ಬೈಕ್, ಕೇಬಲ್ ವೈರ್ ಕಳ್ಳತನ: ಮೂವರ ಬಂಧನ

ಕಲಬುರಗಿ, ಸೆ.12: ಸೇಡಂ ಠಾಣೆ ವ್ಯಾಪ್ತಿಯ ವಿವಿಧೆಡೆ ನಡೆದ ಬೈಕ್ ಕಳ್ಳತನ ಹಾಗೂ ಕೇಬಲ್ ವೈರ್ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ, ಕಳವು ಮಾಡಿದ್ದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಬೀದರ್ ಜಿಲ್ಲೆಯ ಚಿಟಗುಪ್ಪ ತಾಲ್ಲೂಕಿನ ಮನ್ನಾಎಖೇಳ್ಳಿ ಗ್ರಾಮದ ಇಮಿಯಾಜ್ ತಂದೆ ಅಬ್ದುಲ್ ರಶೀದ್ ಶೇಖ್, ನವಾಬರದ ಬಿಲಾಲ್‌ಬಾದ್ ಕಾಲೊನಿಯ ರೆಹಮಾನ್‌ಬಿಯಾ ಮಜೀದ್ ನಿವಾಸಿ ಮುಯೀಜ್ ಅಹ್ಮದ್ ತಂದೆ ಮೊಹಮ್ಮದ್ ಅಯೂಬ್ ಹಾಗೂ ಮಹಾರಾಷ್ಟ್ರದ ಅಕ್ಕಲಕೋಟ ತಾಲ್ಲೂಕಿನ ಸಾಫಳೆ ಗ್ರಾಮದ ಆಕಾಶ್ ತಂದೆ ದೇವೇಂದ್ರ ಬಂಡಿಚೋಡ್ ಬಂಧಿತರು.
ಸೇಡಂ ರೈಲು ನಿಲ್ದಾಣದ ಸಿರಿಗೇರಿ ಮೂಲದ ಸುರೇಶ್ ನಾಗರಾಜ್ ನಾಯಮಕ್ ಅವರು ಮನೆ ಮುಂದೆ ನಿಲ್ಲಿಸಿದ್ದ ಮೋಟಾರ್ ಸೈಕಲ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಎಸ್‌ಐ ಉಪೇಂದ್ರಕುಮಾರ್ ಹಾಗೂ ಶರಣಪ್ಪ ಜಾಕನಳ್ಳಿ ನೇತೃತ್ವದ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು. ನಾಗರಾಜ್, ಬಾಲಕೃಷ್ಣರೆಡ್ಡಿ, ಶಿವಕುಮಾರ್ ಹಾಗೂ ಸಚಿನ್ ಅವರನ್ನೊಳಗೊಂಡ ತಂಡ ಮನ್ನಾಎಖೇಳ್ಳಿ ಗ್ರಾಮದ ಇಮಿಯಾಜ್ ತಂದೆ ಅಬ್ದುಲ್ ರಶೀದ್ ಶೇಖ್‌ನನ್ನು ಬಂಧಿಸಿ, ಕಳವು ಮಾಡಿದ್ದ ಮೂರು ಮೋಟಾರ್ ಸೈಕಲ್‌ಗಳನ್ನು ವಶಪಡಿಸಿಕೊಂಡಿದೆ.
ಇದೇ ರೀತಿ ಸೇಡಂನ ಬಸವನಗರದ ವಿನೋದಕುಮಾರ್ ಗಂಜಗೇರಿ ಅವರು ದೇಶಪಾಂಡೆ ಕಾಂಪ್ಲೆಕ್ಸ್ ಎದುರು ನಿಲ್ಲಿಸಿದ್ದ ಮೋಟಾರ್ ಸೈಕಲ್ ಕಳ್ಳತನ ಪ್ರಕರಣದಲ್ಲಿ ಪೊಲೀಸರು ಕಲಬುರಗಿಯ ಮುಯೀಜ್ ಅಹ್ಮದ್ ಹಾಗೂ ಕಾನೂನು ಸಂಘರ್ಷಕ್ಕೆ ಒಳಪಟ್ಟ ಬಾಲಕನನ್ನು ವಶಕ್ಕೆ ಪಡೆದು, ಒಂದು ಮೋಟಾರ್ ಸೈಕಲ್ ಮತ್ತು ಒಂದು ಆಟೊ ಜಪ್ತಿ ಮಾಡಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಸೇಡಂನ ಅಲ್ಟ್ರಾಟೆಕ್ ಸಿಮೆಂಟ್ ಕಂಪನಿಯ ಸೆಕ್ಯುರಿಟಿ ಹೆಡ್ ಅವರಿಗೆ ಸೇರಿದ 100 ಕೆ.ಜಿ. ತೂಕದ ಕಾಪರ್ ಕೇಬಲ್ ವೈರ್ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕಾರ್ಯಾಚರಣೆ ನಡೆಸಿ, ಮಹಾರಾಷ್ಟ್ರದ ಅಕ್ಕಲಕೋಟೆಯ ಆಕಾಶ್ ತಂದೆ ದೇವೇಂದ್ರ ಬಂಡಿಚೋಡ್‌ನನ್ನು ಬಂಧಿಸಿದ್ದಾರೆ. ಆತನಿಂದ ಕಳುವಾಗಿದ್ದ 56 ಕೆ.ಜಿ. ಕಾಪರ್ ವೈರ್ ಹಾಗೂ ಒಂದು ಲಾರಿ ಜಪ್ತಿ ಮಾಡಲಾಗಿದೆ.
ಪೊಲೀಸರ ಕಾರ್ಯಾಚರಣೆಯನ್ನು ಜಿಲ್ಲಾ ಪೊಲೀಸ್ ಹಿರಿಯ ಅಧಿಕಾರಿಗಳು ಶ್ಲಾಘಿಸಿದ್ದಾರೆ.



