ಜಿಲ್ಲಾಸುದ್ದಿ

ಖಾಸಗಿ ಶಾಲೆಗಳಿಗೆ ಸವಾಲೆಸೆದ ಯಾಕತಪುರ ಸರ್ಕಾರಿ ಶಾಲೆ; ಶಿಕ್ಷಕರ ಸ್ವಂತ ಹಣದಲ್ಲೇ ಶಾಲಾ ಅಭಿವೃದ್ಧಿ!

ಬೀದರ್, ಸೆ.26: ಸರ್ಕಾರಿ ಶಾಲೆಗಳೆಂದರೆ ಮೂಲಸೌಕರ್ಯ ಮತ್ತು ಸೌಲಭ್ಯಗಳ ಕೊರತೆ ಎಂಬ ಸಾಮಾನ್ಯ ಅಭಿಪ್ರಾಯಕ್ಕೆ ಅಪವಾದವೆಂಬಂತೆ ಬೀದರ್ ತಾಲ್ಲೂಕಿನ ಯಾಕತಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಗಮನ ಸೆಳೆಯುತ್ತಿದೆ. ಶಿಕ್ಷಕರು ತಮ್ಮ ಸ್ವಂತ ಹಣದಿಂದ ಶಾಲೆಯ ಅಭಿವೃದ್ಧಿಗೆ ಕೈಜೋಡಿಸಿದ್ದು, ಹಸಿರು ಪರಿಸರ, ಆಕರ್ಷಕ ಗೋಡೆ ಚಿತ್ರಗಳು ಹಾಗೂ ಉತ್ತಮ ಮೂಲಸೌಕರ್ಯಗಳ ಮೂಲಕ ಶಾಲೆ ಖಾಸಗಿ ಶಾಲೆಗಳಿಗೂ ಮಾದರಿಯಾಗಿದೆ.

ಯಾಕತಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಸ್ತುತ 1ರಿಂದ 8ನೇ ತರಗತಿವರೆಗೆ ಕನ್ನಡ ಹಾಗೂ ಇಂಗ್ಲಿಷ್ ಮಾಧ್ಯಮದಲ್ಲಿ ಒಟ್ಟು 182 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. 300ಕ್ಕೂ ಹೆಚ್ಚು ಗಿಡಮರಗಳು, ಆಕರ್ಷಕ ರೇಖಾಚಿತ್ರಗಳು ಹಾಗೂ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸುವ ಮೂಲಕ ಶಾಲೆಯ ವಾತಾವರಣವನ್ನು ವಿದ್ಯಾರ್ಥಿಗಳಿಗೆ ಆಕರ್ಷಕವಾಗಿಸಲಾಗಿದೆ.

ಸರ್ಕಾರಿ ಶಾಲೆಗಳೆಂದರೆ ಮೂಲಸೌಕರ್ಯ ಮತ್ತು ಸೌಲಭ್ಯಗಳ ಕೊರತೆ ಎಂಬ ಅಪವಾದವಿದೆ. ಆದರೆ ಯಾಕತಪುರ ಸರ್ಕಾರಿ ಶಾಲೆ ಇದಕ್ಕೆ ಭಿನ್ನವಾಗಿ ಅಭಿವೃದ್ಧಿ ಹೊಂದಿದೆ. ಶಾಲೆಯ ಮುಖ್ಯಾಧ್ಯಾಪಕ ವಿನಾಯಕ ಚೌಹಾಣ್ ಅವರ ನೇತೃತ್ವದಲ್ಲಿ ಶಿಕ್ಷಕರು ಹಾಗೂ ಸಹಶಿಕ್ಷಕ ಕಮಲಾಕರ್ ಸೇರಿದಂತೆ ಸಿಬ್ಬಂದಿ ವರ್ಗದವರು ತಮ್ಮ ಸ್ವಂತ ಹಣವನ್ನು ಸಂಗ್ರಹಿಸಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾರೆ.

