ಶಿಕ್ಷಕರು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಶಿಲ್ಪಿಗಳು: ನೀಲಾಂಬಿಕಾ ಶೇರಿಕಾರ್

ಕಲಬುರಗಿ, ಸೆ.12: ಶಿಕ್ಷಕರು ಕೇವಲ ಪಾಠ ಬೋಧಿಸುವವರಲ್ಲ. ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ ಶಿಲ್ಪಿಗಳಾಗಿದ್ದಾರೆ ಎಂದು ಶರಣಬಸವೇಶ್ವರ ದೇವಾಲಯದ ಆವರಣದ ಶಾಲಾ–ಕಾಲೇಜುಗಳ ನಿರ್ದೇಶಕಿ ಡಾ. ನೀಲಾಂಬಿಕಾ ಶೇರಿಕಾರ್ ಹೇಳಿದರು.
ನಗರದ ಗೋದುತಾಯಿ ಶಿಕ್ಷಣ (ಬಿ.ಎಡ್) ಮಹಾವಿದ್ಯಾಲಯದಲ್ಲಿ ಶನಿವಾರ ಎರಡನೇ ಸೆಮಿಸ್ಟರ್ ವಿದ್ಯಾರ್ಥಿನಿಯರು ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯಗಳು, ಉತ್ತಮ ಗುಣಗಳು, ಸಂಸ್ಕಾರ ಹಾಗೂ ಉತ್ತಮ ವ್ಯಕ್ತಿತ್ವವನ್ನು ಬೆಳೆಸಬೇಕು ಎಂದರು.
ವೇದಕಾಲದ ಶಿಕ್ಷಣ ಪದ್ಧತಿ ಮತ್ತು ಪ್ರಸ್ತುತ ಶಿಕ್ಷಣ ವ್ಯವಸ್ಥೆಯ ನಡುವಿನ ವ್ಯತ್ಯಾಸಗಳನ್ನು ತಿಳಿಸಿದ ಅವರು, ಕಾಲ ಬದಲಾದರೂ ಶಿಕ್ಷಣದ ಮೂಲ ಉದ್ದೇಶ ಬದಲಾಗಿಲ್ಲ. ವ್ಯಕ್ತಿಯಲ್ಲಿ ಜ್ಞಾನ, ಶಿಸ್ತು, ಮಾನವೀಯತೆ, ನೈತಿಕತೆ, ಆತ್ಮವಿಶ್ವಾಸ, ಸೃಜನಶೀಲತೆ ಹಾಗೂ ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸುವುದು ಶಿಕ್ಷಕರ ಪ್ರಮುಖ ಹೊಣೆಗಾರಿಕೆಯಾಗಿದೆ ಎಂದು ಹೇಳಿದರು.
ಪೂಜ್ಯ ಡಾ. ಅಪ್ಪ ಅವರು ಶಿಕ್ಷಕರಿಗೆ ಮಹಾನ್ ಮಾರ್ಗದರ್ಶಕರಾಗಿದ್ದರು. ಅವರು ತೋರಿದ ದಾರಿಯಲ್ಲಿ ಸಾಗುತ್ತಿರುವ ಅನೇಕ ಶಿಕ್ಷಕರು ಇಂದು ಉತ್ತಮ ಶಿಕ್ಷಕರಾಗಿ ರೂಪುಗೊಂಡಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ. ಕಲ್ಪನಾ ಭೀಮಳ್ಳಿ ಮಾತನಾಡಿ, ಉತ್ತಮ ಶಿಕ್ಷಕರು ವಿದ್ಯಾರ್ಥಿಗಳಿಗೆ ಕೇವಲ ಪರೀಕ್ಷೆಯಲ್ಲಿ ಅಂಕ ಗಳಿಸುವುದನ್ನು ಕಲಿಸುವುದಿಲ್ಲ. ಜೀವನದ ಸವಾಲುಗಳನ್ನು ಧೈರ್ಯದಿಂದ ಎದುರಿಸುವ ಸಾಮರ್ಥ್ಯವನ್ನು ಬೆಳೆಸುತ್ತಾರೆ ಎಂದರು.
ಶರಣಬಸವೇಶ್ವರ ಸಂಸ್ಥಾನವು ಅನ್ನದಾಸೋಹದ ಜತೆಗೆ ಅಕ್ಷರ ದಾಸೋಹಕ್ಕೂ ಮಹತ್ವ ನೀಡುವ ಮೂಲಕ ಕಲ್ಯಾಣ ಕರ್ನಾಟಕವನ್ನು ಶಿಕ್ಷಣದ ಮೇರುಪರ್ವತವಾಗಿಸುವಲ್ಲಿ ಪೂಜ್ಯ ಡಾ. ಅಪ್ಪ ಹಾಗೂ ಪೂಜ್ಯ ಡಾ. ಅವ್ವ ಅವರ ಪರಿಶ್ರಮ ಅಪಾರವಾಗಿದೆ ಎಂದು ಹೇಳಿದರು.
ಕು. ಜವೇಯಿಯಾ ಅಂಜುಮಶೇಖ್ ಕಾರ್ಯಕ್ರಮ ನಿರೂಪಿಸಿದರು. ಕು. ಪ್ರಿಯಾಂಕಾ ಸ್ವಾಗತಿಸಿದರು. ಮಹಾವಿದ್ಯಾಲಯದ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.



