ಸೆ.17ರಂದು ಕೆಕೆಆರ್‌ಟಿಸಿಯ 24 ನೂತನ ಬಸ್‌ಗಳಿಗೆ ಚಾಲನೆ

ಕಲಬುರಗಿ, ಸೆ.15 ಸೆಪ್ಟೆಂಬರ್ 17 ರ ಕಲ್ಯಾಣ ಕರ್ನಾಟಕ ಉತ್ಸವ ದಿನದಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ 24 ನೂತನ ಬಸ್ಸುಗಳಿಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ಲೋಕಾರ್ಪಣೆಗೊಳಿಸಲಿದ್ದಾರೆ ಎಂದು ನಿಗಮ್ ಮುಖ್ಯ ಯಾಂತ್ರಿಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮವು 33.35 ಕೋಟಿ ವೆಚ್ಚದಲ್ಲಿ 20 ಹವಾ ನಿಯಂತ್ರಣ ರಹಿತ ಸ್ಲೀಪರ್ ಬಸ್, 20 ಎಸಿ ಸ್ಲೀಪರ್ ಹಾಗೂ 16 ಎಸಿ ಸೀಟರ್ ಸೇರಿದಂತೆ ಒಟ್ಟು 56 ಬಸ್ಸುಗಳ ಖರೀದಿಗೆ ಆದೇಶಿಸಲಾಗಿದ್ದು, ಇದರ ಮೊದಲ ಭಾಗವಾಗಿ ನೂತನ ಬಸ್ಸುಗಳಿಗೆ ಮುಖ್ಯಮಂತ್ರಿಗಳು ಸೆ.17ಕ್ಕೆ ಚಾಲನೆ ನೀಡಲಿದ್ದಾರೆ.
ಈ ಬಸ್ಸುಗಳನ್ನು AIS-052, 119, AIS-153 ಮತ್ತು AIS-119 ಆಟೋಮೋಟಿವ್ ಮಾನದಂಡಗಳಂತೆ ತಯಾರಿಸಲಾಗಿದೆ. ಪ್ರಯಾಣಿಕರ ಸುರಕ್ಷತೆಗೆ ಸ್ವಯಂಚಾಲಿತ ಅಗ್ನಿನಂದಕ ಉಪಕರಣ, ವೆಹಿಕಲ್ ಟ್ರ್ಯಾಕಿಂಗ್, ಪ್ಯಾನಿಕ್ ಬಟನ್, ರಿವರ್ಸ್ ಪಾರ್ಕಿಂಗ್ ಅಲರಾಮ್ ಹಾಗೂ ಎಲ್.ಇ.ಡಿ ಬೋರ್ಡ್‌ಗಳನ್ನು ಅಳವಡಿಸಲಾಗಿದೆ.
ನಾನ್ ಎಸಿ ಸ್ಲೀಪರ್ ಬಸ್ 30, ಎಸಿ ಸ್ಲೀಪರ್ ಬಸ್ 36 ಹಾಗೂ ಎಸಿ ಸೀಟರ್ ಬಸ್ 40 ರಿಕ್ಲೈನಿಂಗ್ ಟೈಪ್ ಮಾದರಿಯ ಸೀಟ್‌ಗಳಿವೆ. ಸುಖಕರ ಪ್ರಯಾಣಕ್ಕೆ ಎಲ್ಲಾ ಮಾದರಿಯ ಬಸ್ಸುಗಳಿಗೆ ಆಲ್ ವೀಲ್ ಏರ್ ಸಸ್ಪೆನ್ಷನ್, ಭದ್ರತೆಗೆ 4 ಸಿಸಿ ಕ್ಯಾಮೆರಾಗಳು ಹಾಗೂ ಸೀಟ್‌ಗಳ ಬಳಿ ರೀಡಿಂಗ್ ಲ್ಯಾಂಪ್, ಮೊಬೈಲ್ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ.
ರಾಜ್ಯದ ಗೃಹ ಸಚಿವರ ಪ್ರವಾಸ
ಕಲಬುರಗಿ,ಸೆ.15-ರಾಜ್ಯದ ಗೃಹ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಹಾಗೂ ಇ-ಆಡಳಿತ ಸಚಿವರು ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಸೆಪ್ಟೆಂಬರ್ 16 ರಂದು ಬುಧವಾರ ಕಲಬುರಗಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ಹಾಗೂ ನಿಗದಿತ ಕಾರ್ಯಕ್ರಮಗಳಲ್ಲಿ ಭಾಗವಹಿಸುವರು.
ಅಂದು ಸಂಜೆ 7.10 ಗಂಟೆಗೆ ಕಲಬುರಗಿ ವಿಮಾನ ನಿಲ್ದಾಣದಲ್ಲಿ ಮಾನ್ಯ ಮುಖ್ಯಮಂತ್ರಿಯವರನ್ನು ಬರಮಾಡಿಕೊಂಡು, ನಂತರ ಕಲಬುರಗಿಯಲ್ಲಿ ವಾಸ್ತವ್ಯ ಮಾಡುವರು.
