ಆರೋಗ್ಯ

ಸೇವಾ ಖಾಯಮಾತಿಗೆ ಆಗ್ರಹಿಸಿ ಸಿದ್ದಗಂಗಾ ಮಠದಿಂದ ಸಮುದಾಯ ಆರೋಗ್ಯ ಗುತ್ತಿಗೆ ನೌಕರರ ಕಾಲ್ನಡಿಗೆ ಜಾಥಾ

ಪಿಎಚ್‌ಸಿಒ, ಎಚ್‌ಎಲ್‌ಐ ಹಾಗೂ ಬಿಎಸ್‌ಸಿ ನರ್ಸಿಂಗ್ ಅರ್ಹತೆ ಹಿಂಪಡೆಯದಂತೆ ಆಗ್ರಹ

ತುಮಕೂರು, ಸೆ.28: ಸಮುದಾಯ ಆರೋಗ್ಯ ಗುತ್ತಿಗೆ ನೌಕರರನ್ನು ಸೇವೆಯಲ್ಲಿ ಖಾಯಂಗೊಳಿಸಬೇಕು ಹಾಗೂ ಪಿಎಚ್‌ಸಿಒ, ಎಚ್‌ಎಲ್‌ಐ ಮತ್ತು ಬಿಎಸ್‌ಸಿ ನರ್ಸಿಂಗ್ ಹುದ್ದೆಗಳಿಗೆ ನೀಡಲಾಗಿರುವ ಅರ್ಹತೆಯನ್ನು ಹಿಂಪಡೆಯಬಾರದು ಎಂದು ಆಗ್ರಹಿಸಿ ಸುಮಾರು 5 ಸಾವಿರಕ್ಕೂ ಹೆಚ್ಚು ನೌಕರರು ಸೋಮವಾರ ಸಿದ್ದಗಂಗಾ ಮಠದಿಂದ ನೆಲಮಂಗಲದವರೆಗೆ ಬೃಹತ್ ಕಾಲ್ನಡಿಗೆ ಜಾಥಾ ಆರಂಭಿಸಿದರು.

ಸಿದ್ದಗಂಗಾ ಶ್ರೀಗಳು ಜಾಥಾಕ್ಕೆ ಚಾಲನೆ ನೀಡಿದರು.

ಟ್ರೇಡ್ ಯೂನಿಯನ್ ಸೆಂಟರ್ ಆಫ್ ಇಂಡಿಯಾ ಸಂಯೋಜಿತ ಕರ್ನಾಟಕ ರಾಜ್ಯ ಸಮುದಾಯ ಆರೋಗ್ಯ ಎನ್‌ಎಚ್‌ಎಂ ಗುತ್ತಿಗೆ ನೌಕರರ ಸಂಘದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮಾನಸಯ್ಯ ಮಾತನಾಡಿ, ನೆಲಮಂಗಲದವರೆಗೆ ಬೃಹತ್ ಕಾಲ್ನಡಿಗೆ ಜಾಥಾ ನಡೆಯಲಿದ್ದು, ನಂತರ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನಾ ಧರಣಿ ಆಯೋಜಿಸಲಾಗಿದೆ. ಸುಮಾರು 500ಕ್ಕೂ ಹೆಚ್ಚು ಸಿಎಚ್‌ಒಗಳು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ತಿಳಿಸಿದರು.

ಪಿಎಚ್‌ಸಿಒ (ಎಎನ್‌ಎಂ) ಹಾಗೂ ಎಚ್‌ಎಲ್‌ಐ ಹುದ್ದೆಗಳಿಗೆ ಬಿಎಸ್‌ಸಿ ನರ್ಸಿಂಗ್ ಅಭ್ಯರ್ಥಿಗಳಿಗೆ ನೀಡಲಾಗಿರುವ ವಿದ್ಯಾರ್ಹತೆಯನ್ನು ಹಿಂಪಡೆಯುವುದು ಪ್ರಮುಖ ಬೇಡಿಕೆಯಾಗಿದೆ. ಈಗಾಗಲೇ ಸಿಎಚ್‌ಒಗಳ ಕ್ಯಾಡರ್ ಪ್ರೊಟೆಕ್ಷನ್ ಹಾಗೂ ವೃತ್ತಿ ಪ್ರಗತಿಗೆ ಸಂಬಂಧಿಸಿದಂತೆ ಉದ್ಯೋಗ ಭದ್ರತೆಯ ಮೇಲೆ ಈ ಬದಲಾವಣೆ ಪರಿಣಾಮ ಬೀರುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಸರ್ಕಾರದ ಗಮನಕ್ಕೆ ಹಲವು ಬಾರಿ ಮನವಿ ಹಾಗೂ ಆಕ್ಷೇಪಣೆಗಳನ್ನು ಸಲ್ಲಿಸಲಾಗಿದೆ ಎಂದು ಹೇಳಿದರು.

