ್ಯಮ ವರದಿಗಳಲ್ಲಿ ಚುನಾವಣಾ ಆಯೋಗದ ಇಬ್ಬರು ಚುನಾವಣಾ ಆಯುಕ್ತರು ಕೆಲವು ಕ್ರಮಗಳ ಕುರಿತು ಆಕ್ಷೇಪ ವ್ಯಕ್ತಪಡಿಸಿರುವುದಾಗಿ ವರದಿಯಾಗಿದೆ. ಮತ್ತೊಂದೆಡೆ, ಚುನಾವಣಾ ಆಯೋಗವು ತನ್ನ ನಿರ್ಧಾರಗಳು ಪೂರ್ಣ ಆಯೋಗದ ಒಮ್ಮತದ ತೀರ್ಮಾನಗಳಾಗಿವೆ ಹಾಗೂ ಆಂತರಿಕ ಭಿನ್ನಾಭಿಪ್ರಾಯಗಳು ಚರ್ಚಾ ಪ್ರಕ್ರಿಯೆಯ ಭಾಗವಾಗಿವೆ ಎಂದು ಸ್ಪಷ್ಟಪಡಿಸಿದೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾವುದೇ ಸಂಸ್ಥೆಯೂ ಸಾರ್ವಜನಿಕ ಪ್ರಶ್ನೆಗಳಿಗೆ ಮೀರಿದುದಲ್ಲ. ಜನರು ಕೇಳುತ್ತಿರುವ ಪ್ರಶ್ನೆಗಳಿಗೆ ಉತ್ತರ ದೊರೆಯಬೇಕು ಮತ್ತು ಚುನಾವಣಾ ಪ್ರಕ್ರಿಯೆಯ ಮೇಲಿನ ವಿಶ್ವಾಸಕ್ಕೆ ಧಕ್ಕೆಯಾಗದಂತೆ ಆಯೋಗ ಕಾರ್ಯನಿರ್ವಹಿಸಬೇಕು ಎಂದು ಅಜಯ್ ಸಿಂಗ್ ಹೇಳಿದರು.
ಚುನಾವಣಾ ಆಯೋಗದ ಮೇಲಿನ ವಿಶ್ವಾಸವೇ ಪ್ರಜಾಪ್ರಭುತ್ವದ ವಿಶ್ವಾಸಾರ್ಹತೆಯ ಪ್ರಮುಖ ಆಧಾರವಾಗಿದೆ. ಆ ವಿಶ್ವಾಸ ಉಳಿಯಬೇಕಾದರೆ ಆಯೋಗದ ನಿರ್ಧಾರಗಳು ಪಾರದರ್ಶಕವಾಗಿರಬೇಕು ಹಾಗೂ ಉದ್ಭವಿಸಿರುವ ಪ್ರಶ್ನೆಗಳಿಗೆ ಸಾರ್ವಜನಿಕವಾಗಿ ಸ್ಪಷ್ಟನೆ ದೊರೆಯಬೇಕು ಎಂದು ಅವರು ಒತ್ತಾಯಿಸಿದರು.
ಈ ಹಿನ್ನೆಲೆಯಲ್ಲಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂಬುದು ತಮ್ಮ ಆಗ್ರಹವಾಗಿದೆ ಎಂದು ಅಜಯ್ ಸಿಂಗ್ ತಿಳಿಸಿದರು.