ಸೆಪ್ಟೆಂಬರ್ 17 ರಂದು ಗುರುವಾರ ಬೆಳಿಗ್ಗೆ 8.25 ಗಂಟೆಗೆ ಎಸ್.ವಿ.ಪಿ. ವೃತ್ತದಲ್ಲಿ ಕಲ್ಯಾಣ ಕರ್ನಾಟಕ ಉತ್ಸವ-2026ರ ಅಂಗವಾಗಿ ಕಲಬುರಗಿ ನಗರದ ಸರ್ದಾರ ವಲ್ಲಭಭಾಯಿ ಪಟೇಲ್‍ರವರ ಪುತ್ಥಳಿಗೆ ಮಾಲಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸುವರು.
ಅಂದು ಬೆಳಿಗ್ಗೆ 9 ಗಂಟೆಗೆ ಕಲಬುರಗಿ ನಗರದ ಪೊಲೀಸ್ ಪರೇಡ್ ಮೈದಾನದಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಅಂಗವಾಗಿ ಧ್ವಜಾರೋಹಣ ಮತ್ತು ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸುವರು. ನಂತರ ಕಲ್ಯಾಣ ಕರ್ನಾಟಕ ಗುತ್ತಿಗೆದಾರರ ಸಂಘದ ವತಿಯಿಂದ ಮಾನ್ಯ ಮುಖ್ಯಮಂತ್ರಿಯವರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸುವರು.
ಅಂದು ಮಧ್ಯಾಹ್ನ 1 ಗಂಟೆಗೆ ಅಫಜಲಪುರ ತಾಲೂಕಿನಲ್ಲಿ ನಿಗದಿತ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಅಂದು ಸಂಜೆ ಕಲಬುರಗಿಯಿಂದ ರಸ್ತೆ ಮೂಲಕ ಮಂಗಳೂರಿಗೆ ಪ್ರಯಾಣಿಸುವರು. ರಾಜ್ಯದ ಮುಖ್ಯಮಂತ್ರಿಗಳ ಪ್ರವಾಸ
ಕಲಬುರಗಿ,ಸೆ.15-ರಾಜ್ಯದ ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ ಅವರು ಸೆಪ್ಟೆಂಬರ್ 16 ರಂದು ಬುಧವಾರ ಸಂಜೆ 7.10 ಗಂಟೆಗೆ ಬೆಂಗಳೂರಿನಿಂದ ವಿಶೇಷ ವಿಮಾನದ ಮೂಲಕ ಕಲಬುರಗಿ ವಿಮಾನ ನಿಲ್ದಾಣಕ್ಕೆ ಆಗಮಿಸುವರು. ನಂತರ ರಾತ್ರಿ ಕಲಬುರಗಿ ನಗರದ ಐವಾನ್ ಶಾಹಿ ವಸತಿ ಗೃಹದಲ್ಲಿ ವಾಸ್ತವ್ಯ ಮಾಡುವರು.
ಸೆಪ್ಟೆಂಬರ್ 17ರಂದು ಗುರುವಾರ ಬೆಳಿಗ್ಗೆ 8.25 ಗಂಟೆಗೆ ಕಲಬುರಗಿ ನಗರದ ಎಸ್.ವಿ.ಪಿ. ವೃತ್ತದಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ಅಂಗವಾಗಿ ಸರ್ದಾರ ವಲ್ಲಭ್‍ಭಾಯಿ ಪಟೇಲ್‍ರವರ ಪ್ರತಿಮೆಗೆ ಮಾಲಾರ್ಪಣೆ ಮಾಡುವರು. ನಂತರ ಬೆಳಿಗ್ಗೆ 9 ಗಂಟೆಗೆ ಕಲಬುರಗಿ ನಗರದ ಜಿಲ್ಲಾ ಪೊಲೀಸ್ ಪರೇಡ್ ಮೈದಾನದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸುವರು. ನಂತರ ಕಲ್ಯಾಣ ಕರ್ನಾಟಕ ಗುತ್ತಿಗೆದಾರರ ಸಂಘ (ರಿ) ವತಿಯಿಂದ ಮಾನ್ಯ ಮುಖ್ಯಮಂತ್ರಿಯವರಿಗೆ ಅಭಿನಂದನೆ ಕಾರ್ಯಕ್ರಮದಲ್ಲಿ ಭಾಗವಹಿಸುವರು.
ಅಂದು ಮಧ್ಯಾಹ್ನ 12 ಗಂಟೆಗೆ ಕಲಬುರಗಿ ಪೊಲೀಸ್ ಪರೇಡ್ ಮೈದಾನದಿಂದ ರಸ್ತೆ ಮೂಲಕ ಹೊರಟು ಮಧ್ಯಾಹ್ನ 1 ಗಂಟೆಗೆ ಅಫಜಲಪುರಕ್ಕೆ ಆಗಮಿಸಿ, ನಿಗದಿತ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಮಧ್ಯಾಹ್ನ 3 ಗಂಟೆಗೆ ಅಫಜಲಪುರದಿಂದ ರಸ್ತೆ ಮೂಲಕ ಹೊರಟು ಸಂಜೆ 4 ಗಂಟೆಗೆ ಕಲಬುರಗಿ ವಿಮಾನ ನಿಲ್ದಾಣಕ್ಕೆ ಆಗಮಿಸಿ, ಸಂಜೆ 4.10 ಗಂಟೆಗೆ ಕಲಬುರಗಿ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ಪ್ರಯಾಣಿಸುವರು.
