ಕಲಬುರಗಿಯಲ್ಲಿ ಸೆ.17ಕ್ಕೆ ಪ್ರಾದೇಶಿಕ ಅಸಮತೋಲನ ನಿವಾರಣಾ ಸಂಕಲ್ಪ ಸಮಾವೇಶ

ಕಲಬುರಗಿ, ಸೆ.12- ಕಲ್ಯಾಣ ಕರ್ನಾಟಕದ ಪ್ರಾದೇಶಿಕ ಅಸಮತೋಲನ ನಿವಾರಣೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ರಾಜ್ಯ ಸರ್ಕಾರದ ಮುಂದಿಡುವ ಉದ್ದೇಶದಿಂದ ಸೆ.17ರಂದು ಬೆಳಿಗ್ಗೆ 11ಕ್ಕೆ ನಗರದ ಶ್ರೀ ಶರಣಬಸವೇಶ್ವರ ವಿಶ್ವವಿದ್ಯಾಲಯದ ದೊಡ್ಡಪ್ಪ ಅಪ್ಪ ಸಭಾಮಂಟಪದಲ್ಲಿ ಪ್ರಾದೇಶಿಕ ಅಸಮತೋಲನ ನಿವಾರಣಾ ಸಂಕಲ್ಪ ಸಮಾವೇಶ ಆಯೋಜಿಸಲಾಗಿದೆ ಎಂದು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ನೀಲಾ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅನುದಾನವನ್ನು ಮಾನವ ಅಭಿವೃದ್ಧಿಯ ದೃಷ್ಟಿಕೋನದಲ್ಲಿ ಕ್ರಿಯಾ ಯೋಜನೆ ರೂಪಿಸಿ ಬಳಸಬೇಕು. ದಶಕಗಳಿಂದ ಖಾಲಿ ಇರುವ ಸುಮಾರು 30 ಸಾವಿರ ಶಿಕ್ಷಕರ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು. ವಿವಿಧ ಇಲಾಖೆಗಳ ಖಾಲಿ ಹುದ್ದೆಗಳನ್ನು ಪೂರ್ಣ ಪ್ರಮಾಣದಲ್ಲಿ ನೇಮಕ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದರು.
ಸಂವಿಧಾನದ 371ಜೆ ಕಲಂ ಸಮರ್ಪಕವಾಗಿ ಜಾರಿಯಾಗಲು ಪ್ರತ್ಯೇಕ ಸಚಿವಾಲಯ ಆರಂಭಿಸಬೇಕು. ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆಗೆ ಕೇಂದ್ರ ಸರ್ಕಾರದ ಮೇಲೆ ರಾಜ್ಯ ಸರ್ಕಾರ ಒತ್ತಡ ಹೇರಬೇಕು. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅನುದಾನ ಬಳಕೆಯ ನಿಯಮಗಳನ್ನು ಸರಳೀಕರಿಸಿ, ಮಂಡಳಿಯು ಜನರಿಗೆ ಜವಾಬ್ದಾರಿಯುತ ಹಾಗೂ ಉತ್ತರದಾಯಿತ್ವದಿಂದ ಕಾರ್ಯನಿರ್ವಹಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಕೃಷ್ಣಾ ಮೇಲ್ದಂಡೆ ಯೋಜನೆಯಡಿ ಕರ್ನಾಟಕಕ್ಕೆ ಲಭ್ಯವಾಗುವ 700 ಟಿಎಂಸಿ ನೀರನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳಲು ಯೋಜನೆ ರೂಪಿಸಿ, ಕಲ್ಯಾಣ ಕರ್ನಾಟಕದ 15 ಲಕ್ಷ ಎಕರೆ ಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿದರು. ಇದಕ್ಕಾಗಿ ಕೇಂದ್ರ ಸರ್ಕಾರ ಗೆಜೆಟ್ ಅಧಿಸೂಚನೆ ಹೊರಡಿಸುವಂತೆ ರಾಜ್ಯ ಸರ್ಕಾರ ಒತ್ತಡ ಹೇರಬೇಕು ಎಂದರು.
