ಸಿಎಚ್ಒಗಳ ವಿವಿಧ ಬೇಡಿಕೆ: ಸೆ.28ರಿಂದ ಪಾದಯಾತ್ರೆ

ತುಮಕೂರು, ಸೆ.28: ಸಮುದಾಯ ಆರೋಗ್ಯ ಅಧಿಕಾರಿಗಳ (ಸಿಎಚ್ಒ) ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಸಮುದಾಯ ಆರೋಗ್ಯ ಅಧಿಕಾರಿಗಳ ಸಂಘ ಹಾಗೂ ಎನ್ಎಚ್ಎಂ ಗುತ್ತಿಗೆ ಸೇವಕರ ಸಂಘ (ಟಿಯುಸಿಐ) ವತಿಯಿಂದ ಸೆ.28ರಿಂದ ಪಾದಯಾತ್ರೆ ಹಾಗೂ ಪ್ರತಿಭಟನಾ ಧರಣಿ ಹಮ್ಮಿಕೊಳ್ಳಲಾಗಿದೆ.
ತುಮಕೂರಿನ ಸಿದ್ದಗಂಗಾ ಮಠದ ಶ್ರೀಗಳ ಆಶೀರ್ವಾದದೊಂದಿಗೆ ಸೆ.28ರಂದು ಪಾದಯಾತ್ರೆ ಆರಂಭವಾಗಿದ್ದು, ಬೆಂಗಳೂರಿನತ್ತ ಸಾಗಲಿದೆ. ಸೆ.29ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನಾ ಧರಣಿ ನಡೆಸಲು ಸಂಘಟನೆಗಳು ನಿರ್ಧರಿಸಿವೆ.
ಸಿಎಚ್ಒಗಳಿಗೆ ಸೇವಾ ಭದ್ರತೆ ಹಾಗೂ ಉದ್ಯೋಗ ಭದ್ರತೆ ಕಲ್ಪಿಸಬೇಕು. ವೇತನ ಸೇರಿದಂತೆ ಸೇವಾ ಸೌಲಭ್ಯಗಳನ್ನು ಸುಧಾರಿಸಬೇಕು. ಖಾಲಿ ಇರುವ ಹುದ್ದೆಗಳನ್ನು ಶೀಘ್ರ ಭರ್ತಿ ಮಾಡಬೇಕು ಹಾಗೂ ಸಿಎಚ್ಒಗಳ ಕ್ಯಾಡರ್ ಪ್ರೊಟೆಕ್ಷನ್ ಜಾರಿಗೊಳಿಸಬೇಕು ಎಂದು ಸಂಘಟನೆಗಳು ಆಗ್ರಹಿಸಿವೆ.
ಇದರೊಂದಿಗೆ ಪಿಎಚ್ಸಿಒ (ಎಎನ್ಎಂ) ಹಾಗೂ ಎಚ್ಐಒ ಹುದ್ದೆಗಳಿಗೆ ಬಿ.ಎಸ್ಸಿ ನರ್ಸಿಂಗ್ ಅರ್ಹತೆಯನ್ನು ಪರಿಗಣಿಸಬಾರದು. ಸಿಎಚ್ಒಗಳಿಗೆ ವೃತ್ತಿ ಪ್ರಗತಿ ಮತ್ತು ಬಡ್ತಿ ವ್ಯವಸ್ಥೆ ಕಲ್ಪಿಸಬೇಕು. ಟಿಒಆರ್ (Transfer of Rights) ಸೇರಿದಂತೆ ಸೇವಾ ನಿಯಮಗಳನ್ನು ಸರಳಗೊಳಿಸಬೇಕು ಎಂದು ಒತ್ತಾಯಿಸಲಾಗಿದೆ.ಅಂತರ್ಜಿಲ್ಲಾ ವರ್ಗಾವಣೆಗೆ ಪಾರದರ್ಶಕ ಹಾಗೂ ನ್ಯಾಯಸಮ್ಮತ ನೀತಿ ಜಾರಿಗೊಳಿಸಬೇಕು.
ಸಿಎಚ್ಒಗಳ ಸ್ಥಳಾಂತರ ಹಾಗೂ ಮರುನಿಯೋಜನೆ ಪ್ರಕ್ರಿಯೆಯನ್ನು ಮರುಪರಿಶೀಲಿಸಿ, ಸಿಬ್ಬಂದಿಯ ಹಿತದೃಷ್ಟಿಯಿಂದ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಂಘಟನೆಗಳು ಸರ್ಕಾರವನ್ನು ಒತ್ತಾಯಿಸಿವೆ.‘ನಮ್ಮ ಹಕ್ಕು–ನಮ್ಮ ಸೇವಾ ಭದ್ರತೆ, ನಮ್ಮ ಹೋರಾಟ’ ಎಂಬ ಘೋಷಣೆಯೊಂದಿಗೆ ಪಾದಯಾತ್ರೆ ಹಾಗೂ ಪ್ರತಿಭಟನೆ ನಡೆಸಲಾಗುತ್ತಿದೆ.



