ರಾಜ್ಯ

ಬರ ಪರಿಹಾರಕ್ಕಾಗಿ ಕೇಂದ್ರದ ಬಳಿ ಶೀಘ್ರ ಸರ್ವಪಕ್ಷ ನಿಯೋಗ: ಡಿ.ಕೆ. ಶಿವಕುಮಾರ್

ಕಲಬುರಗಿ, ಸೆ.17: ನಗರದ ಐವಾನ್-ಇ-ಶಾಹಿ ಅತಿಥಿಗೃಹದಲ್ಲಿ ಗುರುವಾರ ಮಧ್ಯಾಹ್ನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸುದ್ದಿಗೋಷ್ಠಿ ನಡೆಸುವ ಸಂದರ್ಭದಲ್ಲಿ ಪತ್ರಕರ್ತರು ಪ್ರಶ್ನೆ ಕೇಳಲು ಮುಂದಾದಾಗ ಪರಸ್ಪರ ಮುಂದೆ ಬರುವ ಪೈಪೋಟಿ ನಡೆಯಿತು. ಈ ವೇಳೆ ಯಾರಿಗೂ ಪ್ರತಿಕ್ರಿಯೆ ನೀಡದೆ, “ನೀವು ನನಗೆ ಹೊಡೆಯಲು ಬರ್ತೀರಾ?” ಎಂದು ತಮಾಷೆಯಾಗಿ ಪ್ರಶ್ನಿಸುವ ಮೂಲಕ ಮುಖ್ಯಮಂತ್ರಿ ಸುದ್ದಿಗೋಷ್ಠಿಯಲ್ಲಿ ನಗೆ ಮೂಡಿಸಿದರು.

ಬಳಿಕ ಮಾತನಾಡಿದ ಮುಖ್ಯಮಂತ್ರಿ, ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ರಾಜ್ಯ ಸರ್ಕಾರ ವಾರ್ಷಿಕ ₹5,000 ಕೋಟಿ ಅನುದಾನ ನೀಡುತ್ತಿದೆ. ಕೈಗಾರಿಕಾ ಬೆಳವಣಿಗೆ, ಹೊಸ ಉದ್ಯಮಗಳ ಸ್ಥಾಪನೆ, ಪ್ರವಾಸೋದ್ಯಮಕ್ಕೆ ಉತ್ತೇಜನ ಹಾಗೂ ರೈತರ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ ಎಂದರು.

ಬಡವರಿಗೆ 50,000 ನಿವೇಶನ, ಉದ್ಯೋಗ ಸೃಷ್ಟಿಗೆ ರಿಯಾಯಿತಿ ದರದಲ್ಲಿ ಭೂಮಿ, ಕ್ರೀಡಾ ನಗರಿ ಹಾಗೂ ಐಐಐಟಿಯಂತಹ ಯೋಜನೆಗಳನ್ನು ರೂಪಿಸಲಾಗುತ್ತಿದೆ ಎಂದು ತಿಳಿಸಿದರು.

ಕಲ್ಯಾಣ ಕರ್ನಾಟಕಕ್ಕೆ ಕೈಗಾರಿಕೆ, ಪ್ರವಾಸೋದ್ಯಮಕ್ಕೆ ಆದ್ಯತೆ

ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ರಾಜ್ಯ ಸರ್ಕಾರ ಪ್ರತಿವರ್ಷ ₹5,000 ಕೋಟಿ ಅನುದಾನ ನೀಡುತ್ತಿದೆ. ಈ ಭಾಗದಲ್ಲಿ ಯಾವುದೇ ಸಂಪನ್ಮೂಲ ಕೊರತೆಯಿಲ್ಲ. ಕೈಗಾರಿಕಾ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುವುದು. ಹೊಸ ಉದ್ಯಮಗಳು ಆರಂಭವಾಗಬೇಕು. ಪ್ರವಾಸೋದ್ಯಮ ಅಭಿವೃದ್ಧಿಗೂ ಹೆಚ್ಚಿನ ಆದ್ಯತೆ ನೀಡಲು ಸರ್ಕಾರ ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಹೇಳಿದರು.

ರೈತರ ಆದಾಯ ಹೆಚ್ಚಿಸಲು ಸಾಂಪ್ರದಾಯಿಕ ಬೆಳೆಗಳ ಜೊತೆಗೆ ವಿವಿಧ ಬೆಳೆಗಳಿಗೆ ಉತ್ತೇಜನ ನೀಡಲಾಗುವುದು. ಉದ್ಯೋಗ ಸೃಷ್ಟಿಗಾಗಿ ರಿಯಾಯಿತಿ ದರದಲ್ಲಿ ಭೂಮಿ ಒದಗಿಸಲಾಗುತ್ತಿದೆ ಎಂದರು.

