ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವನೆ ಬೆಳೆಸುವಂತೆ ಶಿಕ್ಷಕರಿಗೆ ಸಚಿವ ಪ್ರಿಯಾಂಕ್ ಖರ್ಗೆ ಕರೆ

ಕಲಬುರಗಿ,ಸೆ.15 -ಇಂದಿನ ದಿನಮಾನದಲ್ಲಿ ಎ.ಐ ತಂತ್ರಜ್ಞಾನ (ಕೃತಕ ಬುದ್ದಿಮತೆ) ಎಷ್ಟೆ ಬೆಳೆದರು, ಶಿಕ್ಷಕರನ್ನು ಬದಲಿಯಾಗಿ ಬೋಧನೆ ಮಾಡಲು ಸಾಧ್ಯವಿಲ್ಲ. ಪ್ರಶ್ನೆ ಕೇಳಿದರೆ ತಂತ್ರಜ್ಞಾನ ಉತ್ತರಿಸಬಹುದು ಹೊರತು ಮಕ್ಕಳಲ್ಲಿ ಪ್ರಶ್ನೆ ಕೇಳುವ ಸಾಮರ್ಥ್ಯ ಬೆಳೆಸಲು ಎ.ಐ.ನಿಂದ ಸಾಧ್ಯವಿಲ್ಲ ಎಂದು ರಾಜ್ಯದ ಗೃಹ, ಐ.ಟಿ-ಬಿ.ಟಿ, ಇ-ಆಡಳಿತ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಕಲಬುರಗಿ ನಗರದ ಡಾ. ಎಸ್.ಎಮ್. ಪಂಡಿತ ರಂಗಮಂದಿರದಲ್ಲಿ ಆಯೋಜಿಸಿದ 2026-27ನೇ ಸಾಲಿನ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಉದ್ಘಾಟಿಸಿದಲ್ಲದೆ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ಮಕ್ಕಳಲ್ಲಿ ಮೌಲ್ಯಯುತ ಶಿಕ್ಷಣ ಬಿತ್ತಬೇಕಾದ ಬಹುದೊಡ್ಡ ಜವಾಬ್ದಾರಿ ಶಿಕ್ಷಕರ ಮೇಲಿದೆ. ಎ.ಐ. ತಂತ್ರಜ್ಣಾನ ಬಂದರೂ ನಿಮ್ಮ ಜವಾಬ್ದಾರಿ ಕಡಿಮೆಯಾಗಲ್ಲ. ಬದಲಿಗೆ ದಿನದಿಂದದಿನಕ್ಕೆ ಹೆಚ್ಚುತ್ತಲೆ ಇರುತ್ತೆ ಎಂದರು.
ಮಕ್ಕಳಿಗೆ ಸರಿ-ತಪ್ಪು ಯಾವುದು ಎಂಬುವ ಪ್ರಜ್ಞೆ ಬರಲು ಮಕ್ಕಳಿಗೆ ಶಿಕ್ಷಕರೆ ಬೋಧಿಸಬೇಕಾಗುತ್ತದೆ. ಸ್ಮಾರ್ಟ್ ಕ್ಲಾಸ್ ನಿರ್ಮಾಣದಿಂದ ಮಕ್ಕಳು ಸ್ಮಾರ್ಟ್ ಆಗಲ್ಲ. ಮಕ್ಕಳಿಗೆ ಪುರಾಣ, ಪ್ರವಚನ ಜೊತೆಗೆ ವೈಜ್ಞಾನಿಕ ಚಿಂತನೆ, ಕುತೂಹಲ ಹೆಚ್ಚಿಸುವ ಶಿಕ್ಷಣ ನೀಡಿದಾಗ, ಪ್ರಶ್ನೆ ಮಾಡುವ ಧೈರ್ಯ ಮಕ್ಕಳು ತೋರಿದಾಗಲೆ ಮಕ್ಕಳನ್ನು ಸ್ಮಾರ್ಟ್ ಎನ್ನಲು ಸಾಧ್ಯ ಎಂದರು.
