ಚರ್ಚ್ ಆಸ್ತಿ ವಂಚನೆ ಆರೋಪ: ಬಿಷಪ್ ಅನಿಲ್ ಕುಮಾರ್ ಜಾನ್ ಸವಾರ್ಡ್ ರಾಜೀನಾಮೆಗೆ ಆಗ್ರಹ

ಕಲಬುರಗಿ, ಸೆ.12- ಬಹುಕೋಟಿ ಮೌಲ್ಯದ ಶಾಂತಿ ಸದನ ಮೆಥಡಿಸ್ಟ್ ಚರ್ಚ್ ಆಸ್ತಿ ವಂಚನೆ ಪ್ರಕರಣದಲ್ಲಿ ಆರೋಪಿಗಳಾಗಿರುವ ಬಿಷಪ್ ಅನಿಲ್ ಕುಮಾರ್ ಜಾನ್ ಸವಾರ್ಡ್ ಅವರನ್ನು ತಕ್ಷಣ ಅಮಾನತುಗೊಳಿಸಬೇಕು. ಇಲ್ಲವೇ ವಯೋಮಿತಿ ಮೀರಿರುವ ಹಿನ್ನೆಲೆಯಲ್ಲಿ ಅವರಿಂದ ರಾಜೀನಾಮೆ ಪಡೆಯಬೇಕು ಎಂದು ಸ್ಥಳೀಯ ಮೆಥಡಿಸ್ಟ್ ಚರ್ಚ್ ಇನ್ ಇಂಡಿಯಾದ ಗುಂಡೇಶ ಶಿವನೂರು ಆಗ್ರಹಿಸಿದರು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚರ್ಚ್ ಆಡಳಿತದಲ್ಲಿ ನಡೆದಿರುವ ಹಣಕಾಸು ಅಕ್ರಮ, ನಂಬಿಕೆ ದ್ರೋಹ ಹಾಗೂ ಚರ್ಚ್ ಸಂವಿಧಾನ ಮತ್ತು ನಿಯಮಗಳ ಉಲ್ಲಂಘನೆ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಆರ್ಕಿಡ್ ಮಾಲ್ ಹಿಂಭಾಗದಲ್ಲಿರುವ ಸರ್ವೆ ನಂ. 7/2ರ ಒಟ್ಟು 6 ಎಕರೆ 5 ಗುಂಟೆ ವಿಸ್ತೀರ್ಣದ ಶಾಂತಿ ಸದನ ಮೆಥಡಿಸ್ಟ್ ಚರ್ಚ್ ಆಸ್ತಿಗೆ ಸಂಬಂಧಿಸಿದಂತೆ ಬಹುಕೋಟಿ ಮೌಲ್ಯದ ಭೂವಂಚನೆ ಪ್ರಕರಣ ದಾಖಲಾಗಿದೆ. ಈ ಕುರಿತು ಸಿಟಿ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಖರೀದಿದಾರರನ್ನು ವಂಚಿಸಿ ಆಸ್ತಿ ವ್ಯವಹಾರ ನಡೆಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಪ್ರಕರಣದಲ್ಲಿ ₹20,23,43,140 ಮೊತ್ತದ ಅವ್ಯವಹಾರ ನಡೆದಿದೆ ಎಂದು ಆರೋಪಿಸಿದ ಅವರು, ಚರ್ಚ್ ಆಸ್ತಿಗೆ ಸಂಬಂಧಿಸಿದ ದಾಖಲೆಗಳು ಮತ್ತು ಸಾಕ್ಷ್ಯಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಸಂಬಂಧಿಸಿದ ಅಧಿಕಾರಿಗಳನ್ನು ತನಿಖೆ ಪೂರ್ಣಗೊಳ್ಳುವವರೆಗೆ ಆಡಳಿತಾತ್ಮಕ ಹಾಗೂ ಶೈಕ್ಷಣಿಕ ಹುದ್ದೆಗಳಿಂದ ದೂರವಿಡಬೇಕು ಎಂದು ಒತ್ತಾಯಿಸಿದರು.
2024ರ ಜನವರಿ 2ರಂದು ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಸಮಗ್ರವಾಗಿ ಪೂರ್ಣಗೊಳಿಸಿ ಕಾನೂನು ಪ್ರಕಾರ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯನ್ನು ಆಗ್ರಹಿಸಿದರು.
ಬಿಷಪ್ಗಳ ಚುನಾವಣೆಗೆ ಸಂಬಂಧಿಸಿದ ನಿಯಮಗಳು ಮತ್ತು ನಿವೃತ್ತಿ ವಯೋಮಿತಿಯನ್ನು ಉಲ್ಲೇಖಿಸಿದ ಅವರು, ಬಿಷಪ್ ಅನಿಲ್ ಕುಮಾರ್ ಜಾನ್ ಸವಾರ್ಡ್ ಅವರಿಗೆ ಪ್ರಸ್ತುತ 73 ವರ್ಷ ವಯಸ್ಸಾಗಿದ್ದು, 70 ವರ್ಷ ನಿವೃತ್ತಿ ವಯೋಮಿತಿ ಎಂದು ತಿಳಿಸಿದರು. ಆದ್ದರಿಂದ ಅವರು ಬಿಷಪ್ ಹುದ್ದೆಯಿಂದ ತಕ್ಷಣ ಕೆಳಗಿಳಿಯಬೇಕು ಎಂದು ಆಗ್ರಹಿಸಿದರು.
ಚರ್ಚ್ ಆಸ್ತಿ ಮತ್ತು ಹಣವು ಯಾವುದೇ ವ್ಯಕ್ತಿಯ ವೈಯಕ್ತಿಕ ಆಸ್ತಿಯಲ್ಲ. ಅವು ಸದಸ್ಯರು ಹಾಗೂ ಭಕ್ತರು ನಂಬಿಕೆಯಿಂದ ಒಪ್ಪಿಸಿರುವ ಸಾರ್ವಜನಿಕ ಧಾರ್ಮಿಕ ಆಸ್ತಿಯಾಗಿವೆ. ಪ್ರಕರಣದ ಆರೋಪಗಳ ಕುರಿತು ಪೂರ್ವನಿರ್ಧಾರಿತ ತೀರ್ಪು ನೀಡುವ ಉದ್ದೇಶವಿಲ್ಲ. ನ್ಯಾಯಯುತ, ಪಾರದರ್ಶಕ ಹಾಗೂ ಸಂಪೂರ್ಣ ತನಿಖೆ ನಡೆದು ಕಾನೂನು ಪ್ರಕಾರ ನ್ಯಾಯ ದೊರೆಯಬೇಕು ಎಂಬುದೇ ತಮ್ಮ ಉದ್ದೇಶ ಎಂದು ಅವರು ಸ್ಪಷ್ಟಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಯೇಸುನಾಥ್, ರಾಕೇಶ್, ಇಸಾಕ್ ವಿಜಯಕುಮಾರ್, ಮುತ್ತಣ್ಣ (ಬಚ್ಚನ್), ಥಾಮಸ್ ಶಿವನೂರು, ಚೇಲಿನ್ ದರ್ಗಿ, ಜೇಮ್ಸ್ ತೋರೆ, ಜೋಸೆಫ್ ಬಾಲ್ಕಿ, ವಿಜಯಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.