ಕಲಬುರಗಿಯಲ್ಲಿ ಪರಿಪೂರ್ಣ ರಿಂಗ್‌ ರಸ್ತೆ, ಸ್ಮಾರ್ಟ್ ಸಿಟಿವಿ ಕ್ಯಾಮೆರಾ

ನಗರದ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಪೆರಿಫೆರಲ್ ರಿಂಗ್ ರಸ್ತೆಗೆ ಈಗಾಗಲೇ ಡಿಪಿಆರ್ ಸಿದ್ಧವಾಗಿದೆ. ಸುರಕ್ಷತೆಯ ದೃಷ್ಟಿಯಿಂದ ಕೃತಕ ಬುದ್ಧಿಮತ್ತೆ ಆಧಾರಿತ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

ಕಲಬುರಗಿಯಲ್ಲಿ ಸುಸಜ್ಜಿತ ಕ್ರೀಡಾ ನಗರಿ ಸ್ಥಾಪಿಸುವ ಬಗ್ಗೆಯೂ ಸರ್ಕಾರ ಚಿಂತನೆ ನಡೆಸಿದೆ. ವಸತಿ ರಹಿತ ಬಡವರಿಗೆ ಅರ್ಜಿ ಸಲ್ಲಿಸಲು ಸೂಚಿಸಲಾಗಿದ್ದು, ಈ ಭಾಗದಲ್ಲಿ ಒಟ್ಟು 50 ಸಾವಿರ ನಿವೇಶನಗಳನ್ನು ವಿತರಿಸಲು ನಿರ್ಧರಿಸಲಾಗಿದೆ ಎಂದರು.

ಗಾಣಗಾಪುರ, ಶ್ರೀ ಶರಣಬಸವೇಶ್ವರ ದೇವಸ್ಥಾನ, ಖಾಜಾ ಬಂದೇನವಾಜ್ ದರ್ಗಾ, ಬುದ್ಧ ವಿಹಾರ, ಸನ್ನತಿ ಸೇರಿದಂತೆ ಧಾರ್ಮಿಕ ಹಾಗೂ ಪ್ರವಾಸಿ ತಾಣಗಳ ಸಮಗ್ರ ಅಭಿವೃದ್ಧಿಗೆ ಕೆಕೆಆರ್‌ಡಿಬಿ ಮೂಲಕ ಅನುದಾನ ನೀಡಲು ಸೂಚಿಸಲಾಗಿದೆ. ಬೀದರ್ ಜಿಲ್ಲೆಯ ಬಸವಕಲ್ಯಾಣದ ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಅಲ್ಲಿ ವಚನ ಮಂಟಪ ನಿರ್ಮಾಣಕ್ಕೂ ನಿರ್ಧರಿಸಲಾಗಿದೆ. ಪರಿಸರ ಸಂರಕ್ಷಣೆ ಹಾಗೂ ಅರಣ್ಯ ಪ್ರದೇಶ ಹೆಚ್ಚಿಸುವ ಉದ್ದೇಶದಿಂದ ಬೃಹತ್ ಮಟ್ಟದಲ್ಲಿ ವೃಕ್ಷ ಅಭಿಯಾನ ನಡೆಸಲಾಗುವುದು ಎಂದು ಹೇಳಿದರು.

ಬರ ಪರಿಹಾರಕ್ಕೆ ಸರ್ವಪಕ್ಷ ನಿಯೋಗ

ರಾಜ್ಯದಲ್ಲಿ ಬರ ಪರಿಸ್ಥಿತಿ ನಿರ್ವಹಣೆಗೆ ಕೇಂದ್ರ ಸರ್ಕಾರದಿಂದ ವಿಶೇಷ ಅನುದಾನ ಕೇಳಬೇಕಿದೆ. ಈ ಹಿನ್ನೆಲೆಯಲ್ಲಿ ಅಶೋಕ್ ಅಣ್ಣ, ವಿಜಯೇಂದ್ರ ಅಣ್ಣ ಸೇರಿದಂತೆ ಹಲವು ನಾಯಕರನ್ನು ಒಳಗೊಂಡ ಸರ್ವಪಕ್ಷ ನಿಯೋಗವನ್ನು ದೆಹಲಿಗೆ ಕರೆದೊಯ್ಯಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು.

ರಾಜ್ಯದಲ್ಲಿ ಮಳೆ ಕೊರತೆ ಹಿನ್ನೆಲೆಯಲ್ಲಿ ಮೋಡ ಬಿತ್ತನೆಗೆ ನಿರ್ಧರಿಸಲಾಗಿದ್ದು, ಎಲ್ಲೆಲ್ಲಿ ಮೋಡಗಳು ಲಭ್ಯವಿರುತ್ತವೆಯೋ ಅಲ್ಲಿ ಈಗಾಗಲೇ ಮೋಡ ಬಿತ್ತನೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಕಸ್ತೂರಿ ರಂಗನ್ ವರದಿ ಹಾಗೂ ಬರ ಪರಿಸ್ಥಿತಿ ಕುರಿತು ಚರ್ಚಿಸಲು ವಿಶೇಷ ಅಧಿವೇಶನ ಕರೆಯುವ ಬಗ್ಗೆಯೂ ಸರ್ಕಾರ ಚಿಂತನೆ ನಡೆಸಿದೆ. ರೈತರ ಸಾಲಮನ್ನಾ ಮಾಡುವಂತೆ ಹಲವರು ಒತ್ತಾಯಿಸುತ್ತಿದ್ದಾರೆ ಎಂದು ಹೇಳಿದರು.

