ರೌಡಿಶೀಟರ್ ಅಶೋಕ್ ಸಿಂಗೆಗೆ ಗಡಿಪಾರು: 16 ಪ್ರಕರಣಗಳ ಹಿನ್ನೆಲೆ ಕ್ರಮ

ಕಲಬುರಗಿ, ಸೆ.11: ನಗರದ ಕೆಎಸ್ಆರ್ಟಿಸಿ ಕಾಲೊನಿ ನಿವಾಸಿ ಗೌಂಡಿ ಅಶೋಕ್ ತಂದೆ ವಿಠಲರಾವ್ ಸಿಂಗೆ ಎಂಬ ರೌಡಿಶೀಟರ್ನನ್ನು ಬೆಂಗಳೂರು ನಗರದ ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಗೆ ಗಡಿಪಾರು ಮಾಡಿ ಆದೇಶ ಹೊರಡಿಸಲಾಗಿದೆ.
ಅಶೋಕ್ ವಿರುದ್ಧ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಟ್ಟು 16 ಪ್ರಕರಣಗಳು ದಾಖಲಾಗಿದ್ದು, ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಹಿನ್ನೆಲೆಯಲ್ಲಿ ಆತನ ವಿರುದ್ಧ ಗಡಿಪಾರು ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
2003ರಿಂದ 2026ರವರೆಗೆ ಭಾರತೀಯ ದಂಡ ಸಂಹಿತೆ (ಐಪಿಸಿ) ಅಡಿಯಲ್ಲಿ ಎಂಟು ಪ್ರಕರಣಗಳು, ಎನ್ಡಿಪಿಎಸ್ ಕಾಯ್ದೆಯಡಿ ನಾಲ್ಕು ಪ್ರಕರಣಗಳು ಹಾಗೂ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್ಎಸ್ಎಸ್) ಅಡಿಯಲ್ಲಿ ನಾಲ್ಕು ಪ್ರಕರಣಗಳು ಸೇರಿದಂತೆ ಒಟ್ಟು 16 ಪ್ರಕರಣಗಳು ದಾಖಲಾಗಿವೆ. ಈ ಹಿನ್ನೆಲೆಯಲ್ಲಿ ಅಶೋಕ್ನನ್ನು ‘ಎ’ ರೌಡಿ ಎಂದು ಗುರುತಿಸಲಾಗಿದ್ದು, ಆತನ ವಿರುದ್ಧ ರೌಡಿಶೀಟ್ ಕೂಡ ಚಾಲ್ತಿಯಲ್ಲಿದೆ.
ಕೊಲೆ ಯತ್ನ, ಸುಲಿಗೆ, ಮಹಿಳೆಯರ ಮಾನಭಂಗಕ್ಕೆ ಯತ್ನ, ಅಪಾಯಕಾರಿ ಆಯುಧಗಳಿಂದ ಹಲ್ಲೆ, ಶಾಂತಿ ಭಂಗಕ್ಕೆ ಪ್ರಚೋದನೆ, ಅಕ್ರಮ ಕೂಟ ರಚನೆ, ಸಾರ್ವಜನಿಕರೊಂದಿಗೆ ಜಗಳವಾಡಿ ಮಾರಕಾಸ್ತ್ರಗಳಿಂದ ಹಲ್ಲೆ ಸೇರಿದಂತೆ ಹಲವು ಆರೋಪಗಳು ಆತನ ವಿರುದ್ಧದ ಪ್ರಕರಣಗಳಲ್ಲಿ ದಾಖಲಾಗಿವೆ. ಅಲ್ಲದೆ, ಸಾರ್ವಜನಿಕ ಸ್ಥಳಗಳಲ್ಲಿ ಹೊಡೆದಾಟ, ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗುವುದು, ಜೀವ ಭಯ ಹುಟ್ಟಿಸುವುದು, ಅಪರಾಧ ಭಯೋತ್ಪಾದನೆ ಸೃಷ್ಟಿಸುವುದು ಹಾಗೂ ಅಕ್ರಮವಾಗಿ ಗಾಂಜಾ ಸಂಗ್ರಹಿಸುವ ಆರೋಪಗಳೂ ಇವೆ ಎಂದು ಪೊಲೀಸರು ತಿಳಿಸಿದ್ದಾರೆ.
ರೌಡಿಶೀಟರ್ನ ನಿರಂತರ ಕಾನೂನುಬಾಹಿರ ಚಟುವಟಿಕೆಗಳಿಂದ ಸಾರ್ವಜನಿಕರ ಶಾಂತಿ ಮತ್ತು ನೆಮ್ಮದಿಗೆ ಧಕ್ಕೆಯಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ, ಆತನ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಗಡಿಪಾರು ಮಾಡುವುದು ಸೂಕ್ತ ಹಾಗೂ ಅನಿವಾರ್ಯ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್.ಡಿ. ಅವರ ನಿರ್ದೇಶನದ ಮೇರೆಗೆ, ಸಂಬಂಧಪಟ್ಟ ಅಧಿಕಾರಿಗಳು ಗಡಿಪಾರು ಪ್ರಕ್ರಿಯೆ ಕೈಗೊಂಡಿದ್ದರು. ಪಿಐ ಸತೀಶ್ ಕಣಿವೇಶ್ವರ ಅವರು ಕರ್ನಾಟಕ ಪೊಲೀಸ್ ಕಾಯ್ದೆ–1963ರ ಕಲಂ 55ರ ಅಡಿಯಲ್ಲಿ ಗಡಿಪಾರಿಗೆ ವರದಿ ಸಲ್ಲಿಸಿದ್ದರು.
ಈ ಹಿನ್ನೆಲೆಯಲ್ಲಿ ನಗರ ಉಪ ಪೊಲೀಸ್ ಆಯುಕ್ತೆ ಶ್ರೀಮತಿ ಶಾಲೂ ಅವರು ವಿಚಾರಣೆ ನಡೆಸಿ, ಅಶೋಕ್ ಸಿಂಗೆ ಅವರನ್ನು ಬೆಂಗಳೂರು ನಗರದ ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಗೆ ಗಡಿಪಾರು ಮಾಡಿ ಆದೇಶ ಹೊರಡಿಸಿದ್ದಾರೆ.
ಸಾರ್ವಜನಿಕ ಶಾಂತಿ, ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ನಿರಂತರ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವವರ ವಿರುದ್ಧ ಕಾನೂನುಬದ್ಧವಾಗಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.