ಈ ಕುರಿತು ಕಳೆದ 9ರಂದು ರಾಷ್ಟ್ರೀಯ ಆರೋಗ್ಯ ಅಭಿಯಾನ ನಿರ್ದೇಶಕರ ಅಧ್ಯಕ್ಷತೆಯಲ್ಲಿ ಸಂಘದ ಪದಾಧಿಕಾರಿಗಳೊಂದಿಗೆ ಸಭೆ ನಡೆದಿತ್ತು. ಸಭೆಯಲ್ಲಿಯೂ ಬಿಎಸ್‌ಸಿ ನರ್ಸಿಂಗ್ ವಿದ್ಯಾರ್ಹತೆಯನ್ನು ಹಿಂಪಡೆಯದಂತೆ ಪ್ರಮುಖವಾಗಿ ಮನವಿ ಮಾಡಲಾಗಿತ್ತು. ಈ ವಿಷಯ ಸರ್ಕಾರದ ಮಟ್ಟದಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದರು. ಆದರೆ ಕಳೆದ 15ರಂದು ಅಂತಿಮ ಗೆಜೆಟ್ ಅಧಿಸೂಚನೆ ಪ್ರಕಟಗೊಂಡಿದ್ದರೂ, ಸಂಘವು ನಿಗದಿತ ಅವಧಿಯಲ್ಲಿ ಸಲ್ಲಿಸಿದ್ದ ಆಕ್ಷೇಪಣೆಗಳನ್ನು ಹೇಗೆ ಪರಿಗಣಿಸಲಾಗಿದೆ ಎಂಬ ಬಗ್ಗೆ ಯಾವುದೇ ಸ್ಪಷ್ಟ ಅಧಿಕೃತ ಮಾಹಿತಿ ಅಥವಾ ಕಾರಣಸಹಿತ ನಿರ್ಧಾರವನ್ನು ನೀಡಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಸ್ಥಳಾಂತರ ಪ್ರಕ್ರಿಯೆ ತಾತ್ಕಾಲಿಕವಾಗಿ ಮುಂದೂಡಲು ಒತ್ತಾಯ

ಪ್ರಸ್ತುತ ಸಿಎಚ್‌ಒಗಳ ರಿಲೊಕೇಷನ್ ಸ್ಥಳಾಂತರ ಪ್ರಕ್ರಿಯೆ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಸಂಘವು ಈ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಮುಂದೂಡಬೇಕು ಎಂದು ಒತ್ತಾಯಿಸಿದೆ. ಸಂಘದ ಬೇಡಿಕೆಗಳ ಕುರಿತು ಸರ್ಕಾರ ಹಾಗೂ ಇಲಾಖೆಯೊಂದಿಗೆ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ಮತ್ತು ಪ್ರತಿಭಟನಾ ಕಾರ್ಯಕ್ರಮ ಮುಂದುವರಿಯುತ್ತಿರುವ ಹಿನ್ನೆಲೆಯಲ್ಲಿ, ಮುಷ್ಕರ ಅಥವಾ ಪ್ರತಿಭಟನಾ ಕಾರ್ಯಕ್ರಮ ಮುಕ್ತಾಯಗೊಳ್ಳುವವರೆಗೆ ಯಾವುದೇ ಸಿಎಚ್‌ಒ ರಿಲೊಕೇಷನ್, ಸ್ಥಳಾಂತರ ಪ್ರಕ್ರಿಯೆ ಅಥವಾ ಆದೇಶವನ್ನು ಕೈಗೊಳ್ಳಬಾರದು ಎಂದು ಆಗ್ರಹಿಸಲಾಯಿತು.

ಸಿಎಚ್‌ಒಗಳ ಸೇವಾ ಖಾಯಮಾತಿ ಹಾಗೂ ಉದ್ಯೋಗ ಭದ್ರತೆ ಕಲ್ಪಿಸುವುದು, ಪಿಎಚ್‌ಸಿಒ (ಎಎನ್‌ಎಂ) ಮತ್ತು ಎಚ್‌ಎಲ್‌ಐ ಹುದ್ದೆಗಳಿಗೆ ನೀಡಿರುವ ಬಿಎಸ್‌ಸಿ ನರ್ಸಿಂಗ್ ಅರ್ಹತೆಯನ್ನು ಹಿಂಪಡೆಯುವುದು, ಸಂಘ ಸಲ್ಲಿಸಿರುವ ಎಲ್ಲ ಆಕ್ಷೇಪಣೆಗಳನ್ನು ಸಮಗ್ರವಾಗಿ ಪರಿಗಣಿಸಿ ಸ್ಪಷ್ಟವಾದ ಅಧಿಕೃತ ಹಾಗೂ ಕಾರಣಸಹಿತ ಹೇಳಿಕೆ ನೀಡುವುದು, ಈಗಾಗಲೇ ಸೇವೆ ಸಲ್ಲಿಸುತ್ತಿರುವ ಸಿಎಚ್‌ಒಗಳ ಕ್ಯಾಡರ್ ಪ್ರೊಟೆಕ್ಷನ್ ಖಚಿತಪಡಿಸುವುದು ಹಾಗೂ ಸಿಎಚ್‌ಒಗಳ ವೃತ್ತಿ ಪ್ರಗತಿಗೆ ಬಡ್ತಿ ನೀಡುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಸಂಘ ಮುಂದಿಟ್ಟಿದೆ.