ಸೆಪ್ಟೆಂಬರ್ 17 ರಂದು ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ
ಕಲಬುರಗಿ,ಸೆ,15-ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಅಂಗವಾಗಿ ಸೆಪ್ಟೆಂಬರ್ 17ರಂದು ಗುರುವಾರ ಬೆಳಿಗ್ಗೆ 8.45 ಗಂಟೆಗೆ ರಾಜ್ಯದ ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ ಅವರು ಕಲಬುರಗಿ ನಗರದ ಎಸ್.ವಿ.ಪಿ. ವೃತ್ತದಲ್ಲಿ ಸರ್ದಾರ ವಲ್ಲಭ್‍ಭಾಯಿ ಪಟೇಲ್‍ರವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ನಂತರ ಬೆಳಿಗ್ಗೆ 9 ಗಂಟೆಗೆ ಕಲಬುರಗಿ ನಗರದ ಜಿಲ್ಲಾ ಪೊಲೀಸ್ ಪರೇಡ್ ಮೈದಾನದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಲಿದ್ದಾರೆ.
ರಾಜ್ಯಸಭೆಯ ವಿರೋಧ ಪಕ್ಷದ ನಾಯಕರು ಹಾಗೂ ರಾಜ್ಯಸಭಾ ಸದಸ್ಯ ಡಾ. ಮಲ್ಲಿಕಾರ್ಜುನ ಖರ್ಗೆ ಅವರು ಘನ ಉಪಸ್ಥಿತಿ ವಹಿಸುವರು. ರಾಜ್ಯದ ಉಪ ಮುಖ್ಯಮಂತ್ರಿಗಳಾದ ಡಾ. ಜಿ. ಪರಮೇಶ್ವರ, ರಾಜ್ಯದ ಗೃಹ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಹಾಗೂ ಇ-ಆಡಳಿತ ಇಲಾಖೆಯ ಸಚಿವರು ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಯು.ಟಿ. ಖಾದರ್, ಸಾರಿಗೆ ಸಚಿವ ಭೈರತಿ ಸುರೇಶ, ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಖಾತೆ ಸಚಿವರಾದ ಡಾ. ಶರಣಪ್ರಕಾಶ ಪಾಟೀಲ, ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಡಾ. ಅಜಯಸಿಂಗ್ ಅವರು ಗೌರವ ಉಪಸ್ಥಿತಿವಹಿಸುವರು.
ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮದ ನಿಯಮಿತದ ಅಧ್ಯಕ್ಷೆ ಹಾಗೂ ಉತ್ತರ ಶಾಸಕಿ ಕನೀಜ್ ಫಾತೀಮಾ ಹಾಗೂ ಆಳಂದ ಶಾಸಕ ಹಾಗೂ ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷರಾದ ಬಿ.ಆರ್. ಪಾಟೀಲ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
ಕಲಬುರಗಿ ಲೋಕಸಭಾ ಸದಸ್ಯ ರಾಧಾಕೃಷ್ಣ ದೊಡ್ಡಮನಿ, ಬೀದರ ಲೋಕಸಭಾ ಸದಸ್ಯ ಸಾಗರ ಖಂಡ್ರೆ, ಶಾಸಕರುಗಳಾದ ಎಂ.ವೈ. ಪಾಟೀಲ, ಡಾ. ಅವಿನಾಶ ಉಮೇಶ ಜಾಧವ, ಬಸವರಾಜ ಮತ್ತಿಮಡು, ಅಲ್ಲಮಪ್ರಭು ಪಾಟೀಲ, ವಿಧಾನ ಪರಿಷತ್ ಶಾಸಕರುಗಳಾದ ಶಶೀಲ ಜಿ. ನಮೋಶಿ, ಡಾ. ಬಿ.ಜಿ.ಪಾಟೀಲ, ಡಾ. ಚಂದ್ರಶೇಖರ ಪಾಟೀಲ ಹುಮನಾಬಾದ, ತಿಮ್ಮಣ್ಣಪ್ಪ ಕಮಕನೂರ, ಜಗದೇವ ಗುತ್ತೇದಾರ್, ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷ ದೇವಿಂದ್ರಪ್ಪ ಮರತೂರ, ಕರ್ನಾಟಕ ರಾಜ್ಯ ವಕ್ಪ್ ಮಂಡಳಿಯ ಅಧ್ಯಕ್ಷ ಸೈಯದ್ ಮುಹಮ್ಮದ್ ಅಲಿ ಅಲ್ ಹುಸೇನಿ, ಅಚ್ಚುಕಟ್ಟು ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಬ್ದುಲ್ ರಶೀದ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಅರುಣಕುಮಾರ್ ಎಂ.