ವಿಶ್ವಕರ್ಮ ಸೇರಿದಂತೆ ಸಣ್ಣ ಸಮುದಾಯಗಳ ಸಮಗ್ರ ಅಭಿವೃದ್ಧಿಗೆ ಹೊಸ ನೀತಿ ಜಾರಿಗೆ ದೇಸಾಯಿ ಕಲೂರ್ ಆಗ್ರಹ

ಕಲಬುರಗಿ, ಸೆ.23: ವಿಶ್ವಕರ್ಮ ಸೇರಿದಂತೆ ಕಾಯಕ (ಸಣ್ಣ) ಸಮುದಾಯಗಳಿಗೆ ಶಿಕ್ಷಣ, ಉದ್ಯೋಗ, ಆರ್ಥಿಕ ಅಭಿವೃದ್ಧಿ ಹಾಗೂ ರಾಜಕೀಯ ಕ್ಷೇತ್ರದಲ್ಲಿ ನ್ಯಾಯಯುತ ಅವಕಾಶಗಳು ದೊರೆಯುವಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸ್ಪಷ್ಟವಾದ ನೀತಿಗಳನ್ನು ರೂಪಿಸಬೇಕು ಎಂದು ಸಾಮಾಜಿಕ ಹೋರಾಟಗಾರ ಹಾಗೂ ಬಿಜೆಪಿ ನಗರ ಒಬಿಸಿ ಮೋರ್ಚಾ ಅಧ್ಯಕ್ಷ ದೇವೇಂದ್ರ ದೇಸಾಯಿ ಕಲೂರ್ ಆಗ್ರಹಿಸಿದ್ದಾರೆ.
ಸ್ವಾತಂತ್ರ್ಯ ದೊರೆತು ಸುಮಾರು ಎಂಟು ದಶಕಗಳು ಕಳೆದರೂ ಹಿಂದುಳಿದ ವರ್ಗಗಳಲ್ಲಿರುವ ಸಣ್ಣ ಹಾಗೂ ಅತಿ ಹಿಂದುಳಿದ ಸಮುದಾಯಗಳಿಗೆ ಸಮಾನ ಅವಕಾಶಗಳು ಸಮರ್ಪಕವಾಗಿ ದೊರೆಯುತ್ತಿಲ್ಲ ಎಂಬ ಪ್ರಶ್ನೆ ಎದುರಾಗಿದೆ. ಹಿಂದುಳಿದ ವರ್ಗಗಳ ಮೀಸಲಾತಿಯ ಹೆಚ್ಚಿನ ಪ್ರಯೋಜನಗಳು ಕೆಲವೇ ಪ್ರಬಲ ಸಮುದಾಯಗಳಿಗೆ ಸೀಮಿತವಾಗುತ್ತಿವೆ ಎಂಬ ಭಾವನೆ ಸಣ್ಣ ಸಮುದಾಯಗಳಲ್ಲಿ ಮೂಡಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಕುರುಬ, ಈಡಿಗ, ಅಂಬಿಗ ಸೇರಿದಂತೆ ಹಲವು ಸಮುದಾಯಗಳು ತಮ್ಮ ಸಂಘಟನೆ, ನಾಯಕತ್ವ ಮತ್ತು ಹೋರಾಟಗಳ ಮೂಲಕ ಸರ್ಕಾರದ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿವೆ. ಆದರೆ ವಿಶ್ವಕರ್ಮ, ಬಡಿಗ, ಅಕ್ಕಸಾಲಿಗ, ಕಂಬಾರ, ಕುಂಬಾರ, ಮಡಿವಾಳ, ನೇಕರ, ಹಡಪದ, ಅಗಸ, ಗಾಣಿಗ ಸೇರಿದಂತೆ ಅನೇಕ ಸಣ್ಣ ಸಮುದಾಯಗಳು ಇಂದಿಗೂ ಶಿಕ್ಷಣ, ಉದ್ಯೋಗ, ಆರ್ಥಿಕ ಅಭಿವೃದ್ಧಿ ಹಾಗೂ ರಾಜಕೀಯ ಪ್ರಾತಿನಿಧ್ಯದ ಅವಕಾಶಗಳಿಂದ ಹಿಂದುಳಿದಿವೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಸಂವಿಧಾನ ಪ್ರತಿಯೊಬ್ಬರಿಗೂ ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಭರವಸೆ ನೀಡಿದೆ. ಅದರ ಆಶಯದ ನೈಜ ಪ್ರಯೋಜನ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಬೇಕು. ಕೇವಲ ಮೀಸಲಾತಿ ವ್ಯವಸ್ಥೆ ಇರುವುದರಿಂದ ಮಾತ್ರ ಸಾಮಾಜಿಕ ನ್ಯಾಯ ಸಾಧ್ಯವಿಲ್ಲ. ಅದರ ಸೌಲಭ್ಯಗಳು ಎಲ್ಲ ಹಿಂದುಳಿದ ಸಮುದಾಯಗಳಿಗೂ ಸಮಾನವಾಗಿ ತಲುಪುವ ವ್ಯವಸ್ಥೆ ರೂಪಿಸಬೇಕಾಗಿದೆ ಎಂದರು.
ಹಿಂದುಳಿದ ವರ್ಗಗಳಲ್ಲಿರುವ ಸಣ್ಣ ಹಾಗೂ ಅತಿ ಹಿಂದುಳಿದ ಸಮುದಾಯಗಳ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿಗತಿಗಳ ಕುರಿತು ಸರ್ಕಾರಗಳು ಸಮಗ್ರ ಅಧ್ಯಯನ ನಡೆಸಬೇಕು. ಅಗತ್ಯವಿರುವ ಕಡೆ ಒಳ ಮೀಸಲಾತಿ ಅಥವಾ ಸೂಕ್ತ ಪ್ರಾತಿನಿಧ್ಯದ ವ್ಯವಸ್ಥೆ ಕಲ್ಪಿಸುವ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಸ್ವಾತಂತ್ರ್ಯಕ್ಕೆ ಇಷ್ಟು ವರ್ಷಗಳಾದರೂ ಸಾಮಾಜಿಕ ನ್ಯಾಯದ ಪ್ರಶ್ನೆ ಏಕೆ ಉಳಿದಿದೆ ಎಂಬುದನ್ನು ಸರ್ಕಾರಗಳು ಗಂಭೀರವಾಗಿ ಪರಿಗಣಿಸಬೇಕು. ಸಣ್ಣ ಸಮುದಾಯಗಳ ಹಕ್ಕುಗಳು ಮತ್ತು ಅವಕಾಶಗಳ ಕುರಿತು ಸರ್ಕಾರಗಳು ಗಮನಹರಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ದೇವೇಂದ್ರ ದೇಸಾಯಿ ಕಲೂರ್ ಆಗ್ರಹಿಸಿದ್ದಾರೆ.



