ಸಕಲ ಜೀವಾತ್ಮರಿಗೆ ಲೇಸನ್ನೆ ಬಯಸಿದ ಡಾ.ಅಪ್ಪ: ಡಾ. ನೀಲಾಂಬಿಕಾ ಪೋಲಿಸ್ ಪಾಟೀಲ್

ಕಲಬುರ್ಗಿ, ಸೆ.೧೫- ಡಾ.ಶರಣಬಸವಪ್ಪ ಅಪ್ಪ ಅವರು ಸಕಲ ಜೀವಿಗಳಿಗೆ ಲೇಸನ್ನೆ ಬಯಸಿದ್ದರು ಎಂದು ಶರಣಬಸವೇಶ್ವರ ದೇವಸ್ಥಾನ ಆವರಣದ ಶಾಲಾ-ಕಾಲೇಜುಗಳ ನಿರ್ದೇಶಕಿ ಡಾ. ನೀಲಾಂಬಿಕಾ ಪೋಲಿಸ್ ಪಾಟೀಲ್ ಅವರು ಹೇಳಿದರು.
ನಗರದ ಶರಣಬಸವೇಶ್ವರ ಪದವಿಪೂರ್ವ ಕಲಾ ಮಹಾವಿದ್ಯಾಲಯದಲ್ಲಿ ಮಂಗಳವಾರ ಹಮ್ಮಿಕೊಂಡ ಡಾ. ಶರಣಬಸವಪ್ಪ ಅಪ್ಪ ಅವರ ಜೀವನ ದರ್ಶನ ಮತ್ತು ಮಾಸ ಸರಣಿ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಅವರು, ಡಾ. ಅಪ್ಪ ಅವರು ಕಲ್ಯಾಣ ಕರ್ನಾಟಕ ಭಾಗದಲ್ಲಿ ಅನ್ನ, ಅಕ್ಷರಕ್ಕೆ ಮಹತ್ವ ನೀಡಿದ ದಾರ್ಶನಿಕರು. ಜ್ಞಾನ ದಾಸೋಹ ಮಾಡಿ ಇಡೀ ಜಗತ್ತಿನ ಭೂಪಟದಲ್ಲಿ ಕಲಬುರ್ಗಿಯ ಮೆರಗನ್ನು ಎತ್ತಿ ಹಿಡಿದವರು ಎಂದರು.
ಶಿಕ್ಷಣಕ್ಕಾಗಿ ಹಗಲು ರಾತ್ರಿಯೆನ್ನದೆ ಶ್ರಮಿಸಿದ ಶಿಕ್ಷಣದ ಹರಿಕಾರ. ದಾಸೋಹ ಮತ್ತು ಕಾಯಕವನ್ನೆ ವೃತ್ತಿಯಾಗಿಸಿಕೊಂಡು ಎರಡನೇ ಬಸವಣ್ಣನವರಾದರು. ಜಾತಿ ಬೇಧ ಬಾವ ಮಾಡದೆ ಎಲ್ಲರನ್ನು ಆತ್ಮೀಯವಾಗಿ ಕಂಡರು. ಅವರ ಜೀವನ ದರ್ಶನ ಮೇರು ಪರ್ವತದಷ್ಟಿದೆ. ಅದರಂತೆ ಡಾ. ಅವ್ವ ಮತ್ತು ಕಾರ್ಯದರ್ಶಿ ಬಸವರಾಜ್ ದೇಶಮುಖ ಅವರು ಅಪ್ಪ ಅವರು ಹಾಕಿದ ದಾರಿಯಲ್ಲಿ ಸಂಸ್ಥೆಯನ್ನು ಉತ್ತುಂಗಕ್ಕೆ ಬೆಳೆಸುತ್ತಿದ್ದಾರೆ ಎಂದು ಹೇಳಿದರು. ವಿದ್ಯಾರ್ಥಿಗಳು ಅವರು ಹಾಕಿದ ದಾರಿಯಲ್ಲಿ ನಡೆಯಬೇಕೆಂದು ಅವರು ಸಲಹೆ ನೀಡಿದರು.
ಉದ್ಘಾಟನೆ ನೆರವೇರಿಸಿದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯೆ ಡಾ. ಎಂ. ಸುಜಾತಾ ಅವರು ಮಾತನಾಡಿ, ಶರಣಬಸವೇಶ್ವರ ಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿಗಳಲ್ಲಿ ಶಿಸ್ತು, ಸಹನೆ, ಮಾನವೀಯ ಮೌಲ್ಯಗಳು ಕಂಡು ಬರುತ್ತವೆ ಏಕೆಂದರೆ ಡಾ. ಅಪ್ಪ ಅವರು ವಿದ್ಯಾರ್ಥಿಗಳಲ್ಲಿ ಉತ್ತಮ ಗುಣಗಳು, ಮೌಲ್ಯಯುತ ಶಿಕ್ಷಣ ನೀಡಿ ಬೆಳೆಸಿದವರು. ಪೂಜ್ಯ ಅಪ್ಪ ಅವರಿಂದ ಈ ಭಾಗ ಜಗತ್ತಿನಾದ್ಯಂತ ಗುರುತಿಸಲು ಸಾಧ್ಯವಾಗಿದೆ. ಅವರ ಜೀವನ ದರ್ಶನ ಪ್ರತಿಯೊಬ್ಬರಿಗೂ ಮಾರ್ಗದರ್ಶಕವಾಗಲಿ, ವಿದ್ಯಾರ್ಥಿಗಳು ಉತ್ತಮ ನಾಗರಿಕರಾಗಿ ಬೆಳೆಯಿರಿ ಎಂದು ಕಿವಿ ಮಾತು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯ ಪ್ರಾಚಾರ್ಯೆ ಶ್ರೀಮತಿ ಬಸಮ್ಮ ಎಸ್. ಚಿಂಚೋಳಿ ಅವರು ಮಾತನಾಡಿ, ಡಾ. ಅಪ್ಪ ಅವರು ಕೇವಲ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸದೆ, ಶಿಕ್ಷಣದ ಮೂಲಕ ಸಮಾಜವನ್ನು ಪರಿವರ್ತಿಸಿದ ಮಹಾನ್ ಚಿಂತಕರಾಗಿದ್ದರು. ಗ್ರಾಮೀಣ ಮತ್ತು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಶಿಕ್ಷಣ ಅವಕಾಶವನ್ನು ಕಲ್ಪಿಸಿಕೊಟ್ಟರು. ಮಹಿಳಾ ಶಿಕ್ಷಣಕ್ಕೆ ಉತ್ತೇಜನ ನೀಡಿ ಮಹಿಳಾ ಸಬಲೀಕರಣ ಮಾಡಿದರು ಎಂದರು. ಶ್ರೀಮತಿ ಸುಧಾ ಮಾಲಿ ಪಾಟೀಲ್ ಅವರು ಸ್ವಾಗತಿಸಿದರು. ದೌಲಪ್ಪ ಎಸ್. ಕಣ್ಣಿ ನಿರೂಪಿಸಿದರು. ಶ್ರೀಮತಿ ಶೋಭಾ ಹಿರೇಮಠ ವಂದಿಸಿದರು. ಮಹಾವಿದ್ಯಾಲಯದ ಎಲ್ಲ ಬೋಧಕ, ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.



