ಕಲ್ಯಾಣ ಕ್ರಾಂತಿಗೆ ಹೊಸ ಪೀಳಿಗೆಗೆ ದಾರಿದೀಪ: ಡಾ. ಕೆ.ಎಸ್. ನಾಯಕ್

ಕಲಬುರಗಿ, ಸೆ.21: ಹನ್ನೆರಡನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರ ನೇತೃತ್ವದಲ್ಲಿ ನಡೆದ ಕಲ್ಯಾಣ ಕ್ರಾಂತಿ ಹಾಗೂ ಶರಣರ ವೈಚಾರಿಕತೆ ಕೇವಲ ಆ ಕಾಲಕ್ಕೆ ಸೀಮಿತವಾಗಿರದೆ, ಇಂದಿನ ಹೊಸ ಪೀಳಿಗೆಗೂ ದಾರಿದೀಪವಾಗಿದೆ ಎಂದು ಹಿರಿಯ ಸಾಹಿತಿ ಡಾ. ಕೆ.ಎಸ್. ನಾಯಕ್ ಹೇಳಿದರು.
ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿಯ 13ನೇ ವಾರ್ಷಿಕೋತ್ಸವದ ಅಂಗವಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ನಗರದ ಕನ್ನಡ ಭವನದ ಸುವರ್ಣ ಸಭಾ ಭವನದಲ್ಲಿ ಭಾನುವಾರ ಆಯೋಜಿಸಿದ್ದ ‘ವಿಶ್ವ ವೈಚಾರಿಕ ದರ್ಶನ’ದಂತಿರುವ ಶರಣತತ್ವ ಚಿಂತನಾ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
“ಯಾವುದೇ ಕೆಲಸ ಕೀಳಲ್ಲ. ಪ್ರತಿಯೊಬ್ಬರೂ ಶ್ರಮಪಟ್ಟು ದುಡಿಯಬೇಕು ಎಂಬುದು ಶರಣರ ತತ್ವ. ನಮ್ಮಲ್ಲಿರುವ ಸ್ವಾರ್ಥವನ್ನು ಬದಿಗಿಟ್ಟು ಸಾಮಾಜಿಕ ಜವಾಬ್ದಾರಿಯ ಅರಿವು ಬೆಳೆಸಿಕೊಳ್ಳಬೇಕು” ಎಂದು ಹೇಳಿದರು.
ಕಸಾಪ ಜಿಲ್ಲೆಯಲ್ಲಿ ರಚನಾತ್ಮಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದು, ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಅವರು ಸಮ್ಮೇಳನಗಳ ಸರದಾರರೆನಿಸಿಕೊಂಡಿದ್ದಾರೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಬಸವಾದಿ ಶರಣರು ಯಾವುದೇ ಒಂದು ಜಾತಿ ಅಥವಾ ಸಮುದಾಯಕ್ಕೆ ಸೀಮಿತರಾದವರಲ್ಲ. ಅವರು ಎಲ್ಲ ಎಲ್ಲೆಗಳನ್ನು ಮೀರಿದವರು. ಸಮಾಜ ಪರಿವರ್ತನೆಗೆ ಅವರ ವಚನಗಳು ದಿವ್ಯ ಔಷಧಿಯಂತೆ ಕೆಲಸ ಮಾಡುತ್ತವೆ ಎಂದರು.
ಶರಣರ ವಚನಗಳಲ್ಲಿನ ಮೌಲ್ಯಗಳನ್ನು ಅರಿತುಕೊಳ್ಳಲು ಅವುಗಳನ್ನು ಅಧ್ಯಯನ ಮಾಡಬೇಕು. ವಚನಗಳನ್ನು ಕೇವಲ ಕಂಠಪಾಠ ಮಾಡುವುದರ ಜೊತೆಗೆ ಅವುಗಳ ಆಶಯದಂತೆ ಬದುಕು ಕಟ್ಟಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾಜಿ ಮೇಯರ್ ವರ್ಷಾ ರಾಜೀವ ಜಾನೆ, ಸಾಹಿತಿಗಳಾದ ಡಾ. ಜಗನ್ನಾಥ ತರನಳ್ಳಿ, ಮುಡುಬಿ ಗುಂಡೇರಾವ, ಹಿರಿಯ ಪತ್ರಕರ್ತ ಕಾಶಿನಾಥ ಗುತ್ತೇದಾರ ಚಿತ್ತಾಪುರ, ಅಕಾಡೆಮಿ ಅಧ್ಯಕ್ಷ ಬಿ.ಎಂ. ಪಾಟೀಲ ಕಲ್ಲೂರ, ಪೂಜಾ ಬಂಕಲಗಿ ಮತ್ತಿತರರು ಮಾತನಾಡಿದರು.
