ಶಿಕ್ಷಣ ವ್ಯಕ್ತಿಯ ಜೀವನ ಕೌಶಲ್ಯಕ್ಕೆ ದಾರಿ: ನಂದಗಾಂವ
ಜ್ಞಾನ, ಶಿಸ್ತು, ನಾಯಕತ್ವ ಹಾಗೂ ಮಾನವೀಯ ಮೌಲ್ಯಗಳ ಬೆಳೆಸುವಿಕೆಗೆ ಶಿಕ್ಷಣ ಸಹಕಾರಿ: ಡಾ. ಸುರೇಶಕುಮಾರ ನಂದಗಾಂವ

ಕಲಬುರಗಿ, ಸೆ.28: ವಿದ್ಯಾರ್ಥಿ ಜೀವನವು ವ್ಯಕ್ತಿಯ ಬದುಕಿನ ಅತ್ಯಂತ ಮಹತ್ವದ ಹಂತವಾಗಿದ್ದು, ಶಿಕ್ಷಣವು ವ್ಯಕ್ತಿಯ ಜೀವನ ಕೌಶಲ್ಯವನ್ನು ಬೆಳೆಸುತ್ತದೆ ಎಂದು ಶರಣಬಸವೇಶ್ವರ ಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಸುರೇಶಕುಮಾರ ನಂದಗಾಂವ ಹೇಳಿದರು.
ನಗರದ ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪದವಿ ಮಹಿಳಾ ಮಹಾವಿದ್ಯಾಲಯದಲ್ಲಿ ಭಾನುವಾರ ಕಲಾವಾಣಿ ವಿದ್ಯಾರ್ಥಿ ಸಂಘದ ಉದ್ಘಾಟನೆ ಹಾಗೂ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭದಲ್ಲಿ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಕಾಲೇಜು ಶಿಕ್ಷಣ ಎಂದರೆ ಕೇವಲ ಪಠ್ಯಪುಸ್ತಕದ ಜ್ಞಾನ ಪಡೆಯುವುದಲ್ಲ. ಜ್ಞಾನದ ಜತೆಗೆ ಶಿಸ್ತು, ನಾಯಕತ್ವ ಗುಣ, ಸಮಯಪ್ರಜ್ಞೆ, ಸಾಮಾಜಿಕ ಜವಾಬ್ದಾರಿ, ಸಂವಹನ ಕೌಶಲ್ಯ ಹಾಗೂ ಉತ್ತಮ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳುವುದು ಮುಖ್ಯ. ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಇಂತಹ ಜೀವನ ಮೌಲ್ಯಗಳನ್ನೂ ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪೂಜ್ಯ ಡಾ. ಅಪ್ಪ ಅವರು ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಿ ಶಿಕ್ಷಣ ಕ್ಷೇತ್ರವನ್ನು ಬೆಳೆಸಲು ಶ್ರಮಿಸಿದ್ದಾರೆ. ಅದೇ ರೀತಿ ಪೂಜ್ಯ ಡಾ. ಅವಾಜಿ ಅವರು ವಿದ್ಯಾರ್ಥಿಗಳ ಏಳಿಗೆಗಾಗಿ ಹಗಲಿರುಳು ಚಿಂತಿಸುತ್ತಿದ್ದಾರೆ. ವಿದ್ಯಾರ್ಥಿಗಳು ಶ್ರವಣ, ಮನನ ಹಾಗೂ ನಿಧಿಧ್ಯಾಸನದ ಮೂಲಕ ಕಲಿಕೆಯಲ್ಲಿ ತೊಡಗಿಸಿಕೊಳ್ಳಬೇಕು. “ಕಲಿಕೆ ಎಂದಿಗೂ ಮುಗಿಯದ ಪ್ರಕ್ರಿಯೆ” ಎಂಬುದನ್ನು ಅರಿತುಕೊಂಡು, ಅಂಕಗಳ ಜತೆಗೆ ಜ್ಞಾನ, ಜ್ಞಾನದ ಜತೆಗೆ ವಿವೇಕ ಹಾಗೂ ವಿವೇಕದ ಜತೆಗೆ ಮಾನವೀಯತೆಯನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕೇಂದ್ರೀಯ ವಿಶ್ವವಿದ್ಯಾಲಯದ ಕಾನೂನು ವಿಭಾಗದ ಪ್ರಾಧ್ಯಾಪಕಿ ಡಾ. ರೇಣುಕಾ ಗುಬ್ಬೇವಾಡ ಮಾತನಾಡಿ, ಇಂದಿನ ಜಗತ್ತಿನಲ್ಲಿ ಮಹಿಳೆಯರು ಶಿಕ್ಷಣ, ವಿಜ್ಞಾನ, ತಂತ್ರಜ್ಞಾನ, ಕಾನೂನು, ಆಡಳಿತ, ರಾಜಕೀಯ ಹಾಗೂ ಉದ್ಯಮ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲಿಯೂ ತಮ್ಮ ಸಾಮರ್ಥ್ಯವನ್ನು ತೋರಿಸುತ್ತಿದ್ದಾರೆ ಎಂದರು.
ಮಹಿಳೆಯರು ತಮ್ಮ ಕನಸುಗಳನ್ನು ಸಣ್ಣದಾಗಿಸಿಕೊಳ್ಳದೆ, ದೊಡ್ಡ ಗುರಿಗಳನ್ನು ಹೊಂದಬೇಕು. ಅವುಗಳನ್ನು ಸಾಧಿಸಲು ನಿರಂತರವಾಗಿ ಪ್ರಯತ್ನಿಸಬೇಕು. ಮಹಿಳೆಯರಿಗೆ ಹೋರಾಟ ಹಾಗೂ ಜವಾಬ್ದಾರಿಗಳು ಹೆಚ್ಚಿರುವುದರಿಂದ ತಮ್ಮ ಹಕ್ಕುಗಳು ಮತ್ತು ಕಾನೂನುಗಳ ಬಗ್ಗೆ ಅರಿವು ಹೊಂದಿರಬೇಕು ಎಂದು ಸಲಹೆ ನೀಡಿದರು.
ಮುಕ್ತಾಂಬಿಕಾ ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎಂ.ಆರ್. ಹುಗ್ಗಿ ಹಾಗೂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ. ಸೀಮಾ ಪಾಟೀಲ ಮಾತನಾಡಿದರು.
ವೇದಿಕೆಯಲ್ಲಿ ಐಕ್ಯೂಎಸಿ ಸಂಯೋಜಕಿ ಡಾ. ಪ್ರತಿಭಾ ಪಾಟೀಲ, ವಿದ್ಯಾರ್ಥಿ ಸಂಘದ ಉಪಾಧ್ಯಕ್ಷೆ ಕು. ಸಂಜನಾ ಕುಲಕರ್ಣಿ ಉಪಸ್ಥಿತರಿದ್ದರು. ಡಾ. ಮಹಾಲಕ್ಷ್ಮಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಸಾದ್ ಅಷ್ಟಗೀಕರ ನಿರೂಪಿಸಿ, ವಂದಿಸಿದರು.
ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಎಲ್ಲ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.



