ಕನ್ನಡದ ಜ್ಞಾನ ಪರಂಪರೆ ಸಂರಕ್ಷಣೆಗೆ ವಿದ್ಯಾರ್ಥಿಗಳು, ಸಂಶೋಧಕರು ಸೇತುವೆಯಾಗಿ: ಪ್ರೊ. ಬಟ್ಟು ಸತ್ಯನಾರಾಯಣ

ಕಲಬುರ್ಗಿ, ಸೆ.೧೫- ಶಾಸ್ತ್ರೀಯ ಕನ್ನಡ ಭಾಷೆ ಮತ್ತು ಆಧುನಿಕ ಭಾಷೆಗಳ ನಡುವಿನ ಬೆಳವಣಿಗೆಗೆ ವಿದ್ಯಾರ್ಥಿಗಳು ಹಾಗೂ ಸಂಶೋಧಕರು ಸೇತುವೆಯಾಗಿ ಕಾರ್ಯನಿರ್ವಹಿಸಬೇಕು ಎಂದು ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಅವರು ಹೇಳಿದರು.
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಕನ್ನಡ ವಿಭಾಗ ಹಾಗೂ ಮೈಸೂರಿನ ಭಾರತೀಯ ಭಾಷಾ ಸಂಸ್ಥಾನ (ಸಿಐಐಎಲ್) ಸಹಯೋಗದಲ್ಲಿ ಆಯೋಜಿಸಿರುವ ಕನ್ನಡ ಶಾಸ್ತ್ರೀಯ ಜ್ಞಾನ ಪರಂಪರೆ ಕುರಿತು ಎರಡು ದಿನಗಳ ರಾಷ್ಟ್ರೀಯ ಕಾರ್ಯಾಗಾರಕ್ಕೆ ಮಂಗಳವಾರ ಸಸಿಗೆ ನೀರೆರೆಯುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಪ್ರಾಚೀನ ಕನ್ನಡ ಸಾಹಿತ್ಯ, ಕಾವ್ಯ, ಹಳಗನ್ನಡ, ವ್ಯಾಕರಣ, ಶಾಸನಗಳು ಹಾಗೂ ಪಂಪ, ರನ್ನ, ಪೊನ್ನ ಸೇರಿದಂತೆ ಕನ್ನಡ ನಾಡಿಗೆ ಮತ್ತು ದೇಶಕ್ಕೆ ಅಪಾರ ಜ್ಞಾನ ಸಂಪತ್ತನ್ನು ನೀಡಿದ ನೂರಾರು ಕವಿಗಳ ಕುರಿತು ಹೆಚ್ಚಿನ ಸಂಶೋಧನೆ ಮತ್ತು ಅಧ್ಯಯನ ನಡೆಯಬೇಕು. ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ಕನ್ನಡದ ಸಾಹಿತ್ಯ ಮತ್ತು ಜ್ಞಾನ ಸಂಪತ್ತನ್ನು ಕೊಂಡೊಯ್ಯುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ಆಧುನಿಕ ತಂತ್ರಜ್ಞಾನದ ಬೆಳವಣಿಗೆಯೊಂದಿಗೆ ಭಾಷೆಯ ಬಳಕೆಯಲ್ಲಿಯೂ ಸಾಕಷ್ಟು ಬದಲಾವಣೆಗಳಾಗುತ್ತಿವೆ. ಈ ಕುರಿತು ನಾವೆಲ್ಲರೂ ಗಂಭೀರವಾಗಿ ಚಿಂತನೆ ನಡೆಸಬೇಕಿದೆ. ನಮ್ಮ ಪೂರ್ವಜರು ನೀಡಿದ ಅಮೂಲ್ಯ ಭಾಷಾ ಸಂಪತ್ತು ನಶಿಸದಂತೆ ಸಂರಕ್ಷಿಸುವುದು ಮುಖ್ಯವಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿ-೨೦೨೦ರ ಆಶಯದಂತೆ ಪ್ರಾದೇಶಿಕ ಭಾಷೆಗಳ ಮೂಲಕ ವಿಜ್ಞಾನ ಸೇರಿದಂತೆ ವಿವಿಧ ವಿಷಯಗಳ ಜ್ಞಾನವನ್ನು ವಿದ್ಯಾರ್ಥಿಗಳಿಗೆ ತಲುಪಿಸಿ, ಸಂಶೋಧನೆ ಹಾಗೂ ಉನ್ನತ ಅಧ್ಯಯನಕ್ಕೆ ಪ್ರೇರಣೆ ನೀಡಬೇಕು. ಭಾಷೆಯನ್ನು ಜ್ಞಾನದ ಮಾಧ್ಯಮವಾಗಿ ಬಳಸುವ ನಿಟ್ಟಿನಲ್ಲಿ ಎಲ್ಲರೂ ಕಾರ್ಯನಿರ್ವಹಿಸಬೇಕು ಎಂದು ಅವರು ಹೇಳಿದರು.