ಯುಪಿಐ ಪಾವತಿಗೆ ತೆರಿಗೆ ವಿಚಾರ: ಕೇಂದ್ರದ ವಿರುದ್ಧ ಆಕ್ಷೇಪ

ಯುಪಿಐ ಪಾವತಿಗಳ ಮೇಲೆ ತೆರಿಗೆ ವಿಧಿಸುವ ಕುರಿತು ಕೇಂದ್ರ ಸರ್ಕಾರದ ಪ್ರಸ್ತಾಪದ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ವ್ಯಾಪಾರಿಗಳ ಮೇಲೆ ತೆರಿಗೆ ವಿಧಿಸಿದರೆ ಅದರ ಹೊರೆ ಯಾರ ಮೇಲೆ ಬೀಳುತ್ತದೆ ಎಂದು ಪ್ರಶ್ನಿಸಿದರು.

“ನಾವು ಈಗಾಗಲೇ ಶಿಕ್ಷಕರಿಗೆ ಟಿಆರ್, ಎಂಜಿನಿಯರ್‌ಗಳಿಗೆ ಇಆರ್ ಎಂದು ಕರೆಯುವಂತೆ ಸಲಹೆ ನೀಡಿದ್ದೇವೆ. ಅದೇ ರೀತಿ ಯುಪಿಐ ತೆರಿಗೆ ವಿಚಾರದಲ್ಲಿ ಕೇಂದ್ರ ಸಚಿವರಿಗೆ ‘ಪಿಕ್‌ಪಾಕೆಟರ್ಸ್’ ಎಂದು ಕರೆಯಬೇಕಾಗುತ್ತದೆ” ಎಂದು ವ್ಯಂಗ್ಯವಾಡಿದರು.

ಕೇಂದ್ರ ಸರ್ಕಾರದ ಇಂತಹ ನಿರ್ಧಾರವನ್ನು ಖಂಡಿಸುವುದಾಗಿ ಹೇಳಿದ ಅವರು, ಡಿಜಿಟಲ್ ವಹಿವಾಟಿಗೆ ಉತ್ತೇಜನ ನೀಡುವ ಬದಲು ಮತ್ತೆ ತೆರಿಗೆ ವಿಧಿಸುವ ಅಗತ್ಯವೇನು ಎಂದು ಪ್ರಶ್ನಿಸಿದರು.

ಪತ್ರಕರ್ತರ ಪ್ರಶ್ನೆಗಳಿಗೆ ಸಿಎಂ ಪ್ರತಿಕ್ರಿಯೆ

ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರು ಭೀಮಾ ನದಿಯ ರಾಜ್ಯದ ಹಕ್ಕಿನ 15 ಟಿಎಂಸಿ ನೀರು, ಹೊಸ ಹತ್ತು ಯೋಜನೆಗಳಿಗೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಅನುದಾನ ಪಡೆಯದೆ ಕೈಗೊಳ್ಳುತ್ತಿರುವ ಕಾಮಗಾರಿಗಳು ಸೇರಿದಂತೆ ಹಲವು ವಿಷಯಗಳ ಕುರಿತು ಪ್ರಶ್ನೆಗಳನ್ನು ಕೇಳಿದರು.

ಒಬ್ಬೊಬ್ಬರಾಗಿ ಪ್ರಶ್ನೆ ಕೇಳಿದರೆ ಉತ್ತರಿಸಬಹುದು. ಎಲ್ಲರೂ ಒಟ್ಟಿಗೆ ಪ್ರಶ್ನೆ ಕೇಳಿದರೆ ಹೇಗೆ ಉತ್ತರಿಸಲಿ ಎಂದು ಮುಖ್ಯಮಂತ್ರಿ ಪ್ರತಿಕ್ರಿಯಿಸಿದರು.

ನಂತರ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದ ಸಂದರ್ಭದಲ್ಲಿ, “ನೀವು ಕೈಯಲ್ಲಿ ಉಳಿಹಿಡಿದುಕೊಂಡು ಬಂದಿದ್ದೀರಿ. ನೀವು ನನಗೆ ಹೊಡೆಯಲು ಬರ್ತೀರಾ?” ಎಂದು ತಮಾಷೆಯಾಗಿ ಹೇಳಿದಾಗ ಸುದ್ದಿಗೋಷ್ಠಿಯಲ್ಲಿ ನಗೆ ಮೂಡಿತು.

ಈ ಸಂದರ್ಭದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ, ಶಾಸಕರಾದ ತಿಪ್ಪಣ್ಣಪ್ಪ ಕಮಕನೂರ, ಜಗದೇವ ಗುತ್ತೇದಾರ, ಎಂ.ವೈ. ಪಾಟೀಲ, ಜಿಲ್ಲಾ ಕಾಂಗ್ರೆಸ್ ನೂತನ ಅಧ್ಯಕ್ಷ ಡಾ. ಕಿರಣ್ ದೇಶಮುಖ್, ಜೆಸ್ಕಾಂ ಅಧ್ಯಕ್ಷ ಪ್ರವೀಣ್ ಪಾಟೀಲ ಹರವಾಳ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button