ಜಿಲ್ಲಾಸುದ್ದಿ

ವಿವಿಜಿ ರಾಮ್‌ಜಿ ಹೊರಗುತ್ತಿಗೆ ನೌಕರರಿಗೆ 5 ತಿಂಗಳ ಬಾಕಿ ವೇತನ: ತಕ್ಷಣ ಪಾವತಿಗೆ ಆಗ್ರಹ

ಕಲಬುರಗಿ, ಸೆ.30: ವಿವಿಜಿ ರಾಮ್‌ಜಿ ಯೋಜನೆ ಅನುಷ್ಠಾನದಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಹೊರಗುತ್ತಿಗೆ ನೌಕರರಿಗೆ ಕಳೆದ ಐದು ತಿಂಗಳಿನಿಂದ ವೇತನ ಪಾವತಿಯಾಗದೆ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಾಕಿ ಇರುವ ಐದು ತಿಂಗಳ ವೇತನದ ಜತೆಗೆ ಕಳೆದ 16 ತಿಂಗಳ ಪ್ರಯಾಣ ಭತ್ಯೆಯನ್ನೂ ತಕ್ಷಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ವಿವಿಜಿ ರಾಮ್‌ಜಿ ಜಿಲ್ಲಾ ಸಂಘದ ನೇತೃತ್ವದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಸಂಕನೂರು ಅವರಿಗೆ ಮನವಿ ಸಲ್ಲಿಸಲಾಯಿತು.

ಜಿಲ್ಲೆಯ ವಿವಿಧ ತಾಲ್ಲೂಕುಗಳು ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ನಿಯೋಜನೆಗೊಂಡಿರುವ ನೌಕರರು ಸಾರ್ವಜನಿಕ ಸೇವೆ ಹಾಗೂ ಆಡಳಿತಾತ್ಮಕ ಕೆಲಸಗಳನ್ನು ನಿರ್ವಹಿಸುತ್ತಿದ್ದಾರೆ. ಮೇ, ಜೂನ್, ಜುಲೈ, ಆಗಸ್ಟ್ ಹಾಗೂ ಸೆಪ್ಟೆಂಬರ್ ತಿಂಗಳ ವೇತನ ಈವರೆಗೆ ಪಾವತಿಯಾಗಿಲ್ಲ ಎಂದು ಸಂಘದ ಪದಾಧಿಕಾರಿಗಳು ತಿಳಿಸಿದರು.

ಸರ್ಕಾರ ಹಾಗೂ ಇಲಾಖೆಯ ನಿಯಮಗಳಿಗೆ ಬದ್ಧವಾಗಿ ಕರ್ತವ್ಯ ನಿರ್ವಹಿಸುತ್ತಿದ್ದರೂ ಸಕಾಲದಲ್ಲಿ ವೇತನ ಪಾವತಿಯಾಗದಿರುವುದು ನೌಕರರನ್ನು ಸಂಕಷ್ಟಕ್ಕೆ ದೂಡಿದೆ. ಕರ್ತವ್ಯದ ನಿಮಿತ್ತ ಗ್ರಾಮಗಳಿಗೆ ಭೇಟಿ ನೀಡಲು ತಗಲುವ ಕಳೆದ 16 ತಿಂಗಳ ಪ್ರಯಾಣ ಭತ್ಯೆಯೂ ಬಾಕಿ ಉಳಿದಿದ್ದು, ಅನೇಕ ನೌಕರರು ತಮ್ಮ ಸ್ವಂತ ಹಣದಿಂದಲೇ ಕ್ಷೇತ್ರಮಟ್ಟದಲ್ಲಿ ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ.

ಹಲವು ತಿಂಗಳಿಂದ ಮಾಸಿಕ ವೇತನವಿಲ್ಲದೆ ಕರ್ತವ್ಯ ನಿರ್ವಹಿಸುತ್ತಿರುವುದರಿಂದ ನೌಕರರ ಕುಟುಂಬಗಳು ಆರ್ಥಿಕ ಸಂಕಷ್ಟ ಎದುರಿಸುತ್ತಿವೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿರುವ ಸಂದರ್ಭದಲ್ಲಿ ಮನೆ ಬಾಡಿಗೆ ಪಾವತಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಮಕ್ಕಳ ಶಾಲಾ-ಕಾಲೇಜು ಶುಲ್ಕ ಪಾವತಿಸಲು ಹಣದ ಕೊರತೆ ಎದುರಾಗಿದೆ. ದಿನನಿತ್ಯದ ಆಹಾರ ಸಾಮಗ್ರಿ, ಹಾಲು, ವಿದ್ಯುತ್ ಬಿಲ್ ಹಾಗೂ ತುರ್ತು ವೈದ್ಯಕೀಯ ವೆಚ್ಚಗಳನ್ನು ಭರಿಸುವುದಕ್ಕೂ ಕಷ್ಟವಾಗುತ್ತಿದೆ ಎಂದು ನೌಕರರು ಅಳಲು ತೋಡಿಕೊಂಡರು.