ವೈ. ಪಾಟೀಲ, ಜೆಸ್ಕಾಂ ಅಧ್ಯಕ್ಷ ಪ್ರವೀಣ ಪಾಟೀಲ ಹರವಾಳ, ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಸೈಯ್ಯದ್ ಮಹೆಮೂದ್ ಚಿಸ್ತಿ ಸಾಹೇಬ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷೆ ಚಂದ್ರಿಕಾ ಪರಮೇಶ್ವರ್, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜಹರ್ ಆಲಂ ಖಾನ್ ಹಾಗೂ ಮಹಾನಗರಪಾಲಿಕೆ ಮಹಾಪೌರ ಅಜ್ಮಲ್ ಅಹ್ಮದ್ ಗೋಲಾ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
ಕಲಬುರಗಿ ಈಶಾನ್ಯ ವಲಯದ ಪೊಲೀಸ್ ಉಪ ಮಹಾನಿರೀಕ್ಷಕ ಶಾಂತನು ಸಿನ್ಹಾ, ಸಾರಿಗೆ ಇಲಾಖೆಯ ಕಾರ್ಯದರ್ಶಿ ದೀಪಾ ಚೋಳನ್, ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತರಾದ ಜಹೀರಾ ನಸೀಮ್, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಕಾರ್ಯದರ್ಶಿ ನಲಿನ್ ಅತುಲ್, ಕೆ.ಕೆ.ಆರ್.ಟಿ.ಸಿ. ವ್ಯವಸ್ಥಾಪಕ ನಿರ್ದೇಶಕರಾದ ಡಾ. ಬಿ. ಸುಶೀಲಾ, ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಶಶಿಧರ ಕುರೇರ್, ಜಿಲ್ಲಾಧಿಕಾರಿಗಳು ಹಾಗೂ ಕಲ್ಯಾಣ ಕರ್ನಾಟಕ ಉತ್ಸವ ಸಮಿತಿ ಅಧ್ಯಕ್ಷರಾದ ಇಕ್ರಂ ಶರೀಫ್, ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್.ಡಿ., ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಕಲಬುರಗಿ ವಿಭಾಗದ ಶಾಲಾ ಶಿಕ್ಷಣ ಇಲಾಖೆಯ ಅಪರ ಆಯುಕ್ತರಾದ ರಾಹುಲ್ ಶರಣಪ್ಪ ಸಂಕನೂರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸುಲು ಹಾಗೂ ಮಹಾನಗರ ಪಾಲಿಕೆ ಆಯುಕ್ತ ಅವಿನಾಶ ಶಿಂಧೆ ವಿಶೇಷ ಆಹ್ವಾನಿತರಾಗಿ ಪಾಲ್ಗೊಳ್ಳುವರು. ಸೆಪ್ಟೆಂಬರ್ 17 ರಂದು ಶ್ರೀ ವಿಶ್ವಕರ್ಮ ಜಯಂತಿ ಆಚರಣೆ
ಕಲಬುರಗಿ.ಸೆಪ್ಟೆಂಬರ_15_ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಪಂಚಾಯತ್ ಇವುಗಳ ಸಂಯುಕ್ತಾಶ್ರಯದಲ್ಲಿ ಶ್ರೀ ವಿಶ್ವಕರ್ಮ ಜಯಂತಿ ಕಾರ್ಯಕ್ರಮವನ್ನು ಸೆಪ್ಟೆಂಬರ್ 17 ರಂದು ಗುರುವಾರ ಮಧ್ಯಾಹ್ನ 2.30 ಗಂಟೆಗೆ ಕಲಬುರಗಿ ನಗರದ ಡಾ. ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.
ಕಲಬುರಗಿ ವಿಶ್ವಕರ್ಮ ಏಕದಂಡಿಗಿ ಮಠದ ಪರಮ ಪೂಜ್ಯ ಶ್ರೀ ಸುರೇಂದ್ರ ಮಹಾಸ್ವಾಮಿಗಳು ಮತ್ತು ಪೂಜ್ಯ ಶ್ರೀ ದೊಡ್ಡೇಂದ್ರ ಮಹಾಸ್ವಾಮಿಗಳು ಹಾಗೂ ಕಲಬುರಗಿ ವಿಶ್ವಕರ್ಮ ಮೂರುಝಾವದೀಶ್ವರ ಮಠದ ಪರಮ ಪೂಜ್ಯ ಶ್ರೀ ಪ್ರಣವ ನಿರಂಜನ ಮಹಾಸ್ವಾಮಿಗಳು ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸುವರು.
ರಾಜ್ಯಸಭೆಯ ವಿರೋಧ ಪಕ್ಷದ ನಾಯಕರು ಹಾಗೂ ರಾಜ್ಯಸಭಾ ಸದಸ್ಯ ಡಾ. ಮಲ್ಲಿಕಾರ್ಜುನ ಖರ್ಗೆ ಅವರು ಘನ ಉಪಸ್ಥಿತಿ ವಹಿಸುವರು. ರಾಜ್ಯದ ಗೃಹ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಹಾಗೂ ಇ-ಆಡಳಿತ ಇಲಾಖೆಯ ಸಚಿವರು ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಕಾರ್ಯಕ್ರಮವನ್ನು ಉದ್ಘಾಟಿಸುವರು.
ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಖಾತೆ ಸಚಿವರಾದ ಡಾ. ಶರಣಪ್ರಕಾಶ ಪಾಟೀಲ, ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಚಿವರಾದ ಡಾ. ಅಜಯಸಿಂಗ್, ಆಳಂದ ಶಾಸಕ ಹಾಗೂ ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷರಾದ ಬಿ.ಆರ್. ಪಾಟೀಲ ಹಾಗೂ ಕರ್ನಾಟಕ ರೇಷ್ಮೆ ಉದ್ದಿಮೆಗಳ ನಿಗಮದ ಅಧ್ಯಕ್ಷೆ ಹಾಗೂ ಉತ್ತರ ಶಾಸಕಿ ಕನೀಜ್ ಫಾತೀಮಾ ಅವರು ಗೌರವ ಉಪಸ್ಥಿತಿವಹಿಸುವರು. ಕಲಬುರಗಿ ದಕ್ಷಿಣ ಶಾಸಕ ಅಲ್ಲಮಪ್ರಭು ಪಾಟೀಲ್ ಅವರು ಕಾರ್ಯಕ್ರಮದ ಅಧ್ಯಕ್ಷತೆವಹಿಸುವರು.
ಕಲಬುರಗಿ ಲೋಕಸಭಾ ಸದಸ್ಯ ರಾಧಾಕೃಷ್ಣ ಆರ್. ದೊಡ್ಡಮನಿ, ಬೀದರ ಲೋಕಸಭಾ ಸದಸ್ಯ ಸಾಗರ ಖಂಡ್ರೆ, ಶಾಸಕರುಗಳಾದ ಎಂ.ವೈ. ಪಾಟೀಲ, ಬಸವರಾಜ ಮತ್ತಿಮಡು, ಡಾ. ಅವಿನಾಶ ಜಾಧವ, ವಿಧಾನ ಪರಿಷತ್ ಶಾಸಕರುಗಳಾದ ಶಶೀಲ ಜಿ. ನಮೋಶಿ, ಡಾ. ಬಿ.ಜಿ.ಪಾಟೀಲ, ಡಾ. ಚಂದ್ರಶೇಖರ ಪಾಟೀಲ ಹುಮನಾಬಾದ, ತಿಮ್ಮಣ್ಣಪ್ಪ ಕಮಕನೂರ, ಜಗದೇವ ಗುತ್ತೇದಾರ್, ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷ ದೇವಿಂದ್ರಪ್ಪ ಮರತೂರ, ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಅಧ್ಯಕ್ಷ ಸೈಯದ್ ಮುಹಮ್ಮದ್ ಅಲಿ ಅಲ್ ಹುಸೇನಿ, ಅಚ್ಚುಕಟ್ಟು ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಬ್ದುಲ್ ರಶೀದ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಅರುಣಕುಮಾರ್ ಎಂ.ವೈ. ಪಾಟೀಲ, ಜೆಸ್ಕಾಂ ಅಧ್ಯಕ್ಷ ಪ್ರವೀಣ ಪಾಟೀಲ ಹರವಾಳ, ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಸೈಯ್ಯದ್ ಮಹೆಮೂದ್ ಚಿಸ್ತಿ ಸಾಹೇಬ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷೆ ಚಂದ್ರಿಕಾ ಪರಮೇಶ್ವರ್, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜಹರ್ ಆಲಂ ಖಾನ್ ಹಾಗೂ ಮಹಾನಗರಪಾಲಿಕೆ ಮಹಾಪೌರ ಶೈಕ್ ಅಜ್ಮಲ್ ಅಫ್ಜಲ್ ಗೋಲಾ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
ಕಲಬುರಗಿ ಈಶಾನ್ಯ ವಲಯದ ಪೊಲೀಸ್ ಉಪ ಮಹಾನಿರೀಕ್ಷಕ ಶಾಂತನು ಸಿನ್ಹಾ, ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತರಾದ ಜಹೀರಾ ನಸೀಮ್, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಕಾರ್ಯದರ್ಶಿ ನಲಿನ್ ಅತುಲ್, ಕೆ.ಕೆ.ಆರ್.ಟಿ.ಸಿ. ವ್ಯವಸ್ಥಾಪಕ ನಿರ್ದೇಶಕರಾದ ಡಾ. ಬಿ. ಸುಶೀಲಾ, ಕಲಬುರಗಿ ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಶಶಿಧರ್ ಕುರೇರ್ ಹಾಗೂ ಕಲಬುರಗಿ ವಿಶ್ವಕರ್ಮ ಸಮಾಜದ ಹಿರಿಯ ಮುಖಂಡ ಸುಭಾಷ ಪಂಚಾಳ ವಿಶೇಷ ಆಹ್ವಾನಿತರಾಗಿ ಪಾಲ್ಗೊಳ್ಳುವರು.
ಕಾರ್ಯಕ್ರಮದಲ್ಲಿ ಕಲಬುರಗಿ ಸರ್ಕಾರಿ (ಸಾಯತ್ತ) ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಡಾ. ಲಕ್ಷ್ಮೀಕಾಂತ ಡಿ. ಪಂಚಾಳ ಅವರು ವಿಶೇಷ ಉಪನ್ಯಾಸ ನೀಡುವರು.
