ಜಿಲ್ಲಾಸುದ್ದಿ

ಪರಿಶಿಷ್ಟರ ಒಳಮೀಸಲಾತಿ ಆದೇಶ ವಿರೋಧಿಸಿ ಅ.2ರಂದು ಮೌನ ಪ್ರತಿಭಟನೆ

ಕಲಬುರಗಿ, ಸೆ.30: ಪರಿಶಿಷ್ಟ ಜಾತಿಗಳ ಒಳಮೀಸಲಾತಿಗೆ ಸಂಬಂಧಿಸಿದ ಹೊಸ ಆದೇಶವನ್ನು ವಿರೋಧಿಸಿ ಅಕ್ಟೋಬರ್ 2ರಂದು ನಡೆಯಲಿರುವ ಮೌನ ಪ್ರತಿಭಟನೆಗೆ ಜಿಲ್ಲಾ ಬಂಜಾರಾ ಮಹಿಳಾ ವೇದಿಕೆ ಬೆಂಬಲ ನೀಡಲಿದೆ ಎಂದು ವೇದಿಕೆಯ ಸಂಯೋಜಕಿ ಶ್ರೀಮತಿ ಶಾರದಾ ಬಿ. ಯಾಕಾಪುರ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರವು 2027ರ ಜನವರಿ 1ರಂದು ಜಾತಿ ಗಣತಿ ಹಾಗೂ ಜನಗಣತಿಯ ಅಂಕಿ-ಅಂಶಗಳನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ. ಎಲ್ಲ ಜಾತಿಗಳ ಸ್ಪಷ್ಟ ಅಂಕಿ-ಅಂಶಗಳು ಲಭ್ಯವಾದ ಬಳಿಕ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಬಹುದು. ಅಲ್ಲಿಯವರೆಗೆ ಸರ್ಕಾರ ಹೊರಡಿಸಿರುವ ನೇಮಕಾತಿ ಹಾಗೂ ಒಳಮೀಸಲಾತಿಗೆ ಸಂಬಂಧಿಸಿದ ಆದೇಶಗಳನ್ನು ರದ್ದುಪಡಿಸಬೇಕು ಅಥವಾ ತಡೆಹಿಡಿಯಬೇಕು ಎಂದು ಒತ್ತಾಯಿಸಿದರು.

ಕರ್ನಾಟಕ ಸರ್ಕಾರವು ಪರಿಶಿಷ್ಟ ಜಾತಿಯ ಉದ್ಯೋಗಾಕಾಂಕ್ಷಿಗಳ ಬೇಡಿಕೆಯ ಹಿನ್ನೆಲೆಯಲ್ಲಿ ಹಾಗೂ ನ್ಯಾಯಮೂರ್ತಿ ನಾಗಮೋಹನದಾಸ್ ನೇತೃತ್ವದ ಒಳಮೀಸಲಾತಿ ಸಮಿತಿಯ ವರದಿ ಮತ್ತು ತಾಂತ್ರಿಕ ವರದಿಯ ಆಧಾರದ ಮೇಲೆ ಪರಿಶಿಷ್ಟ ಜಾತಿಗಳ ಪಟ್ಟಿಯನ್ನು ವಿವಿಧ ವರ್ಗಗಳಾಗಿ ವಿಂಗಡಿಸಿ ಒಳಮೀಸಲಾತಿ ಪ್ರಮಾಣವನ್ನು ನಿಗದಿಪಡಿಸಿದೆ. ಈ ಪ್ರಕ್ರಿಯೆಯಲ್ಲಿ ಪರಿಶಿಷ್ಟ ಜಾತಿಗಳಿಗೆ ನೀಡಲಾಗಿರುವ ಒಟ್ಟು ಮೀಸಲಾತಿ ಪ್ರಮಾಣ ಶೇ 15ರ ಮಿತಿಯೊಳಗಿರಬೇಕು ಎಂದು ಆದೇಶಿಸಲಾಗಿದೆ ಎಂದು ಅವರು ಹೇಳಿದರು.

ಈ ಆದೇಶದ ವಿರುದ್ಧ ಜುಡೋ ಬಂಜಾರಾ ಫೌಂಡೇಷನ್ ಹೈಕೋರ್ಟ್‌ ಮೊರೆ ಹೋಗಿದ್ದು, ನೇಮಕಾತಿ ಆದೇಶ ಹೊರಡಿಸುವುದು ಹಾಗೂ ಮೀಸಲಾತಿ ಪ್ರಮಾಣಕ್ಕೆ ಸಂಬಂಧಿಸಿದ ವಿಚಾರದಲ್ಲಿ ತಡೆಯಾಜ್ಞೆ ನೀಡುವಂತೆ ಕೋರಿತ್ತು. ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್‌, ಅಂತಿಮ ಆದೇಶಕ್ಕೆ ಒಳಪಟ್ಟು ಹೊಸ ಆದೇಶದ ಅನ್ವಯ ನೇಮಕಾತಿ ಪ್ರಕ್ರಿಯೆ ಆರಂಭಿಸಲು ಸರ್ಕಾರ ಕ್ರಮ ಕೈಗೊಳ್ಳಬಹುದು ಎಂದು ತಡೆಯಾಜ್ಞೆ ನೀಡಿದೆ ಎಂದು ಶಾರದಾ ತಿಳಿಸಿದರು.

