ಪದವಿ ಪೂರ್ವ ಕಾಲೇಜುಗಳ 2026–27ನೇ ಸಾಲಿನ ಕ್ರೀಡಾಕೂಟಕ್ಕೆ ಚಾಲನೆ

ಅಫಜಲ್ಪುರ, ಸೆ.26: ವಿದ್ಯಾರ್ಥಿಗಳು ಪಾಠದ ಜೊತೆಗೆ ಕ್ರೀಡೆಗಳಿಗೂ ಪ್ರಾಮುಖ್ಯತೆ ನೀಡಬೇಕು. ಕ್ರೀಡೆಗಳು ಶಾರೀರಿಕ ಸದೃಢತೆ ಹಾಗೂ ಆರೋಗ್ಯವನ್ನು ಕಾಪಾಡುತ್ತವೆ. ಸದೃಢವಾದ ಶರೀರದಲ್ಲಿ ಸದೃಢವಾದ ಮನಸ್ಸು ತಾನಾಗಿಯೇ ನೆಲೆಸುತ್ತದೆ ಎಂದು ಪಟ್ಟಣದ ಶ್ರೀ ಮಹಾಂತೇಶ್ವರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಮಂಜೂರ್ ಅಹಮದ್ ಪಟೇಲ್ ಹೇಳಿದರು.
ಶಾಲಾ ಶಿಕ್ಷಣ ಇಲಾಖೆ ಹಾಗೂ ಶ್ರೀಮತಿ ಮಹಾಂತಮ್ಮ ಪಾಟೀಲ್ ಪದವಿ ಪೂರ್ವ ಮಹಾವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ 2026–27ನೇ ಸಾಲಿನ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಫಜಲ್ಪುರ ಸಂಸ್ಥಾನ ಹಿರೇಮಠದ ಶ್ರೀ ವಿಶ್ವರಾಧ್ಯ ಮಳೆಂದ್ರ ಶಿವಾಚಾರ್ಯರು ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು. ಸಂಸ್ಥೆಯ ಆಡಳಿತ ಮಂಡಳಿಯ ಕೋಶಾಧ್ಯಕ್ಷ ಸದಾಶಿವ ಮೇತ್ರಿ ಹಾಗೂ ಆಡಳಿತ ಮಂಡಳಿ ಸದಸ್ಯ ಮಹೇಶ್ ಶೆಟ್ಟಿ ಅತಿಥಿಗಳಾಗಿ ಭಾಗವಹಿಸಿದ್ದರು.
ಕ್ರೀಡಾಕೂಟದಲ್ಲಿ ವಾಲಿಬಾಲ್, ಕಬಡ್ಡಿ ಸೇರಿದಂತೆ ವೈಯಕ್ತಿಕ ವಿಭಾಗದ ಓಟ, ಉದ್ದ ಜಿಗಿತ, ಎತ್ತರ ಜಿಗಿತ, ಡಿಸ್ಕಸ್ ಥ್ರೋ, ಜಾವೆಲಿನ್ ಥ್ರೋ ಸೇರಿದಂತೆ ವಿವಿಧ ಸ್ಪರ್ಧೆಗಳು ನಡೆಯಲಿವೆ. ತಾಲೂಕಿನ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಎಂಟು ಪದವಿ ಪೂರ್ವ ಕಾಲೇಜುಗಳ ಕ್ರೀಡಾಪಟುಗಳು ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದಾರೆ.
ಈ ಸಂದರ್ಭದಲ್ಲಿ ತಾಲೂಕು ಕ್ರೀಡಾ ಶಿಕ್ಷಣ ಅಧಿಕಾರಿ ಪ್ರಕಾಶ ಚಾಂದಕವಟೆ ಮಾತನಾಡಿ, ಕ್ರೀಡಾಕೂಟದಲ್ಲಿ ವಿಜೇತರಾದ ಸ್ಪರ್ಧಾರ್ಥಿಗಳಿಗೆ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದರು.
ತಾಲೂಕು ಕ್ರೀಡಾ ಶಿಕ್ಷಕರ ಸಂಘದ ಅಧ್ಯಕ್ಷ ನಾಗೇಶ ರಂ. ಡಾಳೆ ಉಪಸ್ಥಿತರಿದ್ದರು. ಮಹಾಂತೇಶ್ವರ ಶಿಕ್ಷಣ ಸಂಸ್ಥೆಯ ಕ್ರೀಡಾ ಶಿಕ್ಷಕ ಅನಿಲ್ ಹೂನಳ್ಳಿ ಸಂಯೋಜಕರಾಗಿ ಕಾರ್ಯನಿರ್ವಹಿಸಿದರು.
ಕಾರ್ಯಕ್ರಮದಲ್ಲಿ ಮಹಾಂತೇಶ್ವರ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲರು, ಸಿಬ್ಬಂದಿ ಹಾಗೂ ಸ್ಥಳೀಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.