ಕಲ್ಯಾಣ ಕರ್ನಾಟಕ ಉತ್ಸವ ಅಂಗವಾಗಿ
ಜಿಲ್ಲಾ ವಿಜ್ಞಾನ ಕೇಂದ್ರವು ರಾತ್ರಿ 11 ಗಂಟೆಯವರೆಗೆ ತೆರೆದಿರಲಿದೆ
ಕಲಬುರಗಿ, ಸೆ.15 -ಕಲ್ಯಾಣ ಕರ್ನಾಟಕ ಉತ್ಸವದ ಅಂಗವಾಗಿ ಸಾರ್ವಜನಿಕರು ವಿಜ್ಞಾನ ಕೇಂದ್ರದಲ್ಲಿನ ವೈಜ್ಞಾನಿಕ ಪ್ರದರ್ಶನ ಹಾಗೂ ಸೌಲಭ್ಯಗಳ ವೀಕ್ಷಣೆಗಾಗಿ ಕಲಬುರಗಿ ಜಿಲ್ಲಾ ವಿಜ್ಞಾನ ಕೇಂದ್ರವು ಇದೇ ಸೆಪ್ಟೆಂಬರ್ 16 ಹಾಗೂ 17 ರಂದು ಎರಡು ದಿನಗಳ ಕಾಲ ರಾತ್ರಿ 11 ಗಂಟೆಯವರೆಗೆ ತೆರೆದಿಡಲು ನಿರ್ಧರಿಸಲಾಗಿದೆ ಎಂದು ಜಿಲ್ಲಾ ವಿಜ್ಞಾನ ಅಧಿಕಾರಿ ಎನ್. ಪೊನ್ನರಸನ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉತ್ಸವಕ್ಕೆ ಆಗಮಿಸುವ ಅಪಾರ ಸಂಖ್ಯೆಯ ವಿದ್ಯಾರ್ಥಿಗಳು, ಸಾರ್ವಜನಿಕರು ಹಾಗೂ ಕುಟುಂಬಸ್ಥರು ಸಂಭ್ರಮದ ನಡುವೆ ವಿಜ್ಞಾನದ ವಿಸ್ಮಯ ಲೋಕವನ್ನು ಆಸಕ್ತಿದಾಯಕವಾಗಿ ಅನುಭವಿಸಲು ಈ ವಿಶೇಷ ವಿಸ್ತರಿತ ಸಮಯದ ಅವಕಾಶ ಕಲ್ಪಿಸಲಾಗಿದೆ.
ಈ ವಿಸ್ತರಿತ ಸಮಯದಲ್ಲಿ ಕೇಂದ್ರಕ್ಕೆ ಭೇಟಿ ನೀಡುವ ಸಂದರ್ಶಕರು ಸಂವಾದಾತ್ಮಕ ವಿಜ್ಞಾನ ಪ್ರದರ್ಶನಗಳು, ವಿವಿಧ ವಿಜ್ಞಾನ ಗ್ಯಾಲರಿಗಳು, 3ಡಿ ಥಿಯೇಟರ್, ಆಕರ್ಷಕ ಖಗೋಳ ಲೋಕವನ್ನು ಪರಿಚಯಿಸುವ ಡಿಜಿಟಲ್ ತಾರಾಲಯ (Digital Planetarium) ಹಾಗೂ ಆಕಾಶ ವೀಕ್ಷಣಾ ಕಾರ್ಯಕ್ರಮ ಹಾಗೂ ಇತರೆ ಶೈಕ್ಷಣಿಕ ಸೌಲಭ್ಯಗಳನ್ನು ವೀಕ್ಷಿಸಬಹುದಾಗಿದೆ.
ಭೇಟಿ ನೀಡುವ ಸಂದರ್ಶಕರು ನಿಗದಿತ ಪ್ರವೇಶ ಶುಲ್ಕದ ಟಿಕೆಟ್‍ಗಳನ್ನು ಖರೀದಿಸುವ ಮೂಲಕ ಕೇಂದ್ರದ ಎಲ್ಲಾ ಶೈಕ್ಷಣಿಕ ಸೌಲಭ್ಯಗಳನ್ನು ವೀಕ್ಷಿಸಬಹುದಾಗಿದೆ. ಕಲ್ಯಾಣ ಕರ್ನಾಟಕ ಉತ್ಸವದ ಸಂಭ್ರಮದ ಜೊತೆಗೆ ವಿಜ್ಞಾನದ ಕಲಿಕೆಯನ್ನು ಸುಲಭವಾಗಿ ಅರಿಯಲು ಇದೊಂದು ಅತ್ಯುತ್ತಮ ಅವಕಾಶವಾಗಿದ್ದು, ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಅವರು ತಿಳಿಸಿದ್ದಾರೆ.
ರಾಜ್ಯದ ಸಣ್ಣ ನೀರಾವರಿ ಮತ್ತು ವಿಜ್ಞಾನ
ಮತ್ತು ತಂತ್ರಜ್ಞಾನ ಸಚಿವರ ಪ್ರವಾಸ
ಕಲಬುರಗಿ,ಸೆ.15-ರಾಜ್ಯದ ಸಣ್ಣ ನೀರಾವರಿ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ಸಚಿವರಾದ ಡಾ. ಅಜಯ ಧರ್ಮಸಿಂಗ್ ಅವರು ಇದೇ ಸೆಪ್ಟೆಂಬರ್ 16 ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡು ಕೆಳಕಂಡ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.
