ಜಿಲ್ಲಾಸುದ್ದಿ

ಈಶಾನ್ಯ ಶಿಕ್ಷಕರ ಕ್ಷೇತ್ರಕ್ಕೆ ಬೀದರ್‌ನ ಶಿವಶಂಕರ ತರನಳ್ಳಿ ಸ್ಪರ್ಧೆ

ಕಲಬುರಗಿ, ಸೆ.27: ಮುಂಬರುವ ಈಶಾನ್ಯ ಶಿಕ್ಷಕರ ಕ್ಷೇತ್ರದಿಂದ ರಾಜ್ಯ ವಿಧಾನ ಪರಿಷತ್ತಿಗೆ ನಡೆಯಲಿರುವ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಬೀದರ್‌ನ ಶಿವಶಂಕರ ತರನಳ್ಳಿ ತಿಳಿಸಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಖಿಲ ಕರ್ನಾಟಕ ಶಿಕ್ಷಕರ ಸಂಘದಿಂದ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ. ಕಳೆದ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಶಿಕ್ಷಣ ಕ್ಷೇತ್ರದಲ್ಲಿ ಶಿಕ್ಷಕನಾಗಿ ಹಾಗೂ ಶಿಕ್ಷಣ ಸಂಸ್ಥೆಯ ಸಂಸ್ಥಾಪಕನಾಗಿ ಸೇವೆ ಸಲ್ಲಿಸುತ್ತಿದ್ದು, ಶಿಕ್ಷಕರು ಮತ್ತು ಶಿಕ್ಷಣ ಕ್ಷೇತ್ರದ ಸಮಸ್ಯೆಗಳಿಗೆ ನಿರಂತರವಾಗಿ ಸ್ಪಂದಿಸುತ್ತಾ ಹಲವು ಹೋರಾಟಗಳನ್ನು ನಡೆಸಿಕೊಂಡು ಬಂದಿದ್ದೇನೆ ಎಂದರು.

ಶಾಲೆಯು ಸಾಮಾಜಿಕ ಪರಿವರ್ತನೆಯ ಕೇಂದ್ರವಾಗಬೇಕು ಎಂಬ ಆಶಯದೊಂದಿಗೆ ಕಾರ್ಯನಿರ್ವಹಿಸುವುದಾಗಿ ತಿಳಿಸಿದ ಅವರು, ಈ ಭಾಗದಲ್ಲಿ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಸರ್ಕಾರಿ ಹಾಗೂ ಖಾಸಗಿ ಶಾಲೆಗಳ ಶಿಕ್ಷಕರಿಗೆ ತರಬೇತಿ, ಕಾರ್ಯಾಗಾರ, ವಿಚಾರ ಸಂಕಿರಣ ಹಾಗೂ ಉಪನ್ಯಾಸಗಳನ್ನು ಆಯೋಜಿಸಲಾಗುವುದು ಎಂದರು.

ಜಿಲ್ಲಾ ಮಟ್ಟದ ಕಾರ್ಯಕ್ರಮಗಳಲ್ಲಿ ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರಮಟ್ಟದ ಸಂಪನ್ಮೂಲ ವ್ಯಕ್ತಿಗಳಿಂದ ಮಾರ್ಗದರ್ಶನ ಕೊಡಿಸುವುದಾಗಿ ಹೇಳಿದರು. ಹೈಕೋರ್ಟ್ ನ್ಯಾಯಾಧೀಶರು, ಮಾಜಿ ರಾಜ್ಯಪಾಲ ರಾಮ ಜೋಯಿಸ್, ಗುರುರಾಜ ಕರ್ಜಗಿ, ಡಾ. ವೇಣುಗೋಪಾಲ್, ಅರವಿಂದ ಜತ್ತಿ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಶಿಕ್ಷಣ ಸಂಬಂಧಿತ ಕಾರ್ಯಕ್ರಮಗಳಿಗೆ ಮಾರ್ಗದರ್ಶನ ನೀಡಿದ್ದಾರೆ ಎಂದು ತಿಳಿಸಿದರು.

