ಜಿಲ್ಲಾಸುದ್ದಿ

ಎಂ.ಎನ್. ದೇಸಾಯಿ ಪದವಿ ಕಾಲೇಜಿಗೆ 12 ವರ್ಷ: ಸೆ.27ರಂದು ನೇತ್ರದಾನ ಕಾರ್ಯಕ್ರಮ

ಕಲಬುರಗಿ, ಸೆ.25: ನಗರದ ಹೊಸ ಜೇವರ್ಗಿ ರಸ್ತೆಯ ರಾಷ್ಟ್ರಪತಿ ಚೌಕ್ ಬಳಿಯ ಪ್ರತಿಷ್ಠಿತ ಎಂ.ಎನ್. ದೇಸಾಯಿ ಪದವಿ ಕಾಲೇಜು 12 ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಸೆ.27ರಂದು ನೇತ್ರದಾನ ಹಾಗೂ ಸ್ವಾಗತ ಸಮಾರಂಭ ಆಯೋಜಿಸಲಾಗಿದೆ.

ಕೋಟಾರಿ ಭವನದಲ್ಲಿ ಸೆ.27ರಂದು ಬೆಳಿಗ್ಗೆ 9.30ಕ್ಕೆ ಬಸವೇಶ್ವರ ಆಸ್ಪತ್ರೆಯ ಸಹಯೋಗದಲ್ಲಿ ನೇತ್ರದಾನ ಕಾರ್ಯಕ್ರಮ ನಡೆಯಲಿದೆ. ಕಾಲೇಜಿನ 12ನೇ ವಾರ್ಷಿಕೋತ್ಸವದ ಅಂಗವಾಗಿ ಸಮಾಜಮುಖಿ ಕಾರ್ಯಕ್ರಮಕ್ಕೆ ಆದ್ಯತೆ ನೀಡಲಾಗಿದೆ ಎಂದು ಕಾಲೇಜಿನ ಆಡಳಿತ ಮಂಡಳಿ ತಿಳಿಸಿದೆ.

ಕಲ್ಯಾಣ ಕರ್ನಾಟಕದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಉನ್ನತ ಶಿಕ್ಷಣ ಒದಗಿಸುವ ಉದ್ದೇಶದಿಂದ 2014ರಲ್ಲಿ ಎಂ.ಎನ್. ದೇಸಾಯಿ ಪದವಿ ಕಾಲೇಜು ಸ್ಥಾಪಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಸಂದೀಪ್ ದೇಸಾಯಿ, ಗೌರವಾಧ್ಯಕ್ಷ ಚಂದ್ರಕಾಂತ್ ದೇಸಾಯಿ ಹಾಗೂ ಕಾರ್ಯದರ್ಶಿ ಜಗನ್ನಾಥ ನಾಗೂರ್ ಅವರ ಮಾರ್ಗದರ್ಶನದಲ್ಲಿ ಕಾಲೇಜು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಿದೆ.

ಕಳೆದ 12 ವರ್ಷಗಳಲ್ಲಿ ಕಾಲೇಜು ಪದವಿ ಶಿಕ್ಷಣದ ಜತೆಗೆ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ, ಕೌಶಲಾಭಿವೃದ್ಧಿ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗೂ ಆದ್ಯತೆ ನೀಡಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ, ವಿಶೇಷವಾಗಿ ವಿದ್ಯಾರ್ಥಿನಿಯರಿಗೆ ಉನ್ನತ ಶಿಕ್ಷಣದ ಅವಕಾಶ ಕಲ್ಪಿಸುವ ಮೂಲಕ ಸ್ವಾವಲಂಬನೆ ಹಾಗೂ ಆತ್ಮವಿಶ್ವಾಸ ಬೆಳೆಸುವ ನಿಟ್ಟಿನಲ್ಲಿ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ.

ಕಾಲೇಜಿನಲ್ಲಿ ಕಲೆ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗಗಳ ಪದವಿ ತರಗತಿಗಳು ನಡೆಯುತ್ತಿದ್ದು, ಅನುಭವಿ ಹಾಗೂ ನುರಿತ ಉಪನ್ಯಾಸಕರ ತಂಡ ವಿದ್ಯಾರ್ಥಿಗಳಿಗೆ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಪ್ರೋತ್ಸಾಹಿಸುತ್ತಿದೆ.

ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಹೊಣೆಗಾರಿಕೆ ಬೆಳೆಸುವ ಉದ್ದೇಶದಿಂದ ರಕ್ತದಾನ, ನೇತ್ರದಾನ, ಆರೋಗ್ಯ ತಪಾಸಣಾ ಶಿಬಿರ, ರಾಷ್ಟ್ರೀಯ ಸೇವಾ ಯೋಜನೆ, ಶಿಕ್ಷಕರ ದಿನಾಚರಣೆ, ಮಕ್ಕಳ ದಿನಾಚರಣೆ, ಶೈಕ್ಷಣಿಕ ಪ್ರವಾಸ, ಕ್ರೀಡಾಕೂಟ, ಗಣಕ ಸಾಕ್ಷರತಾ ಅಭಿಯಾನ, ಕೋವಿಡ್ ಲಸಿಕಾ ಶಿಬಿರ ಸೇರಿದಂತೆ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಕಾಲೇಜು ಆಯೋಜಿಸಿದೆ.

ಇದಲ್ಲದೆ ವಿದ್ಯಾರ್ಥಿಗಳ ಕೌಶಲಾಭಿವೃದ್ಧಿ ಹಾಗೂ ಉದ್ಯೋಗಾವಕಾಶ ಹೆಚ್ಚಿಸುವ ಉದ್ದೇಶದಿಂದ ಉದ್ಯೋಗ ಮೇಳಗಳನ್ನು ಆಯೋಜಿಸಲಾಗುತ್ತಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಾದ ಭಾರತೀಯ ಆಡಳಿತ ಸೇವೆ, ಭಾರತೀಯ ಪೊಲೀಸ್ ಸೇವೆ, ಕರ್ನಾಟಕ ಆಡಳಿತ ಸೇವೆ ಸೇರಿದಂತೆ ವಿವಿಧ ಪರೀಕ್ಷೆಗಳಿಗೆ ಅಗತ್ಯ ತರಬೇತಿ ನೀಡುವ ವ್ಯವಸ್ಥೆಯನ್ನೂ ಕಾಲೇಜು ಹೊಂದಿದೆ.

ಕಾಲೇಜಿನ ಆಡಳಿತ ಮಂಡಳಿ ಹಾಗೂ ಉಪನ್ಯಾಸಕರು ವಿದ್ಯಾರ್ಥಿಗಳ ಮಾನಸಿಕ ಮತ್ತು ಬೌದ್ಧಿಕ ಬೆಳವಣಿಗೆಗೆ ಹೆಚ್ಚಿನ ಒತ್ತು ನೀಡುತ್ತಿದ್ದು, ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯವೂ ನಡೆಯುತ್ತಿದೆ. ‘ಒಳ್ಳೆಯದನ್ನು ಮಾಡು, ಕೆಟ್ಟದ್ದನ್ನು ಬಯಸಬೇಡ; ಸ್ವಾವಲಂಬಿಯಾಗು, ಪರೋಪಕಾರಿಯಾಗು; ಸಾರ್ವಜನಿಕ ಸೇವೆ ಮಾಡು; ನಾಡಿಗೆ ಕೊಡುಗೆ ನೀಡಿ; ಹಿರಿಯರನ್ನು ಗೌರವಿಸು’ ಎಂಬ ಮಾನವೀಯ ಮೌಲ್ಯಗಳನ್ನು ವಿದ್ಯಾರ್ಥಿಗಳಲ್ಲಿ ಬೆಳೆಸಲಾಗುತ್ತಿದೆ.

ಕಲಬುರಗಿಯಲ್ಲಿ ವಿವಿಧ ವಿಶ್ವವಿದ್ಯಾಲಯಗಳು ಹಾಗೂ ಉನ್ನತ ಶಿಕ್ಷಣ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದು, ಗುಲಬರ್ಗಾ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಎಂ.ಎನ್. ದೇಸಾಯಿ ಪದವಿ ಕಾಲೇಜು ಕೂಡ ಪ್ರಮುಖ ಸಂಸ್ಥೆಯಾಗಿ ಗುರುತಿಸಿಕೊಂಡಿದೆ. 2015ರಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯದ ಸಂಯೋಜನೆ ಪಡೆದಿರುವ ಕಾಲೇಜು, ಕಳೆದ ವರ್ಷಗಳಲ್ಲಿ ಶೈಕ್ಷಣಿಕ ಚಟುವಟಿಕೆಗಳನ್ನು ವಿಸ್ತರಿಸಿಕೊಂಡಿದೆ.

ಮುಂದಿನ ದಿನಗಳಲ್ಲಿ ಇನ್ನಷ್ಟು ಶೈಕ್ಷಣಿಕ ಹಾಗೂ ಸಮಾಜಮುಖಿ ಚಟುವಟಿಕೆಗಳನ್ನು ಕೈಗೊಳ್ಳುವ ಮೂಲಕ ಸಂಸ್ಥೆಯ ಬೆಳವಣಿಗೆಗೆ ಆದ್ಯತೆ ನೀಡಲಾಗುವುದು ಎಂದು ಆಡಳಿತ ಮಂಡಳಿ ತಿಳಿಸಿದೆ.

Related Articles

Leave a Reply

Your email address will not be published. Required fields are marked *

Back to top button