371(ಜೆ) ಸಚಿವ ಸಂಪುಟ ಉಪಸಮಿತಿ ಪುನರ್‌ರಚನೆ: ನೂತನ ಅಧ್ಯಕ್ಷರಾಗಿ ಡಾ. ಶರಣಪ್ರಕಾಶ ಪಾಟೀಲ

ಕಲಬುರಗಿ, ಸೆ.25: ಸಂವಿಧಾನದ 371(ಜೆ) ಅಡಿಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ನೀಡಲಾಗಿರುವ ವಿಶೇಷ ಸ್ಥಾನಮಾನದ ಹಿನ್ನೆಲೆಯಲ್ಲಿ ಹೊರಡಿಸಲಾಗಿರುವ ಆದೇಶಗಳ ಅನುಷ್ಠಾನದ ಪ್ರಗತಿ ಪರಿಶೀಲನೆಗಾಗಿ ರಚಿಸಲಾಗಿದ್ದ ಸಚಿವ ಸಂಪುಟ ಉಪಸಮಿತಿಯನ್ನು ರಾಜ್ಯ ಸರ್ಕಾರ ಪುನರ್‌ರಚಿಸಿ ಆದೇಶ ಹೊರಡಿಸಿದೆ.
ಪುನರ್‌ರಚನೆಯಾದ ಉಪಸಮಿತಿಗೆ ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಮತ್ತು ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ ರುದ್ರಪ್ಪ ಪಾಟೀಲ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.
ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ. ಖಂಡ್ರೆ, ಗೃಹ, ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಮತ್ತು ಇ-ಆಡಳಿತ ಸಚಿವ ಪ್ರಿಯಾಂಕ್ ಖರ್ಗೆ, ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ತಂಗಡಗಿ ಶಿವರಾಜ ಸಂಗಪ್ಪ ಹಾಗೂ ಸಣ್ಣ ನೀರಾವರಿ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ ಡಾ. ಅಜಯ್ ಸಿಂಗ್ ಅವರನ್ನು ಉಪಸಮಿತಿಯ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.
ಈ ಹಿಂದೆ ಸಚಿವ ಪ್ರಿಯಾಂಕ್ ಖರ್ಗೆ ಅವರು ಉಪಸಮಿತಿಯ ಅಧ್ಯಕ್ಷರಾಗಿದ್ದರು. ಇದೀಗ ಅವರನ್ನು ಸದಸ್ಯರಾಗಿ ಮುಂದುವರಿಸಲಾಗಿದೆ.
371(ಜೆ) ಅಡಿಯಲ್ಲಿ ಕಲ್ಯಾಣ ಕರ್ನಾಟಕಕ್ಕೆ ದೊರೆತಿರುವ ವಿಶೇಷ ಸ್ಥಾನಮಾನದ ಅನುಷ್ಠಾನಕ್ಕೆ ಸಂಬಂಧಿಸಿದ ಆದೇಶಗಳು ಹಾಗೂ ಯೋಜನೆಗಳ ಪ್ರಗತಿಯನ್ನು ಪರಿಶೀಲಿಸಿ, ಅವುಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಅಗತ್ಯ ಕ್ರಮಗಳ ಕುರಿತು ಉಪಸಮಿತಿ ಕಾರ್ಯನಿರ್ವಹಿಸಲಿದೆ.
ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ಧಿಗೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ಪರಿಶೀಲನೆ ನಡೆಸಿ, ಸರ್ಕಾರಕ್ಕೆ ಅಗತ್ಯ ಸಲಹೆ ಹಾಗೂ ಶಿಫಾರಸುಗಳನ್ನು ನೀಡುವುದು ಉಪಸಮಿತಿಯ ಪ್ರಮುಖ ಜವಾಬ್ದಾರಿಯಾಗಿರಲಿದೆ.
ಕರ್ನಾಟಕ ಸರ್ಕಾರದ ವ್ಯವಹಾರ ನಿರ್ವಹಣಾ ನಿಯಮಗಳು, 1977ರ ನಿಯಮ 13(5) ಹಾಗೂ 2025ರ ಮಾರ್ಚ್ 15ರ ಸುತ್ತೋಲೆಯನ್ವಯ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಇಲಾಖೆಯು ಸಚಿವ ಸಂಪುಟ ಉಪಸಮಿತಿಗೆ ಅಗತ್ಯ ನೆರವು ನೀಡಲಿದೆ ಎಂದು ಸರ್ಕಾರದ ಅಧೀನ ಕಾರ್ಯದರ್ಶಿ (ಸಚಿವ ಸಂಪುಟ) ಜೆ. ಕುಮಾರಸ್ವಾಮಿ ಹೊರಡಿಸಿರುವ ಆದೇಶದಲ್ಲಿ ತಿಳಿಸಲಾಗಿದೆ.