ಪ್ರಬುದ್ಧ ಸಮಾಜ ನಿರ್ಮಾಣ ಮಾಡುವಲ್ಲಿ ಶಿಕ್ಷಕರ ಪಾತ್ರ ಹೆಚ್ಚಿದೆ. ಒಳ್ಳೆಯ ನಾಗರಿಕರಿಂದಲೆ ಉತ್ತಮ ಸಮಾಜ, ದೇಶ ನಿರ್ಮಾಣ ಸಾಧ್ಯವಿದ್ದು, ಅಂತಹ ಒಂದು ಪವಿತ್ರ ಕೆಲಸದ ಜವಾಬ್ದಾರಿ ಶಿಕ್ಷಕ ಬಂಧುಗಳ ಮೇಲಿದೆ. ನಗರದಲ್ಲಿ ಗುರು ಭವನಕ್ಕೆ ಶಿಕ್ಣಕರ ಸಂಘ ಬೇಡಿಕೆ ಇಟ್ಟಿದ್ದು, ಕುಡಾ ನಿವೇಶನದಲ್ಲಿ ಕಡಿಮೆ ರಿಯಾಯಿತಿಯಲ್ಲಿ ನೀಡಲಾಗುವುದು. ಜಿಲ್ಲೆಯ ಎಸ್.ಎಸ್.ಎಲ್.ಸಿ ಫಲಿತಾಂಶ ಕುಸಿದಾಗ ನನ್ನೊಂದಿಗೆ ನಿಮಗೂ ಜನ ಬೈತಾರೆ, ಅದಕ್ಕೆ ತಲೆಕೆಡಿಸಿಕೊಳ್ಳದೆ ಉತ್ತಮ ಫಲಿತಾಂಶ ತರಲು ನಿರಂತರ ಪ್ರಯತ್ನ ನಿಮ್ಮದಾಗಿರಬೇಕು ಎಂದು ಶಿಕ್ಷಕರಿಗೆ ಸಚಿವ ಪ್ರಿಯಾಂಕ್ ಖರ್ಗೆ ಕರೆ ನೀಡಿದರು.
24 ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ:
ಇದೇ ಸಂದರ್ಭದಲ್ಲಿ 2026-27ನೇ ಸಾಲಿನ
ಪ್ರಾಥಮಿಕ ಶಾಲಾ ವಿಭಾಗದಿಂದ 16 ಹಾಗೂ ಪ್ರೌಢಶಾಲಾ ವಿಭಾಗದಿಂದ 8 ಸೇರಿ 24 ಶಿಕ್ಷಕರಿಗೆ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯನ್ನು ಸಚಿವರು ಪ್ರದಾನ ಮಾಡಿದರು. ಅಲ್ಲದೆ ಕಲಬುರಗಿ ಜಿಲ್ಲೆಯಿಂದ ರಾಜ್ಯ ಮಟ್ಟದಲ್ಲಿ ಪ್ರಶಸ್ತಿ ಪುರಸ್ಕೃತ ನಿಂಗಪ್ಪ ಅವರಿಗೆ ವಿಶೇಷವಾಗಿ ಸನ್ಮಾನಿಸಲಾಯಿತು.