ಶಾಲಾ ಕೊಠಡಿಗಳಿಗೆ ಬೆಂಚ್‌ಗಳ ವ್ಯವಸ್ಥೆ ಮಾಡಲಾಗಿದ್ದು, ಗೋಡೆಗಳ ಮೇಲೆ ರೈಲು, ಬಸ್ ಸೇರಿದಂತೆ ಮಕ್ಕಳನ್ನು ಆಕರ್ಷಿಸುವ ವಿವಿಧ ಬಣ್ಣದ ಚಿತ್ರಗಳನ್ನು ಬಿಡಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳಲ್ಲಿ ಶಾಲೆಯತ್ತ ಆಸಕ್ತಿ ಹೆಚ್ಚಿಸುವ ಪ್ರಯತ್ನ ಮಾಡಲಾಗಿದೆ.

ಪರಿಸರ ಸಂರಕ್ಷಣೆಗೆ ಆದ್ಯತೆ

ಮಕ್ಕಳಿಗೆ ಪಠ್ಯವನ್ನು ಕಲಿಸುವುದಷ್ಟೇ ಸಾಕಾಗುವುದಿಲ್ಲ. ಅವರಲ್ಲಿ ಪರಿಸರ ಪ್ರಜ್ಞೆ ಮೂಡಿಸುವ ಉದ್ದೇಶದಿಂದ ಶಾಲಾ ಆವರಣದಲ್ಲಿ ಕಿರು ಉದ್ಯಾನವನ ನಿರ್ಮಿಸಲಾಗಿದೆ. ಶಾಲೆಯ ಸುತ್ತಮುತ್ತ 300ಕ್ಕೂ ಹೆಚ್ಚು ಸಸಿಗಳನ್ನು ನೆಟ್ಟು ಬೆಳೆಸಲಾಗಿದ್ದು, ಅವುಗಳ ನಿರ್ವಹಣೆಯ ಜವಾಬ್ದಾರಿಯನ್ನು ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಜಂಟಿಯಾಗಿ ವಹಿಸಿಕೊಂಡಿದ್ದಾರೆ.

ಪ್ರಾಯೋಗಿಕವಾಗಿ ಪರಿಸರ ಸಂರಕ್ಷಣೆಯ ಮಹತ್ವವನ್ನು ಮಕ್ಕಳಿಗೆ ತಿಳಿಸುವ ಮೂಲಕ ಅವರಲ್ಲಿ ಪರಿಸರದ ಬಗ್ಗೆ ಕಾಳಜಿ ಬೆಳೆಸಲಾಗುತ್ತಿದೆ.

182 ವಿದ್ಯಾರ್ಥಿಗಳ ವ್ಯಾಸಂಗ

ಪ್ರಸ್ತುತ ಶಾಲೆಯಲ್ಲಿ 1ರಿಂದ 8ನೇ ತರಗತಿವರೆಗೆ ಕನ್ನಡ ಹಾಗೂ ಇಂಗ್ಲಿಷ್ ಮಾಧ್ಯಮದಲ್ಲಿ ಒಟ್ಟು 182 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಯೊಂದರಲ್ಲಿ ಇಷ್ಟೊಂದು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ದಾಖಲಾಗಿರುವುದು ಶಾಲೆಯ ಗುಣಮಟ್ಟದ ಶಿಕ್ಷಣ ಹಾಗೂ ಶಿಕ್ಷಕರ ಬದ್ಧತೆಗೆ ದೊರೆತ ಮೆಚ್ಚುಗೆಯಾಗಿದೆ.

ಶಿಕ್ಷಕರ ಇಚ್ಛಾಶಕ್ತಿ ಮತ್ತು ಪರಿಶ್ರಮಕ್ಕೆ ಗ್ರಾಮಸ್ಥರು ಹಾಗೂ ಪೋಷಕರಿಂದಲೂ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ. ಸರ್ಕಾರಿ ಶಾಲೆಗಳಲ್ಲೂ ಗುಣಮಟ್ಟದ ಶಿಕ್ಷಣ ಹಾಗೂ ಉತ್ತಮ ವಾತಾವರಣ ಕಲ್ಪಿಸಬಹುದು ಎಂಬುದಕ್ಕೆ ಯಾಕತಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಉದಾಹರಣೆಯಾಗಿದೆ.

Related Articles

Leave a Reply

Your email address will not be published. Required fields are marked *

Back to top button