ಅಲ್ಲದೆ, ಸಿಎಚ್‌ಒಗಳ ಟಿಎ ಮತ್ತು ಡಿಎಯನ್ನು ಕೇಂದ್ರ ಸರ್ಕಾರದ ಮಾರ್ಗಸೂಚಿಗಳಿಗೆ ಅನುಗುಣವಾಗಿ ಪರಿಷ್ಕರಿಸುವಂತೆ ಹಾಗೂ ಸಮುದಾಯ ಮತ್ತು ಪ್ರಾಥಮಿಕ ಆರೋಗ್ಯ ಸೇವೆಗಳನ್ನು ಬಲಪಡಿಸಲು ಸಿಎಚ್‌ಒಗಳ ಅನುಭವ ಮತ್ತು ಪರಿಣತಿಯನ್ನು ಬಳಸಿಕೊಳ್ಳುವಂತೆ ಸಂಘ ಆಗ್ರಹಿಸಿದೆ.

ಪಾರದರ್ಶಕ ವರ್ಗಾವಣೆ ನೀತಿಗೆ ಆಗ್ರಹ

ಪಾರದರ್ಶಕ ಹಾಗೂ ನ್ಯಾಯಸಮ್ಮತ ಅಂತರ್‌ಜಿಲ್ಲಾ ವರ್ಗಾವಣೆ ನೀತಿ ಜಾರಿಗೆ ತರುವಂತೆ, ಸಿಎಚ್‌ಒಗಳ ಸೇವೆ, ಕರ್ತವ್ಯ ಮತ್ತು ಜವಾಬ್ದಾರಿಗಳನ್ನು ಪರಿಗಣಿಸಿ ಸೂಕ್ತ ವೇತನ ಪರಿಷ್ಕರಣೆ ಮಾಡುವಂತೆ ಸಂಘ ಒತ್ತಾಯಿಸಿದೆ.

ಸಿಎಚ್‌ಒಗಳ ಅನುಭವ ಮತ್ತು ಪರಿಣತಿಯನ್ನು ಬಳಸಿಕೊಂಡು ಸಮುದಾಯ ಹಾಗೂ ಪ್ರಾಥಮಿಕ ಆರೋಗ್ಯ ಸೇವೆಗಳನ್ನು ಮತ್ತಷ್ಟು ಬಲಪಡಿಸಬೇಕು. ಪ್ರತಿಭಟನಾ ಕಾರ್ಯಕ್ರಮದ ಅವಧಿಯಲ್ಲಿ ಸಿಎಚ್‌ಒಗಳ ರಿಲೊಕೇಷನ್ ಅಥವಾ ಸ್ಥಳಾಂತರ ಪ್ರಕ್ರಿಯೆಯನ್ನು ಮುಂದುವರಿಸಬಾರದು ಎಂದು ಸಂಘದ ಪದಾಧಿಕಾರಿಗಳು ಆಗ್ರಹಿಸಿದರು.

ಸಂಘವು ತನ್ನ ಬೇಡಿಕೆಗಳನ್ನು ಶಾಂತಿಯುತ ಹಾಗೂ ಪ್ರಜಾಸತ್ತಾತ್ಮಕ ರೀತಿಯಲ್ಲಿ ಸರ್ಕಾರದ ಗಮನಕ್ಕೆ ತಂದಿದೆ. ಸಿಎಚ್‌ಒಗಳ ಸೇವಾ ಭದ್ರತೆ, ವೃತ್ತಿ ಪ್ರಗತಿ, ಉದ್ಯೋಗ ಭದ್ರತೆ ಹಾಗೂ ಸ್ಥಳಾಂತರ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಮನವಿ ಮಾಡಿದರು.

ಜಾಥಾದಲ್ಲಿ ಮಮಿತ್ ಗಾಯಕ್ವಾಡ್, ಚನ್ನಪ್ಪ ಬಿ. ನಾಯಕ ಸೇರಿದಂತೆ ಸಾವಿರಾರು ಕಾರ್ಯಕರ್ತರು ಭಾಗವಹಿಸಿದ್ದರು.

Related Articles

Leave a Reply

Your email address will not be published. Required fields are marked *

Back to top button