ಜಿಲ್ಲಾಸುದ್ದಿ

ಚಿಟ್ಟೆ ಸಂರಕ್ಷಣಾ ಜಾಗೃತಿ ಕಾರ್ಯಕ್ರಮದಲ್ಲಿ ವಿಜಯಕುಮಾರ್ ಬಡಿಗೇರ್

ಚಿತ್ತಾಪುರ, ಸೆ.30: ಚಿಟ್ಟೆಗಳು ಪ್ರಕೃತಿಯ ಅತ್ಯಂತ ಸುಂದರ ಹಾಗೂ ಆಕರ್ಷಕ ಕೀಟಗಳಾಗಿದ್ದು, ಪರಿಸರ ಸಮತೋಲನ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಪ್ರಾದೇಶಿಕ ಅರಣ್ಯ ವಲಯಾಧಿಕಾರಿ ವಿಜಯಕುಮಾರ್ ಬಡಿಗೇರ್ ಹೇಳಿದರು.

ತಾಲ್ಲೂಕಿನ ಗುಂಡಗುತಿ ಬಳಿಯ ಲುಂಬಿನಿ ಚಿಟ್ಟೆ ಉದ್ಯಾನದಲ್ಲಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘ, ಶರಣಬಸವೇಶ್ವರ ಕಾಲೇಜು ಆಫ್ ಸೈನ್ಸ್ ಹಾಗೂ ಪ್ರಾದೇಶಿಕ ಅರಣ್ಯ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಚಿಟ್ಟೆಗಳ ವೀಕ್ಷಣೆ ಮತ್ತು ಸಂರಕ್ಷಣೆ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಚಿಟ್ಟೆಗಳು ಕೇವಲ ಪ್ರಕೃತಿಯ ಸೌಂದರ್ಯವನ್ನು ಹೆಚ್ಚಿಸುವ ಜೀವಿಗಳಲ್ಲ. ಅವು ಸಸ್ಯಗಳು ಮತ್ತು ಬೆಳೆಗಳ ಪರಾಗಸ್ಪರ್ಶಕ್ಕೆ ನೆರವಾಗುವ ಪ್ರಮುಖ ಜೀವಿಗಳಾಗಿದ್ದು, ಪರಿಸರದ ಆರೋಗ್ಯದ ಪ್ರಮುಖ ಸೂಚಕಗಳಾಗಿವೆ ಎಂದು ತಿಳಿಸಿದರು.

ಇತ್ತೀಚಿನ ದಿನಗಳಲ್ಲಿ ಚಿಟ್ಟೆಗಳ ಸಂಖ್ಯೆಯಲ್ಲಿ ಇಳಿಕೆಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಚಿಟ್ಟೆಗಳ ಸಂರಕ್ಷಣೆಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಗಿಡಮೂಲಿಕೆ ಹಾಗೂ ಹೂವಿನ ಸಸ್ಯಗಳನ್ನು ಬೆಳೆಸಬೇಕು. ಕೃಷಿಯಲ್ಲಿ ರಾಸಾಯನಿಕಗಳ ಬಳಕೆಯನ್ನು ಕಡಿಮೆ ಮಾಡುವ ಮೂಲಕ ಚಿಟ್ಟೆಗಳು ಸೇರಿದಂತೆ ಇತರ ಜೀವಿಗಳ ಸಂರಕ್ಷಣೆಗೆ ಪ್ರತಿಯೊಬ್ಬರೂ ಸಹಕರಿಸಬೇಕು ಎಂದು ಅವರು ಸಲಹೆ ನೀಡಿದರು.

ಚಿಟ್ಟೆಗಳು ಪ್ರಕೃತಿಯ ಸೌಂದರ್ಯದ ಪ್ರತೀಕವಾಗಿದ್ದು, ಪರಿಸರ ಸಮತೋಲನ ಕಾಪಾಡುವಲ್ಲಿ ಅವುಗಳ ಪಾತ್ರ ಮಹತ್ವದ್ದಾಗಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಲ್ಲಿ ಚಿಟ್ಟೆಗಳ ಸಂರಕ್ಷಣೆ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ವಿಜಯಕುಮಾರ್ ಬಡಿಗೇರ್ ಹೇಳಿದರು.

ಕಾರ್ಯಕ್ರಮದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಚಿಟ್ಟೆಗಳ ವಿವಿಧ ಪ್ರಭೇದಗಳನ್ನು ವೀಕ್ಷಿಸಿ, ಅವುಗಳ ಜೀವನಕ್ರಮ ಹಾಗೂ ಪರಿಸರದಲ್ಲಿ ಅವುಗಳ ಮಹತ್ವದ ಕುರಿತು ಮಾಹಿತಿ ಪಡೆದರು.

ಅರಣ್ಯ ಇಲಾಖೆಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುನಿಲ್ ಕುಮಾರ್ ಚವಾಣ್, ಉಪ ವಲಯ ಅರಣ್ಯಾಧಿಕಾರಿ ಅನಿಲ್ ಕುಮಾರ್, ಬೀಟ್ ಅರಣ್ಯ ಪಾಲಕ ಶ್ರೀಕಾಂತ್, ಅರಣ್ಯ ಸಿಬ್ಬಂದಿಗಳಾದ ನಾಗೇಶ್, ಸಿದ್ದು, ಜಾಫರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

sswnews

https://sswnewskannada.com

Related Articles

Leave a Reply

Your email address will not be published. Required fields are marked *

Back to top button