ಜಿಲ್ಲೆಯಾದ್ಯಂತ ಏಕಕಾಲಕ್ಕೆ ದಾಳಿ:10 ಬಾಲ ಕಾರ್ಮಿಕರ ರಕ್ಷಣೆ

ಕಲಬುರಗಿ,ಸೆ.12-ಶನಿವಾರ ಕಲಬುರಗಿ ಜಿಲ್ಲೆಯಾದ್ಯಂತ 11 ತಾಲೂಕಗಳಲ್ಲಿ ಏಕಕಾಲಕ್ಕೆ ವಿವಿಧ ಇಲಾಖೆಯ ಅಧಿಕಾರಿಗಳ ಜಂಟಿ ತಂಡವು ದಾಳಿ ಮಾಡಿ ಹೋಟೆಲ್ ಗ್ಯಾರೇಜ್, ಚಿಕನ್ ಸೆಂಟರ ಮುಂತಾದವುಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದ 10 ಬಾಲ ಮತ್ತು ಕಿಶೋರ್ ಕಾರ್ಮಿಕ ಮಕ್ಕಳನ್ನು ರಕ್ಷಿಸಲಾಗಿದೆ.
ಅಲ್ಲದೆ ವಾಣಿಜ್ಯ ಮಳಿಗೆ, ಹೋಟೆಲ್, ರೆಸ್ಟೋರೆಂಟ್ ಹಾಗೂ ಇನ್ನಿತರ ಅಂಗಡಿಗಳ ಮಾಲಿಕರಿಗೆ ಕಾರ್ಮಿಕ ಕಾಯ್ದೆ ಕುರಿತು ಸಹ ಜಾಗೃತಿಮೂಡಿಸುವ ಕರಪತ್ರಗಳನ್ನು ನೀಡಿ ಅರಿವು ಮೂಡಿಸಲಾಯಿತು.
ಕಾರ್ಮಿಕ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಕ್ಕಳ ಸಹಾಯವಾಣಿ, ಡಾನ್ ಬಾಸ್ಕೋ, ಮಾರ್ಗದರ್ಶಿ ಸಂಸ್ಥೆ ಮತ್ತು ಪೊಲೀಸ್ ಇಲಾಖೆ ಸರ್ಕಾರದೊಂದಿಗೆ ತಪಾಸಣೆ ನಡೆಸಿ ರಕ್ಷಿಸಿದ 10 ಬಾಲ ಮತ್ತು ಕಿಶೋರ್ ಕಾರ್ಮಿಕ ಮಕ್ಕಳನ್ನು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಹಾಜರಪಡಿಸಿ, ತಾತ್ಕಾಲಿಕವಾಗಿ ಬಾಲಕರ ಬಾಲ ಮಂದಿರದಲ್ಲಿ ಪುನರವಸತಿ ಗೊಳಿಸಲಾಗಿದೆ.
ಇನ್ನು ಬಾಲ ಮತ್ತು ಕಿಶೋರ್ ಕಾರ್ಮಿಕರ ದಾಖಲಾತಿಗಳನ್ನು ಪರಿಶೀಲಿಸಿದ ನಂತರ ಬಾಲ ಮತ್ತು ಕಿಶೋರ್ ಕಾರ್ಮಿಕರ ನೇಮಿಸಿಕೊಂಡ ಮಾಲೀಕರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ಎಸ್.ಆರ್. ಹಳಿಮನಿ ತಿಳಿಸಿದ್ದಾರೆ.