ಈ ಸಂದರ್ಭದಲ್ಲಿ ಶರಣ ದಂಪತಿಗಳಾದ ಕಾವೇರಿ ಡಾ. ಶರಣಬಸಪ್ಪ ಕಾರಭಾರಿ, ಭಾಗ್ಯಶ್ರೀ ಹನುಮಗೌಡ, ಜ್ಯೋತಿ ಲಕ್ಷ್ಮೀ ಸಂಜುಶೆಟ್ಟಿ, ಗಿರಿಜಾ ರುದ್ರಗೌಡ ಪಾಟೀಲ, ಸಂಗೀತಾ ಚಂದ್ರಶೆಟ್ಟಿ ಕಾಡಾದಿ, ಸುಷ್ಮಾವತಿ ಡಾ. ಶರಣು ಹೊನ್ನಗೆಜ್ಜೆ, ನೀಲಮ್ಮ ಸುನೀಲ ವಾಡಿ ಹಾಗೂ ಸಂಗಮ್ಮ ರೇವಣಸಿದ್ದಯ್ಯ ಮಠ ಅವರನ್ನು ‘ದಂಪತಿ ದರ್ಪಣ ಗೌರವ ಪುರಸ್ಕಾರ’ ನೀಡಿ ಸತ್ಕರಿಸಲಾಯಿತು.
ಇದೇ ವೇಳೆ ತಮ್ಮ ಕಾಯಕದ ಜೊತೆಗೆ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವ ಮಹೇಶಕುಮಾರ ಭಾವಿಕಟ್ಟಿ, ಜಗನ್ನಾಥ ಬಂಡಿ, ಜೈದೀಪ್ ಅಡವಿರಾಜ್ ಕೊಡ್ಲಿ, ಗುರುಬಸಪ್ಪ ಪಾಟೀಲ, ಪಂಡಿತ ಗೋವಿನ ಸರಸಂಬಾ, ಸಿದ್ದಲಿಂಗೇಶ್ವರ ಕೊನೆಕ, ಶಿವರಾಜ ಮಾಲಿಪಾಟೀಲ ತೇಗಲತಿಪ್ಪಿ, ಶಾಂತಾಬಾಯಿ ಹಿರೇಮಠ, ಡಾ. ಮಾಲಿನಿ ಡೇರೇದ, ಭಾಗ್ಯಶ್ರೀ ಪಾಟೀಲ ಕಲ್ಲಹಂಗರಗಾ, ಮಲ್ಲಿಕಾರ್ಜುನ ನೆಲ್ಲೂರ, ಎ.ಆರ್. ದತ್ತ, ಅಮರೇಶ್ವರ ನೂಲಾ, ನಾಗೇಂದ್ರಪ್ಪ ದಂಡೋತಿಕರ್ ಹಾಗೂ ರಾಜೇಂದ್ರ ಮಾನೆ ಅವರನ್ನು ‘ಕಾಯಕ ರತ್ನ ಗೌರವ ಪುರಸ್ಕಾರ’ ನೀಡಿ ಸನ್ಮಾನಿಸಲಾಯಿತು.
ಸಭೆಯಲ್ಲಿ ಪರಿಷತ್ ಜಿಲ್ಲಾ ಕಾರ್ಯದರ್ಶಿಗಳಾದ ಶಿವರಾಜ ಅಂಡಗಿ, ಧರ್ಮಣ್ಣ ಎಚ್. ಧನ್ನಿ, ಕೋಶಾಧ್ಯಕ್ಷ ಶರಣರಾಜ ಛಪ್ಪರಬಂದಿ, ಸೈಯದ್ ನಜರುದ್ದೀನ್ ಮುತವಲ್ಲಿ, ಪರಮೇಶ್ವರ ಶಟಕಾರ, ಮಹೇಶ ಗುತ್ತೇದಾರ, ಎಸ್.ಕೆ. ಬಿರಾದಾರ, ವೀರಭದ್ರಪ್ಪ ಗುರುಮಿಠಕಲ್, ವೀರೇಂದ್ರ ಕೊಳ್ಳೂರ, ರಾಜೇಂದ್ರ ಮಾಡಬೂಳ ಸೇರಿದಂತೆ ಹಲವರು ಉಪಸ್ಥಿತರಿದ್ದರು.