ಮಹಾರಾಷ್ಟ್ರದ ಉಜನಿ ಜಲಾಶಯದಿಂದ 15 ಟಿಎಂಸಿ ನೀರನ್ನು ಭೀಮಾ ನದಿಗೆ ಹರಿಸಿ ಕರ್ನಾಟಕದ ಪಾಲಿನ ನೀರನ್ನು ಒದಗಿಸುವಂತೆ 1976ರಲ್ಲಿ ನ್ಯಾಯಮೂರ್ತಿ ಆರ್.ಎಸ್. ಬಚಾವತ್ ನೀಡಿರುವ ಆದೇಶವನ್ನು ಕೂಡಲೇ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಕಲ್ಯಾಣ ಕರ್ನಾಟಕದ ಎಲ್ಲ ವಿಶ್ವವಿದ್ಯಾಲಯಗಳಿಗೆ ಅಗತ್ಯ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯನ್ನು ಪೂರ್ಣ ಪ್ರಮಾಣದಲ್ಲಿ ನೇಮಕ ಮಾಡಬೇಕು. ಸುಸಜ್ಜಿತ ಕಟ್ಟಡಗಳು, ಪ್ರಯೋಗಶಾಲೆ, ಗ್ರಂಥಾಲಯ ಹಾಗೂ ವಿದ್ಯಾರ್ಥಿಗಳ ವಸತಿ ನಿಲಯಗಳನ್ನು ನಿರ್ಮಿಸಬೇಕು. ನಿರುದ್ಯೋಗಿ ವಿದ್ಯಾವಂತ ಯುವಕರಿಗೆ ಕೌಶಲ್ಯಾಭಿವೃದ್ಧಿ ಯೋಜನೆ ರೂಪಿಸಿ, ಕಲ್ಯಾಣ ಕರ್ನಾಟಕಕ್ಕೆ ಪ್ರತ್ಯೇಕ ಉದ್ಯೋಗ ಖಾತರಿ ಕಾಯ್ದೆ ಜಾರಿಗೊಳಿಸಬೇಕು ಎಂದು ಹೇಳಿದರು.
ಪ್ರದೇಶದಲ್ಲಿ ಕೈಗಾರಿಕಾ ಚಟುವಟಿಕೆಗೆ ಉತ್ತೇಜನ ನೀಡಲು ವಿಶೇಷ ಯೋಜನೆ ಘೋಷಿಸಬೇಕು. ಬಳ್ಳಾರಿ ಜೀನ್ಸ್ ಉದ್ಯಮವನ್ನು ಬಲಪಡಿಸಿ ಇಡೀ ಕಲ್ಯಾಣ ಕರ್ನಾಟಕಕ್ಕೆ ವಿಸ್ತರಿಸಬೇಕು. ರೈತರ ಸಾಲ ಮನ್ನಾ ಮಾಡಿ ಕೃಷಿ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು. ಪ್ರಾಥಮಿಕ ಶಿಕ್ಷಣದ ಗುಣಮಟ್ಟ ಸುಧಾರಣೆಗೆ ವಿಶೇಷ ಯೋಜನೆ ರೂಪಿಸಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಡಾ. ಮೀನಾಕ್ಷಿ ಬಾಳಿ, ಅರ್ಜುನ ಭದ್ರೆ, ನಾಗೇಂದ್ರ ಥಂಬೆ, ಮರೇಪ್ಪ ಹಳ್ಳಿ, ಮಹೇಶ್, ರಾಘವೇಂದ್ರ ಕುಷ್ಟಗಿ, ಪನ್ನರಾಜ್, ಚಾಮರಸ ಮಾಲಿಪಾಟೀಲ್, ಬಿ. ಬಸವರಾಜ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.