ಮೈಸೂರಿನ ಭಾರತೀಯ ಭಾಷಾ ಸಂಸ್ಥಾನದ ನಿರ್ದೇಶಕ ಪ್ರೊ. ಬಸವರಾಜ್ ಕೋಡಗುಂಟಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ನಮ್ಮ ಭಾಗದಲ್ಲಿಯೇ ನಾಗಾವಿ, ಮಳಖೇಡ, ನಾಗಾರ್ಜುನ ಸೇರಿದಂತೆ ಹಲವು ಐತಿಹಾಸಿಕ ಸ್ಥಳಗಳು ಭಾಷೆ ಮತ್ತು ಜ್ಞಾನ ಪರಂಪರೆಯ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡಿವೆ. ಈ ಕುರಿತು ಇನ್ನಷ್ಟು ಸಂಶೋಧನೆ ಮತ್ತು ಅಧ್ಯಯನ ನಡೆಯಬೇಕಿದೆ ಎಂದರು.
ಕರ್ನಾಟಕದ ಹಿರಿಯ ಸಂಶೋಧಕ ಡಾ. ದೇವರ ಕೊಂಡಾರೆಡ್ಡಿ ಅವರು ಮಾತನಾಡಿ, ಕನ್ನಡದ ಕೆಲವು ಶಾಸ್ತ್ರೀಯ ಗ್ರಂಥಗಳನ್ನು ಇಂದಿನ ವೈಜ್ಞಾನಿಕ ಹಿನ್ನೆಲೆಯಲ್ಲಿ ಅಧ್ಯಯನ ಮಾಡಬೇಕಿದೆ ಎಂದು ಹೇಳಿದರು.’ರಟ್ಟಮತ’ ಗ್ರಂಥದಲ್ಲಿ ಮೋಡಗಳ ವಿವಿಧ ವಿಧಗಳು, ಬರಗಾಲ, ಭೂಮಿಯೊಳಗಿನ ನೀರಿನ ಲಭ್ಯತೆಯ ವಿವಿಧ ಸ್ತರಗಳು ಹಾಗೂ ಗಿಡಮರಗಳ ಕುರಿತು ಮಹತ್ವದ ವಿವರಗಳಿವೆ. ಅದೇ ರೀತಿ ‘ಸೂಪಶಾಸ್ತ್ರ’ ಕೃತಿಯಲ್ಲಿ ಆಹಾರ ತಯಾರಿಕೆಯ ವೈಜ್ಞಾನಿಕ ವಿಧಾನಗಳು ಹಾಗೂ ದೇಹ ಮತ್ತು ಮನಸ್ಸಿಗೆ ಯಾವ ಆಹಾರಗಳು ಅನುಕೂಲಕರ ಎಂಬುದರ ಕುರಿತು ಚರ್ಚಿಸಲಾಗಿದೆ. ಇಂತಹ ಅನೇಕ ಶಾಸ್ತ್ರೀಯ ಗ್ರಂಥಗಳು ಕನ್ನಡದಲ್ಲಿ ಲಭ್ಯವಿದ್ದರೂ, ಅವುಗಳಲ್ಲಿರುವ ಜ್ಞಾನವನ್ನು ಇಂದಿನ ವೈಜ್ಞಾನಿಕ ದೃಷ್ಟಿಕೋನದಲ್ಲಿ ಅಧ್ಯಯನ ಮಾಡುವ ಕೆಲಸ ಇನ್ನಷ್ಟು ನಡೆಯಬೇಕಿದೆ. ಈ ನಿಟ್ಟಿನಲ್ಲಿ ಹೆಚ್ಚಿನ ಸಂಶೋಧನೆಗಳು ನಡೆಯಬೇಕು ಎಂದರು.