ಸಾಲದ ಮೊರೆ ಹೋಗಿ ಕುಟುಂಬ ನಿರ್ವಹಣೆ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಸತತವಾಗಿ ಸಂಬಳ ವಿಳಂಬವಾಗುತ್ತಿರುವುದರಿಂದ ನೌಕರರು ಮತ್ತಷ್ಟು ಆರ್ಥಿಕ ಹೊರೆಯನ್ನು ಎದುರಿಸುವಂತಾಗಿದೆ. ಸಾಂಪ್ರದಾಯಿಕ ಹಬ್ಬಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಕುಟುಂಬದ ಅಗತ್ಯ ವೆಚ್ಚಗಳನ್ನು ನಿರ್ವಹಿಸಲು ಹಣದ ಅವಶ್ಯಕತೆ ಹೆಚ್ಚಾಗಿದೆ. ವೇತನವಿಲ್ಲದೆ ಹಬ್ಬಗಳನ್ನು ಆಚರಿಸುವುದಿರಲಿ, ನಿತ್ಯದ ಊಟಕ್ಕೂ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸಂಘದ ಪದಾಧಿಕಾರಿಗಳು ಹೇಳಿದರು.

ಜಿಲ್ಲಾ ಪಂಚಾಯಿತಿ ಆಡಳಿತವು ನೌಕರರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಸಂಬಂಧಪಟ್ಟ ಅನುಷ್ಠಾನ ಅಧಿಕಾರಿಗಳು ಹಾಗೂ ಸಂಸ್ಥೆಗಳಿಗೆ ಸ್ಪಷ್ಟ ನಿರ್ದೇಶನ ನೀಡಬೇಕು. ಮಾನವೀಯ ನೆಲೆಯಲ್ಲಿ ಬಾಕಿ ಇರುವ ಐದು ತಿಂಗಳ ಸಂಪೂರ್ಣ ವೇತನ ಹಾಗೂ 16 ತಿಂಗಳ ಪ್ರಯಾಣ ಭತ್ಯೆಯನ್ನು ಯಾವುದೇ ವಿಳಂಬವಿಲ್ಲದೆ ಬಿಡುಗಡೆಗೊಳಿಸಿ ನೌಕರರ ಹಿತರಕ್ಷಣೆ ಮಾಡಬೇಕು ಎಂದು ಸಂಘ ಒತ್ತಾಯಿಸಿತು.

ಮನವಿ ಸ್ವೀಕರಿಸಿದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಸಂಕನೂರು ಅವರು, ಈ ಕುರಿತು ಪರಿಶೀಲನೆ ನಡೆಸಿ ನಿಯಮಾನುಸಾರ ಬಾಕಿ ಮೊತ್ತವನ್ನು ಶೀಘ್ರವಾಗಿ ಪಾವತಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ವಿವಿಜಿ-ರಾಮ್‌ಜಿ ಯೋಜನೆ ಜಿಲ್ಲಾ ಸಂಘದ ಅಧ್ಯಕ್ಷ ಜಗದೀಶ್ ಎಸ್. ಮೇಗಪ್ಟಿ, ಉಪಾಧ್ಯಕ್ಷ ಜ್ಯೋತಿ ಸಾಗರ, ಇಫ್ರಾನ್ ಜಾಗೀರದಾರ, ಸಚಿನ್ ಲೊಂಡೆ, ರಾಜ್ಯ ಮಟ್ಟದ ಪ್ರತಿನಿಧಿ ಅನಿಲ್ ರಾಠೋಡ್, ಖಜಾಂಚಿ ಸಂದೀಪ್ ಪಾಟೀಲ, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ವಿವಿಧ ಸಂಯೋಜಕರು, ತಾಂತ್ರಿಕ ಸಹಾಯಕರು ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಗೂ ನೌಕರರು ಉಪಸ್ಥಿತರಿದ್ದರು.

sswnews

https://sswnewskannada.com

Related Articles

Leave a Reply

Your email address will not be published. Required fields are marked *

Back to top button