ಜಿಲ್ಲಾಸುದ್ದಿ

ಪ್ರಾಂಶುಪಾಲರ ಹುದ್ದೆಗೆ ನೇರ ನೇಮಕಾತಿ: ಕಲ್ಯಾಣ ಕರ್ನಾಟಕ ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸಲು ಆಗ್ರಹ

ಕಲಬುರಗಿ, ಸೆ.30: ಪದವಿಪೂರ್ವ ಶಿಕ್ಷಣ ಇಲಾಖೆಯ ಗುಂಪು–ಎ ಪ್ರಾಂಶುಪಾಲರ ಹುದ್ದೆಗಳ ನೇರ ನೇಮಕಾತಿಗೆ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕದ ಅಭ್ಯರ್ಥಿಗಳಿಗೆ ಕೆಕೆ ಹಾಗೂ ಆರ್‌ಪಿಸಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಬೇಕು ಎಂದು ಕರ್ನಾಟಕ ರಾಜ್ಯ ಪದವಿಪೂರ್ವ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಎನ್.ಟಿ. ರಂಗೋಲಿ ಒತ್ತಾಯಿಸಿದರು.

ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ ಪದವಿಪೂರ್ವ ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಅರ್ಹ ಉಪನ್ಯಾಸಕರಿಗೆ ಗುಂಪು–ಎ ಪ್ರಾಂಶುಪಾಲರ ಹುದ್ದೆಗಳ ನೇರ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆದರೆ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಹೈದರಾಬಾದ್ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಅಭ್ಯರ್ಥಿಗಳಿಗೆ ಕೆಕೆ ಹುದ್ದೆಗಳಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಸಾಮಾನ್ಯ ಹಾಗೂ ಆರ್‌ಪಿಸಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡದಿರುವುದರಿಂದ ಕಲ್ಯಾಣ ಕರ್ನಾಟಕದ ಅರ್ಹ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತಿದೆ ಎಂದು ಹೇಳಿದರು.

ಸಂವಿಧಾನದ 371(ಜೆ) ಅಡಿಯಲ್ಲಿ ಕಲ್ಯಾಣ ಕರ್ನಾಟಕದ ಅಭ್ಯರ್ಥಿಗಳಿಗೆ ವಿಶೇಷ ಸ್ಥಾನಮಾನ ಹಾಗೂ ಮೀಸಲಾತಿಯ ಸಾಂವಿಧಾನಿಕ ಸೌಲಭ್ಯ ಕಲ್ಪಿಸಲಾಗಿದೆ. ಹೀಗಾಗಿ ಈ ಭಾಗದ ಅರ್ಹ ಅಭ್ಯರ್ಥಿಗಳಿಗೆ ಕೆಕೆ ಹುದ್ದೆಗಳ ಜತೆಗೆ, ತಮ್ಮ ಅರ್ಹತೆ ಹಾಗೂ ಸೇವಾ ಹಿರಿತನದ ಆಧಾರದ ಮೇಲೆ ಲಭ್ಯವಿರುವ ಆರ್‌ಪಿಸಿ ಹುದ್ದೆಗಳಿಗೂ ಅರ್ಜಿ ಸಲ್ಲಿಸಲು ಅವಕಾಶ ನೀಡಬೇಕು ಎಂದು ಅವರು ಆಗ್ರಹಿಸಿದರು.

ಪ್ರಸ್ತುತ ವ್ಯವಸ್ಥೆಯಲ್ಲಿ ಕಲ್ಯಾಣ ಕರ್ನಾಟಕದ ಅಭ್ಯರ್ಥಿಗಳಿಗೆ ಆರ್‌ಪಿಸಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡದಿರುವುದರಿಂದ ಅರ್ಹ ಅಭ್ಯರ್ಥಿಗಳ ಸ್ಪರ್ಧಾತ್ಮಕ ಅವಕಾಶಗಳು ಸೀಮಿತವಾಗುತ್ತಿವೆ. ಒಂದು ಕಡೆ 371(ಜೆ) ಮೀಸಲಾತಿಯ ಸಾಂವಿಧಾನಿಕ ಪ್ರಯೋಜನ ಪಡೆಯುವ ಹಕ್ಕು ಇದ್ದರೂ, ಮತ್ತೊಂದೆಡೆ ಸಾಮಾನ್ಯ ಅಥವಾ ರಾಜ್ಯಮಟ್ಟದ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅವಕಾಶವನ್ನು ನಿರ್ಬಂಧಿಸುವುದು ಅಭ್ಯರ್ಥಿಗಳಿಗೆ ಅನನುಕೂಲಕರ ಪರಿಸ್ಥಿತಿ ಸೃಷ್ಟಿಸುತ್ತದೆ ಎಂದು ರಂಗೋಲಿ ಹೇಳಿದರು.