ಪ್ರೊ. ಸತ್ಯನಾರಾಯಣ ಅವರು ಶಾಸ್ತ್ರೀಯ ಕನ್ನಡ ಜ್ಞಾನ ಸಂಪತ್ತು ಮತ್ತು ವಿಜ್ಞಾನ: ಸವಾಲುಗಳು ಮತ್ತು ಹೊಸ ಸಾಧ್ಯತೆಗಳು, ಪ್ರೊ. ಬಸವರಾಜ್ ಕೋಡಗುಂಟಿ ಅವರು ಕನ್ನಡ ಧ್ವನಿವಿಜ್ಞಾನದ ೨೦೦೦ ವರ್ಷಗಳ ಇತಿಹಾಸ, ಡಾ. ಸಂಗಮೇಶ ಕಲ್ಯಾಣಿ ಅವರು ಅಮರಗನ್ನಡ ಮತ್ತು ಮೋಡಿ ಲಿಪಿ ಸೇರಿದಂತೆ ಅನೇಕ ವಿಷಯಗಳ ಕುರಿತು ಉಪನ್ಯಾಸ ನೀಡಿದರು. ಕಾರ್ಯಾಗಾರದಲ್ಲಿ ಪ್ರತಿನಿಧಿಗಳು, ಸಂಶೋಧನಾ ವಿದ್ಯಾರ್ಥಿಗಳು ಕನ್ನಡ ಶಾಸ್ತಿçÃಯ ವಿಷಯ ಸೇರಿದಂತೆ ವಿವಿಧ ವಿಷಯಗಳ ಕುರಿತು ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದರು.
ಕನ್ನಡ ವಿಭಾಗದ ಮುಖ್ಯಸ್ಥೆ ಪ್ರೊ. ಶಿವಗಂಗಾ ರುಮ್ಮಾ, ಮಾನವಿಕ ಮತ್ತು ಭಾಷಾ ನಿಕಾಯದ ಡೀನ್ ಪ್ರೊ. ಗಣೇಶ್ ಪವಾರ್, ಸಿಐಐಎಲ್ ಸಂಯೋಜಕ ಡಾ. ಎಲ್.ಆರ್. ಪ್ರೇಮ್ ಕುಮಾರ್ ಪ್ರೊ. ವಿಕ್ರಂ ವಿಸಾಜಿ, ಡಾ. ಟಿ. ಡಿ. ರಾಜಣ್ಣ, ಡಾ. ಅಪ್ಪಗೆರೆ ಸೋಮಶೇಖರ, ಡಾ. ವಿಜಯಕುಮಾರ್ ವಿಶ್ವಮಾನವ, ಡಾ. ಶಿವಾನಂದ ಬಂಟನೂರು, ಪ್ರೊ. ಸಂದೀಪ್ ರಣಬೀಕರ, ಡಾ. ಗೋವಿಂದ ಜಾಧವ, ಡಾ. ಶಿವಕುಮಾರ್ ಬೆಳ್ಳಿ ಸೇರಿದಂತೆ ವಿವಿಧ ವಿಭಾಗಗಳ ಪ್ರಾಧ್ಯಾಪಕರು, ಸಂಶೋಧನಾ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಡಾ. ರೋಹಿಣಾಕ್ಷ ಶಿರ್ಲಾಲು ಸ್ವಾಗತಿಸಿದರು.