ಬೀದರ್ ಹಾಗೂ ಕಲಬುರಗಿ ಜಿಲ್ಲೆಗಳ ವಿವಿಧ ಶಾಲಾ-ಕಾಲೇಜುಗಳಿಗೆ ಕಳೆದ ಹಲವು ವರ್ಷಗಳಿಂದ ಭೇಟಿ ನೀಡಿ, ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ ಹಾಗೂ ಪರೀಕ್ಷಾ ಸಿದ್ಧತೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಕರ್ನಾಟಕ ರಾಜ್ಯ ಪಠ್ಯಪುಸ್ತಕ ಪರಿಶೀಲನಾ ಸಮಿತಿ ಸದಸ್ಯನಾಗಿಯೂ ಸೇವೆ ಸಲ್ಲಿಸಿದ್ದೇನೆ ಎಂದರು.

ಕಳೆದ ಮೂರು ದಶಕಗಳಿಂದ ಶಾಲಾ ಶಿಕ್ಷಕರಿಗೆ ವೇತನಾನುದಾನ ದೊರಕಿಸಲು ನಿರಂತರ ಹೋರಾಟ ನಡೆಸಿಕೊಂಡು ಬಂದಿದ್ದೇನೆ. ವಿವಿಧ ಸಂಘ-ಸಂಸ್ಥೆಗಳ ಸಹಕಾರದಿಂದ ಬೀದರ್ ಜಿಲ್ಲೆಯ ಶಾಲೆಗಳಿಗೆ ಉಚಿತ ಕಂಪ್ಯೂಟರ್, ಪುಸ್ತಕ, ಸ್ಮಾರ್ಟ್ ಬೋರ್ಡ್ ಸೇರಿದಂತೆ ಶೈಕ್ಷಣಿಕ ಪರಿಕರಗಳನ್ನು ವಿತರಿಸುವ ಕಾರ್ಯ ಕೈಗೊಂಡಿದ್ದೇನೆ ಎಂದು ಹೇಳಿದರು.

ಕರ್ನಾಟಕ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಹಾಗೂ ಕನ್ನಡ ಪ್ರಾಧಿಕಾರದ ಸದಸ್ಯನಾಗಿ ಸೇವೆ ಸಲ್ಲಿಸಿದ್ದೇನೆ. ಮಾಧ್ಯಮ ಕ್ಷೇತ್ರದಲ್ಲಿಯೂ ಕಾರ್ಯನಿರ್ವಹಿಸಿದ್ದು, ಪ್ರಜಾವಾಣಿಯೊಂದಿಗೆ ಡೆಕ್ಕನ್ ಹೆರಾಲ್ಡ್ ಸೇರಿದಂತೆ ವಿವಿಧ ಪತ್ರಿಕೆಗಳಿಗೆ ವರದಿಗಾರನಾಗಿ ಸೇವೆ ಸಲ್ಲಿಸಿದ್ದೇನೆ. ಸಾಮಾಜಿಕ ಹಾಗೂ ಸೇವಾ ಕ್ಷೇತ್ರದಲ್ಲಿಯೂ ತೊಡಗಿಸಿಕೊಂಡಿದ್ದು, ಈ ಚುನಾವಣೆಯಲ್ಲಿ ಶಿಕ್ಷಕರು ಬೆಂಬಲ ನೀಡಬೇಕು ಎಂದು ಶಿವಶಂಕರ ತರನಳ್ಳಿ ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಸಿದ್ದಲಿಂಗಯ್ಯ ಚಿಕ್ಕಮಠ, ವಿದ್ಯಾವತಿ ಗಾಜೂರೆ, ಸಂಗಮೇಶ್ ಎನ್. ಜವಾದಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button