ಪ್ರಶಸ್ತಿ ಪುರಸ್ಕೃತ ಪ್ರಾಥಮಿಕ ವಿಭಾಗದ ಶಿಕ್ಷಕರು:
ಅಫಜಲಪುರ ತಾಲೂಕಿನ ಬಿದನೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಿರಿಯ ಮುಖ್ಯಗುರು ರಾಘವಚಾರ್ಯ ಆರ್. ಜೋಶಿ ಹಾಗೂ ಅಫಜಲಪೂರ ಪಿ.ಎಂ.ಶ್ರೀ ಸರ್ಕಾರಿ ಕನ್ಯಾ ಮಾದರಿ ಪ್ರಾಥಮಿಕ ಶಾಲೆಯ ಸಹಶಿಕ್ಷಕಿ ಚೆನ್ನಮ್ಮ ಗುಣಾರಿ, ಆಳಂದ ತಾಲೂಕಿನ ಬಿಲಗುಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಚಂದ್ರಕಾಂತ ಎನ್. ಬಬಲಾದಕರ್ ಹಾಗೂ ಸಾವಳೇಶ್ವರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಕ ಮಹಾದೇವ ಬಿ. ಗುಣಕಿ, ಚಿಂಚೋಳಿ ತಾಲೂಕಿನ ಅಂತಾವರಂ ತೆಲುಗು ಕಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕ ದಶರಥ ಮತ್ತು ಏತೆ ಬಾರಪೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಸಂಗ್ರಾಮಪ್ಪ ಉಚ್ಚೇದ, ಚಿತ್ತಾಪುರ ತಾಲೂಕಿನ ಗೋಟೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಶಂಕರ ಧೂಳಪ್ಪ ಭಾವಿಮನಿ ಮತ್ತು ಕೊಲ್ಲೂರ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ರಾಧಿಕಾ ಹೊಸೂರ, ಕಲಬುರಗಿ ಉತ್ತರ ತಾಲೂಕಿನ ಕಲಬುರಗಿ ಶೇಖ ರೋಜಾ ಉರ್ದು ಕನ್ಯಾ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಪರಮೇಶ್ವರ ಹೆಚ್. ಕುಂಬಾರ ಮತ್ತು ಕನವಳ್ಳಿ ತಾಂಡಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ನಿಂಗಪ್ಪ ಬಿ.ಪೂಜಾರಿ, ಕಲಬುರಗಿ ದಕ್ಷಿಣ ತಾಲೂಕಿನ ಫರಹತಾಬಾದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ಸರಸ್ವತಿ ಲಚ್ಯಾಣ, ಯಳವಂತಗಿ (ಕೆ) ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಸೂರ್ಯಕಾಂತ ನಿಂಬರ್ಗಾ ಹಾಗೂ ಕಲಬುರಗಿ ಜಗತ್ ಪ್ರದೇಶದ ಶ್ರೀ ಮೈಲಾರಲಿಂಗೇಶ್ವರ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರು ಸಿದ್ದಪ್ಪ ಶರಣಪ್ಪ ಹೂಗಾರ, ಜೇವರ್ಗಿ ತಾಲೂಕಿನ ಮಂದರವಾಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ಅನಿತಾ ಕಾಂಬಳೆ, ಸೇಡಂ ತಾಲೂಕಿನ ಸೇಡಂ ಪಟ್ಟಣದ ರೆಹಮತ್ ನಗರ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕಿ ನಿಶಾತ್ ಫಾತೀಮಾ ಮತ್ತು ಕೋಲಕುಂದಾ ದೊಡ್ಡ ತಾಂಡಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರು ವಿಜಯಕುಮಾರ.