ಸೆಪ್ಟೆಂಬರ್ 16 ರಂದು ಬುಧವಾರ ಬೆಳಿಗ್ಗೆ 11 ಗಂಟೆಗೆ ಕಲಬುರಗಿ ದೊಡ್ಡಪ್ಪ ಅಪ್ಪ ಸಭಾ ಮಂಟಪದ ಕಾಲೇಜು ಕ್ಯಾಂಪಸ್‍ದಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಅಂಗವಾಗಿ 371 (ಜೆ) ಕಲಂ ಅನುಷ್ಠಾನದ ಸಾಧನೆ ಮತ್ತು ಆಶಯದ ಸರಣಿ ವಿಚಾರ ಸಂಕಿರಣದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವರು.
ಮಧ್ಯಾಹ್ನ 12 ಗಂಟೆಗೆ ಜೇವರ್ಗಿ ತಾಲೂಕಿನ ವಿರಕ್ತಮಠದ ಸೊನ್ನ ಆವರಣದಲ್ಲಿ ಶ್ರೀ ಸಿದ್ದಲಿಂಗೇಶ್ವರ ವಿರಕ್ತಮಠದ ಸೊನ್ನ ಲಿಂ. ಪೂಜ್ಯ ಶ್ರೀ ಶಿವಾನಂದ ಶಿವಯೋಗಿಗಳ 47ನೇ ಪುಣ್ಯ ಸ್ಮರಣೋತ್ಸವದ ಕಾರ್ಯಕ್ರಮದಲ್ಲಿ ಭಾಗವಹಿಸುವರು. ನಂತರ ಸಂಜೆ 7.10 ಗಂಟೆಗೆ ಕಲಬುರಗಿ ವಿಮಾನ ನಿಲ್ದಾಣದಲ್ಲಿ ಮಾನ್ಯ ಮುಖ್ಯಮಂತ್ರಿಯವರನ್ನು ಬರಮಾಡಿಕೊಂಡು, ಮಾನ್ಯ ಮುಖ್ಯಮಂತ್ರಿಗಳೊಂದಿಗೆ ನಿಗದಿತ ಕಾರ್ಯಕ್ರಮದಲ್ಲಿ ಭಾಗವಹಿಸುವರು. ನಂತರ ರಾತ್ರಿ 9.30 ಗಂಟೆಗೆ ಕಲಬುರಗಿಯಿಂದ ರಸ್ತೆ ಮೂಲಕ ರಾಯಚೂರಿಗೆ ಪ್ರಯಾಣಿಸುವರು.
ಸೆಪ್ಟೆಂಬರ್ 19 ಹಾಗೂ 20 ರಂದು
ಕಲಬುರಗಿ ಜಿಲ್ಲಾ ಮಟ್ಟದ ದಸರಾ ಸಿ.ಎಂ.ಕಪ್ 2026 ಕ್ರೀಡಾಕೂಟ
ಕಲಬುರಗಿ,ಸೆ.15.2026-27ನೇ ಸಾಲಿನ ಕಲಬುರಗಿ ಜಿಲ್ಲಾ ಮಟ್ಟದ ದಸರಾ ಸಿ.ಎಂ.ಕಪ್ 2026 ಕ್ರೀಡಾಕೂಟ (ಪುರುಷ/ಮಹಿಳೆಯರಿಗಾಗಿ) ವನ್ನು ಇದೇ ಸೆಪ್ಟೆಂಬರ್ 19 ಹಾಗೂ 20 ರಂದು ಎರಡು ದಿನಗಳ ಕಾಲ ಪ್ರತಿದಿನ ಬೆಳಿಗ್ಗೆ 9 ಗಂಟೆಯಿಂದ ಕೆಳಕಂಡ ಸ್ಥಳಗಳಲ್ಲಿ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ ಎಂದು ಕಲಬುರಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ಇದೇ ಸೆಪ್ಟೆಂಬರ್ 19ರಂದು ಪುರುಷ ಮತ್ತು ಮಹಿಳೆಯರಿಗೆ ಅಥ್ಲೇಟಿಕ್ಸ್, ವಾಲಿಬಾಲ್, ಕಬಡ್ಡಿ, ಖೋಖೋ, ಥ್ರೋಬಾಲ್, ಯೋಗಾ, ಕುಸ್ತಿ, ಬ್ಯಾಡ್ಮಿಂಟನ, ಬಾಲ್ ಬ್ಯಾಡ್ಮಿಂಟನ್, ಟೇಬಲ್ ಟೆನ್ನಿಸ್, ಟೆನ್ನಿಸ್, ನೆಟ್ಬಾಲ್, ಈಜು, ಜೂಡೋ ಸ್ಪರ್ಧೆಗಳನ್ನು ಕಲಬುರಗಿ ನಗರದ ಚಂದ್ರಶೇಖರ ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಅದೇ ರೀತಿ ಬಾಸ್ಕೆಟ್‍ಬಾಲ್ ಸ್ಪರ್ಧೆಯು ಅಕ್ಕಮಹಾದೇವಿ ಕಾಲೋನಿ ಅಂಕಣದಲ್ಲಿ, ಹ್ಯಾಂಡಬಾಲ್ ಸ್ಪರ್ಧೆಯು ಹೆಚ್.ಕೆ.ಇ. ಇಂಜಿನಿಯರಿಂಗ್ ಕಾಲೇಜು ಅಂಕಣದಲ್ಲಿ ಹಾಗೂ ಫುಟಬಾಲ್ (ಪುರುಷರಿಗೆ ಮಾತ್ರ) ಸ್ಪರ್ಧೆಯು ವಿರೇಂದ್ರ ಪಾಟೀಲ ಬಡಾವಣೆ ಫುಟಬಾಲ್ ಅಂಕಣದಲ್ಲಿ ಆಯೋಜಿಸಲಾಗಿದೆ.
