ಜಿಲ್ಲಾಸುದ್ದಿ

ತಿಲಕರಿಂದಲೇ ಸಾರ್ವಜನಿಕ ಗಣೇಶೋತ್ಸವ ಆರಂಭ: ಪುರಸಭೆ ಮುಖ್ಯಾಧಿಕಾರಿ ಭಾರತೀ ದಂಡೋತಿ

ಚಿತ್ತಾಪುರ, ಸೆ.23: ಬ್ರಿಟಿಷರ ಆಡಳಿತದಲ್ಲಿ ಸಭೆ-ಸಮಾರಂಭ ನಡೆಸಲು ಹಾಗೂ ಜನರು ಗುಂಪು ಸೇರಲು ನಿರ್ಬಂಧವಿದ್ದ ಸಂದರ್ಭದಲ್ಲಿ, ಜನರಲ್ಲಿ ರಾಷ್ಟ್ರೀಯತೆ ಮತ್ತು ಸ್ವಾತಂತ್ರ್ಯದ ಜಾಗೃತಿ ಮೂಡಿಸುವ ಉದ್ದೇಶದಿಂದ ಲೋಕಮಾನ್ಯ ಬಾಲಗಂಗಾಧರ ತಿಲಕರು ಸಾರ್ವಜನಿಕ ಗಣೇಶೋತ್ಸವವನ್ನು ಆರಂಭಿಸಿದರು ಎಂದು ಪುರಸಭೆ ಮುಖ್ಯಾಧಿಕಾರಿ ಭಾರತೀ ದಂಡೋತಿ ಹೇಳಿದರು.

ಪಟ್ಟಣದ ವರುಣ ನಗರದಲ್ಲಿರುವ ಶ್ರೀ ಶರಣಬಸವೇಶ್ವರ ದೇವಸ್ಥಾನದಲ್ಲಿ ಶ್ರೀ ಮಹಾಗಣಪತಿ ಉತ್ಸವ ಮಂಡಳಿ ವತಿಯಿಂದ ಮಂಗಳವಾರ ಸಂಜೆ ಆಯೋಜಿಸಿದ್ದ ಪ್ರಥಮ ವರ್ಷದ ಶ್ರೀ ಮಹಾಗಣಪತಿ ಉತ್ಸವ ಹಾಗೂ ಸಂಗೀತ ರಸಮಂಜರಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಮನೆಯಲ್ಲಿ ಮಾತ್ರ ಆಚರಿಸಲಾಗುತ್ತಿದ್ದ ಗಣೇಶ ಹಬ್ಬವನ್ನು ತಿಲಕರು ಸಾರ್ವಜನಿಕ ಉತ್ಸವವಾಗಿ ಪರಿವರ್ತಿಸಿದರು. ಅಂದಿನಿಂದ ಜಾತಿ, ಮತ, ಪಂಥದ ಭೇದವಿಲ್ಲದೆ ದೇಶದಾದ್ಯಂತ ಜನರು ಒಗ್ಗೂಡಿ ಗಣೇಶೋತ್ಸವವನ್ನು ಸಂಭ್ರಮದಿಂದ ಆಚರಿಸುತ್ತಿದ್ದಾರೆ ಎಂದರು.

ಕಂಬಳೇಶ್ವರ ಮಠದ ಸೋಮಶೇಖರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿ ಮಾತನಾಡಿ, ಗಣೇಶೋತ್ಸವಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಎಲ್ಲ ದೇವರುಗಳಲ್ಲಿ ಗಣಪತಿ ಶ್ರೇಷ್ಠನಾಗಿದ್ದು, ಯಾವುದೇ ಶುಭ ಕಾರ್ಯಕ್ಕೂ ಮೊದಲು ಗಣೇಶನ ಪೂಜೆ ಸಲ್ಲಿಸುವ ಸಂಪ್ರದಾಯವಿದೆ. ಶ್ರದ್ಧಾ-ಭಕ್ತಿಯಿಂದ ಗಣೇಶನನ್ನು ಪೂಜಿಸಿದರೆ ಎಲ್ಲ ಕಾರ್ಯಗಳು ಸಿದ್ಧಿಯಾಗುತ್ತವೆ ಎಂದು ಹೇಳಿದರು.

ಶ್ರೀ ಮಹಾಗಣಪತಿ ಉತ್ಸವ ಮಂಡಳಿ ಅಧ್ಯಕ್ಷ ಮೈಪಾಲ್ ಮೂಲಿಮನಿ ಹೊಸೂರು ಅಧ್ಯಕ್ಷತೆ ವಹಿಸಿದ್ದರು. ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ವಿಜಯಕುಮಾರ್ ದೇಶಮುಖ್ ಕಾರ್ಯಕ್ರಮ ಉದ್ಘಾಟಿಸಿದರು.

ಅಗ್ನಿಶಾಮಕ ಠಾಣಾಧಿಕಾರಿ ನಾಗರಾಜ ನಾಯಕ್, ಅಶೋಕ ರೆಡ್ಡಿ ಗೌಡ ಅಲ್ಲೂರು, ಬಸವರಾಜ ಗೌಡ ಮಾಲಿಪಾಟೀಲ್ ದಂಡಗುಂಡ, ಬಸವರಾಜಗೌಡ ಮಾಲಿಪಾಟೀಲ್ ಆಲೂರು ಸೇರಿದಂತೆ ಹಲವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಶರಣಬಸಪ್ಪ ಗಾರಂಪಳ್ಳಿ, ಮಲ್ಲಲಿಂಗ ದೊಡ್ಡಮನಿ, ವಸಂತ ಕಾಶಿ, ರೋಹಿತ್ ಚವ್ಹಾಣ್, ಪ್ರಭು ಹಲಕಟ್ಟಿ, ಜಯಂತ್ ಕುಲಕರ್ಣಿ, ಶರಣು ಸೂಳಹಳ್ಳಿ, ವಿಶ್ವನಾಥ ರೆಡ್ಡಿ ಇಜಾರಿ, ಕೋಟೇಶ್ವರ ರೇಷ್ಮೆ, ಅಂಬರೀಷ್ ಸುಲೇಗಾಂವ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button