ಪ್ರಶಸ್ತಿ ಪುರಸ್ಕೃತ ಪ್ರೌಢ ಶಾಲಾ ಶಿಕ್ಷಕರು:
ಆಳಂದ ತಾಲೂಕಿನ ಹಿರೋಳ್ಳಿ ಸರ್ಕಾರಿ ಪ್ರೌಢ ಶಾಲೆಯ ಸಹ ಶಿಕ್ಷಕಿ ಪಾಟೀಲ ಲಕ್ಷ್ಮೀ, ಚಿಂಚೋಳಿ ತಾಲೂಕಿನ ಪೋಲಕಪಳ್ಳಿ ಸರ್ಕಾರಿ ಆದರ್ಶ ವಿದ್ಯಾಲಯದ ಸಹ ಶಿಕ್ಷಕ ವಹಾಬ್ ಪಟೇಲ್, ಚಿತ್ತಾಪುರ ತಾಲೂಕಿನ ಭೀಮನಳ್ಳಿ ಸರ್ಕಾರಿ ಪ್ರೌಢಶಾಲೆಯ ಮುಖ್ಯಗುರು ಅಪ್ಪಯ್ಯ ಎಸ್. ಹಿರೇಮಠ, ಕಲಬುರಗಿ ಉತ್ತರ ತಾಲೂಕಿನ ಕಲ್ಲಹಂಗರಗಾ ಸರ್ಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಕಿ ಸಂಗೀತಾ ಠಾಕೂರ, ಕಲಬುರಗಿ ದಕ್ಷಿಣ ತಾಲೂಕಿನ ಫರಹತಾಬಾದ ಸರ್ಕಾರಿ ಪ್ರೌಢ ಶಾಲೆಯ ವೃ. ಶಿಕ್ಷಕಿ ಅಂಬುಜಾ ದೇಶಪಾಂಡೆ, ಅಫಜಲಪುರ ತಾಲೂಕಿನ ದೇವಲಗಾಣಗಾಪುರ (ಅನುದಾನಿತ) ತಿಪ್ಪಣ್ಣ ಕಂಟೆಪ್ಪ ಹೇರೂರ ಪ್ರೌಢಶಾಲೆಯ ಮುಖ್ಯಗುರು ರಾಜಶೇಖರ ತಂದೆ ಶ್ರೀಮಂತ, ಜೇವರ್ಗಿ ತಾಲೂಕಿನ ಕೂಡಿದರ್ಗಾ ಸರ್ಕಾರಿ ಪ್ರೌಢ ಶಾಲೆಯ ಸಹ ಶಿಕ್ಷಕ ಸೋಮಶೇಖರ ಹಿರೇಮಠ ಹಾಗೂ ಸೇಡಂ ತಾಲೂಕಿನ ಮುಧೋಳ ಕನ್ಯಾ ಕೆ.ಪಿ.ಎಸ್. ಪ್ರೌಢ ಶಾಲೆಯ ಸಹ ಶಿಕ್ಷಕ ಹನುಮಂತ ರೆಡ್ಡಿ.
ಕಲಬುರಗಿ ದಕ್ಷಿಣ ಶಾಸಕ ಅಲ್ಲಮಪ್ರಭು ಪಾಟೀಲ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ನಿಯಮಿತದ ಅಧ್ಯಕ್ಷರು ಮತ್ತು ಕಲಬುರಗಿ ಉತ್ತರ ಶಾಸಕಿ ಕನೀಜ್ ಫಾತೀಮಾ, ಕಲಬುರಗಿ ದಕ್ಷಿಣ ಶಾಸಕ ಅಲ್ಲಮಪ್ರಭು ಪಾಟೀಲ, ಜೆಸ್ಕಾಂ ಅಧ್ಯಕ್ಷ ಪ್ರವೀಣ ಪಾಟೀಲ ಹರವಾಳ, ಕೆ.ಕೆ.ಆರ್.ಟಿ.ಸಿ ಅಧ್ಯಕ್ಷ ಅರುಣಕುಮಾರ ಪಾಟೀಲ, ಕುಡಾ ಅಧ್ಯಕ್ಷ ಮಜಹರ್ ಆಲಂ ಖಾನ್, ಜಿಲ್ಲಾ ಪಂಚಾಯತ್ ಸಿ.ಇ.ಓ ರಾಹುಲ ಸಂಕನೂರ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಬಳೂಂಡಗಿ, ಡಿ.ಡಿ.ಪಿ.ಐ ಶಂಕ್ರೆಮ್ಮ ಡವಳಗಿ ಸೇರಿದಂತೆ ಶಿಕ್ಷಕ ಸಂಘದ ಪ್ರತಿನಿಧಿಗಳು, ನೂರಾರು ಸಂಖ್ಯೆಯಲ್ಲಿ ಶಿಕ್ಷಕ ವೃಂದ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದರು. ಇದಕ್ಕು ಮುನ್ನ ಸಂಪನ್ಮೂಲ ವ್ಯಕ್ತಿ ಜಗನ್ನಾಥ ರಾವ್ ಅವರು ಶಿಕ್ಷಕರ ವೃತ್ತಿ ಬದುಕು ಕುರಿತು ಉಪನ್ಯಾಸ ನೀಡಿದರು.