ಇದೇ ಸೆಪ್ಟೆಂಬರ್ 20 ರಂದು (ಪುರುಷ ಮತ್ತು ಮಹಿಳೆಯರಿಗೆ) ಟೆಕ್ವಾಂಡೋ, ವುಶೂ, ಕರಾಟೆ, ಬಾಕ್ಸಿಂಗ್, ಭಾರಎತ್ತುವಿಕೆ ಮತ್ತು ಹಾಕಿ ಕ್ರೀಡಾಕೂಟವು ಕಲಬುರಗಿ ನಗರದ ಚಂದ್ರಶೇಖರ ಪಾಟೀಲ್ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ.
ತಾಲ್ಲೂಕು ಮಟ್ಟದಲ್ಲಿ ಆಯೋಜಿಸಿದ ಕ್ರೀಡೆಗಳಲ್ಲಿ ವೈಯಕ್ತಿಕ ಸ್ಪರ್ಧೆಯಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಹಾಗೂ ಗುಂಪು ಸ್ಪರ್ಧೆಗಳಲ್ಲಿ ಪ್ರಥಮಸ್ಥಾನ ಪಡೆದ ಕ್ರೀಡಾಪಟುಗಳು ಮಾತ್ರ ಭಾಗವಹಿಸಬಹುದು. ಜಿಲ್ಲಾಮಟ್ಟದಲ್ಲಿ ನೇರವಾಗಿ ಆಯೋಜಿಸುವ ಕ್ರೀಡೆಗಳಿಗೆ https://dasaracmcup.in ವೆಬ್‍ಸೈಟ್‍ದಲ್ಲಿ ಆನ್‍ಲೈನ್ ಮೂಲಕ ಕಡ್ಡಾಯವಾಗಿ ನೊಂದಣಿ ಮಾಡಿಕೊಳ್ಳಬೇಕು. ಕ್ರೀಡಾಕೂಟದಲ್ಲಿ ಭಾಗವಹಿಸುವ ಕ್ರೀಡಾಪಟುಗಳು ತಮ್ಮ ಆಧಾರ್‍ಕಾರ್ಡ್ ಮತ್ತು ಬ್ಯಾಂಕ್‍ಖಾತೆಯ (ಪಾಸ್‍ಬುಕ್ ಜೆರಾಕ್ಸ್) ವಿವರ ಕಡ್ಡಾಯವಾಗಿ ಸಲ್ಲಿಸಬೇಕು. ಕ್ರೀಡಾಕೂಟದಲ್ಲಿ ರಕ್ಷಣಾ ಪಡೆ, ಅರೆರಕ್ಷಣಾ ಪಡೆಗೆ ಸೇರಿದ ಕ್ರೀಡಾಪಟುಗಳು ಭಾಗವಹಿಸುವಂತಿಲ್ಲ.
ಜಿಲ್ಲಾ ಮಟ್ಟದಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ಮಧ್ಯಾಹ್ನದ ಲಘು ಉಪಹಾರ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಆಯಾ ತಾಲ್ಲೂಕಿನ ಕೇಂದ್ರ ಸ್ಥಾನದಿಂದ ಕಲಬುರಗಿಗೆ ಹೋಗಿ ಬರುವ ಸಾಮಾನ್ಯ ಪ್ರಯಾಣ ಭತ್ಯೆ ಕ್ರೀಡಾಪಟುಗಳಿಗೆ ಬ್ಯಾಂಕ ಖಾತೆ ವಿವರವನ್ನು ನೀಡಿದ್ದಲ್ಲಿ ಕೆ-2 ಮುಖಾಂತರ ಆನ್‍ಲೈನ್ ಮೂಲಕ ಬ್ಯಾಂಕ್‍ಖಾತೆಗೆ ಜಮಾ ಮಾಡಲಾಗುತ್ತದೆ.
ಕ್ರೀಡಾಕೂಟದ ನಿಬಂಧನೆಗಳು ಹಾಗೂ ಮತ್ತಿತರ ಹೆಚ್ಚಿನ ವಿವರಗಳಿಗಾಗಿ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತುಕ್ರೀಡಾ ಇಲಾಖೆ, ಚಂದ್ರಶೇಖರ ಪಾಟೀಲ್ ಜಿಲ್ಲಾ ಕ್ರೀಡಾಂಗಣ,ಕಲಬುರಗಿ ಕಚೇರಿಗೆ ಖುದ್ದಾಗಿ ಸಂಪರ್ಕಿಸಲು ಅಥವಾ ಕಚೇರಿಯ ದ್ವಿ.ದ.ಸ. ರಾದ ರಾಜಕುಮಾರ ಕೋರಳ್ಳಿ ಇವರ ಮೊಬೈಲ್ ಸಂಖ್ಯೆ 7795188841 ಗೆ ಸಂಪರ್ಕಿಸಲು ಕೋರಲಾಗಿದೆ