ಆದ್ದರಿಂದ ಕಲ್ಯಾಣ ಕರ್ನಾಟಕದ ಅರ್ಹ ಅಭ್ಯರ್ಥಿಗಳಿಗೆ ಕೆಕೆ ಹಾಗೂ ಆರ್‌ಪಿಸಿ ಎರಡೂ ವರ್ಗಗಳ ಹುದ್ದೆಗಳಿಗೆ ತಮ್ಮ ಅರ್ಹತೆಗೆ ಅನುಗುಣವಾಗಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸುವ ಕುರಿತು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಹಾಗೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಅಗತ್ಯ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿದರು.

ಪ್ರಸ್ತುತ ನೇಮಕಾತಿಗೆ ಅರ್ಜಿ ಸಲ್ಲಿಸಲು ಅಕ್ಟೋಬರ್ 4 ಕೊನೆಯ ದಿನಾಂಕವಾಗಿರುವುದರಿಂದ ಈ ವಿಷಯವನ್ನು ತುರ್ತಾಗಿ ಪರಿಗಣಿಸಿ, ಅರ್ಹ ಅಭ್ಯರ್ಥಿಗಳಿಗೆ ಯಾವುದೇ ಅನ್ಯಾಯವಾಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು. ಕಲ್ಯಾಣ ಕರ್ನಾಟಕದ ಅಭ್ಯರ್ಥಿಗಳಿಗೆ ಕೆಕೆ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅವಕಾಶ ಮುಂದುವರಿಸುವುದರ ಜತೆಗೆ, ನಿಯಮಾನುಸಾರ ಆರ್‌ಪಿಸಿ ಹುದ್ದೆಗಳಿಗೂ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಬೇಕು ಎಂದು ಅವರು ಮನವಿ ಮಾಡಿದರು.

ಅಲ್ಲದೆ, ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅರ್ಜಿ ನಮೂನೆಯಲ್ಲಿ ಕಲ್ಯಾಣ ಕರ್ನಾಟಕದ ಅಭ್ಯರ್ಥಿಗಳಿಗೆ ಖಚಿತ ಹುದ್ದೆಗಳನ್ನು ಆಯ್ಕೆ ಮಾಡುವ ಅವಕಾಶವಿಲ್ಲದಿರುವ ಕುರಿತು ಪರಿಶೀಲನೆ ನಡೆಸಬೇಕು. ಅಕ್ಟೋಬರ್ 4ರ ಅರ್ಜಿ ಸಲ್ಲಿಕೆ ಗಡುವಿನೊಳಗೆ ತಿದ್ದುಪಡಿ ಅವಕಾಶ ಕಲ್ಪಿಸುವಂತೆ ಅವರು ಆಗ್ರಹಿಸಿದರು.

371(ಜೆ) ವಿಶೇಷ ಸ್ಥಾನಮಾನದ ಮೂಲ ಆಶಯಕ್ಕೆ ಧಕ್ಕೆ ಉಂಟಾಗದಂತೆ ಹಾಗೂ ಕಲ್ಯಾಣ ಕರ್ನಾಟಕದ ಅರ್ಹ ಉದ್ಯೋಗಾಕಾಂಕ್ಷಿಗಳಿಗೆ ನ್ಯಾಯಸಮ್ಮತ ಅವಕಾಶ ದೊರೆಯುವಂತೆ ಕ್ರಮ ಕೈಗೊಳ್ಳಬೇಕು. ಇದೇ ವೇಳೆ ಕಲ್ಯಾಣ ಕರ್ನಾಟಕ ನಿವಾಸಿ ಪ್ರಮಾಣಪತ್ರ ಮತ್ತು ಆದಾಯ ಪ್ರಮಾಣಪತ್ರ ಪಡೆಯಲು ಕಂದಾಯ ಇಲಾಖೆಯಲ್ಲಿ ಸುಮಾರು 15ರಿಂದ 20 ದಿನಗಳ ಪ್ರಕ್ರಿಯೆ ನಡೆಯುವುದರಿಂದ ಅರ್ಜಿ ಸಲ್ಲಿಕೆ ಗಡುವನ್ನು ವಿಸ್ತರಿಸಬೇಕು ಎಂದು ರಂಗೋಲಿ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಬಸವರಾಜ ಬಳುಂಡಗಿ, ಪಾಂಡು ಎಲ್. ರಾಠೋಡ್, ಶರಣಪ್ಪ ಓಂಕಾರ, ನರಸಿಂಗರಾವ್ ಆರ್. ಕುಲಕರ್ಣಿ, ಸಿದ್ದಲಿಂಗಪ್ಪ ಪೂಜಾರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

sswnews

https://sswnewskannada.com

Related Articles

Leave a Reply

Your email address will not be published. Required fields are marked *

Back to top button