ಹೊಸ ಒಳಮೀಸಲಾತಿ ವ್ಯವಸ್ಥೆಯಿಂದ ಬಂಜಾರಾ ಸಮುದಾಯದ ಮಕ್ಕಳ ಶಿಕ್ಷಣ ಹಾಗೂ ಉದ್ಯೋಗಾವಕಾಶಗಳ ಮೇಲೆ ಪರಿಣಾಮ ಬೀರುವ ಆತಂಕವಿದೆ ಎಂದು ಅವರು ಹೇಳಿದರು. ವಿಶೇಷವಾಗಿ ವಸತಿ ಶಾಲೆಗಳು, ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು ಹಾಗೂ ಕಸ್ತೂರಬಾ ವಸತಿ ಶಾಲೆಗಳಲ್ಲಿ ಪ್ರವೇಶ ಪಡೆಯಲು ಮೀಸಲಾತಿ ಪ್ರಮಾಣದ ಕಾರಣದಿಂದ ಸಮಸ್ಯೆಯಾಗುತ್ತಿದೆ ಎಂದು ಆರೋಪಿಸಿದರು.

ಬಂಜಾರಾ ಸಮುದಾಯದ ಕುಟುಂಬಗಳು ಉದ್ಯೋಗಕ್ಕಾಗಿ ವಿವಿಧ ತಾಂಡಾಗಳಿಂದ ನಗರ ಹಾಗೂ ಪಟ್ಟಣಗಳಿಗೆ ವಲಸೆ ಹೋಗುತ್ತಿದ್ದು, ಮಕ್ಕಳನ್ನು ಸರ್ಕಾರಿ ವಸತಿ ಶಾಲೆಗಳಲ್ಲಿ ದಾಖಲಿಸುತ್ತಿದ್ದಾರೆ. ಆದರೆ ಹೊಸ ನಿಯಮಗಳಿಂದ ಮಕ್ಕಳಿಗೆ ಪ್ರವೇಶ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಮಕ್ಕಳ ಶೈಕ್ಷಣಿಕ ಭವಿಷ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಮಕ್ಕಳು ಕಠಿಣ ಪರಿಶ್ರಮದಿಂದ ಓದಿ ಉತ್ತಮ ಅಂಕಗಳನ್ನು ಪಡೆದರೂ ಮೀಸಲಾತಿ ಪ್ರಮಾಣದ ಕಾರಣದಿಂದ ವೃತ್ತಿಪರ ಶಿಕ್ಷಣದ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಸಾಧ್ಯವಾಗದಿರುವ ಪ್ರಕರಣಗಳು ಕಂಡುಬರುತ್ತಿವೆ. ಶಿಕ್ಷಣವು ಮಕ್ಕಳ ಸಾಂವಿಧಾನಿಕ ಹಕ್ಕಾಗಿದ್ದು, ಮೀಸಲಾತಿ ವ್ಯವಸ್ಥೆಯಿಂದ ಯಾವುದೇ ಸಮುದಾಯದ ಅರ್ಹ ಮಕ್ಕಳಿಗೆ ಅನ್ಯಾಯವಾಗಬಾರದು ಎಂದು ಅವರು ಹೇಳಿದರು.

ಹೊಸ ವ್ಯವಸ್ಥೆಯಲ್ಲಿ ಪರಿಶಿಷ್ಟ ಜಾತಿಗಳ ವಿವಿಧ ವರ್ಗಗಳಿಗೆ ನಿಗದಿಪಡಿಸಿರುವ ಒಳಮೀಸಲಾತಿ ಪ್ರಮಾಣದ ಕುರಿತು ಬಂಜಾರಾ ಸಮುದಾಯದಲ್ಲಿ ಅಸಮಾಧಾನವಿದೆ. ಹೀಗಾಗಿ ಪ್ರಸ್ತುತ ಆದೇಶವನ್ನು ಮರುಪರಿಶೀಲಿಸಿ, ಎಲ್ಲ ವರ್ಗಗಳಿಗೂ ಸಮಾನ ಅವಕಾಶ ದೊರೆಯುವ ರೀತಿಯಲ್ಲಿ ಮೀಸಲಾತಿ ವ್ಯವಸ್ಥೆ ರೂಪಿಸಬೇಕು ಎಂದು ಅವರು ಆಗ್ರಹಿಸಿದರು.

ಒಳಮೀಸಲಾತಿ ವಿಚಾರದಲ್ಲಿ ಜನಸಂಖ್ಯೆಯ ಅಂಕಿ-ಅಂಶಗಳನ್ನು ಆಧಾರವಾಗಿಟ್ಟುಕೊಂಡು ವೈಜ್ಞಾನಿಕ ಹಾಗೂ ನ್ಯಾಯಸಮ್ಮತವಾಗಿ ವರ್ಗೀಕರಣ ಮಾಡಬೇಕು. ವಿವಿಧ ಸಮುದಾಯಗಳ ಜನಸಂಖ್ಯೆ ಮತ್ತು ಸಾಮಾಜಿಕ, ಶೈಕ್ಷಣಿಕ ಪರಿಸ್ಥಿತಿಯನ್ನು ಪರಿಗಣಿಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಪ್ರಸ್ತುತ ಆದೇಶದಿಂದ ಬಂಜಾರಾ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ ಅವರು, ಅಕ್ಟೋಬರ್ 2ರಂದು ನಡೆಯಲಿರುವ ಮೌನ ಪ್ರತಿಭಟನೆಗೆ ಸಮುದಾಯದ ಮಹಿಳೆಯರು ಹಾಗೂ ಸಾರ್ವಜನಿಕರು ಬೆಂಬಲ ನೀಡಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಬಸವರಾಜ ಬಳುಂಡಗಿ, ಪಾಂಡು ಎಲ್. ರಾಠೋಡ್, ಶರಣಪ್ಪ ಓಂಕಾರ, ನರಸಿಂಗರಾವ್ ಆರ್. ಕುಲಕರ್ಣಿ, ಸಿದ್ದಲಿಂಗಪ್ಪ ಪೂಜಾರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

sswnews

https://sswnewskannada.com

Related Articles

Leave a Reply

Your email address will not be published. Required fields are marked *

Back to top button