ಜಿಲ್ಲಾಸುದ್ದಿ

ಕಲಬುರಗಿಯಲ್ಲಿ ಮೂರು ದಿನಗಳ ಬಿಲ್ಡ್-ಟೆಕ್ ಎಕ್ಸ್‌ಪೋ ಸೆ.4ರಿಂದ ಆರಂಭ

ಕಲಬುರಗಿ, ಸೆ.2- ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಷನ್ ವತಿಯಿಂದ ಸಂಘದ ಬೆಳ್ಳಿ ಹಬ್ಬದ ಆಚರಣೆ ಅಂಗವಾಗಿ ಸೆಪ್ಟೆಂಬರ್ 4, 5 ಹಾಗೂ 6ರಂದು ನಗರದ ಸಾರ್ವಜನಿಕ ಉದ್ಯಾನವನದ ವೀರಶೈವ ಕಲ್ಯಾಣ ಮಂಟಪದಲ್ಲಿ ‘ಬಿಲ್ಡ್-ಟೆಕ್ ಎಕ್ಸ್‌ಪೋ-2026’ ಹಾಗೂ 59ನೇ ಇಂಜಿನಿಯರ್ಸ್ ದಿನಾಚರಣೆ ಆಯೋಜಿಸಲಾಗಿದೆ ಎಂದು ಸಂಘದ ವಿಭಾಗೀಯ ಸದಸ್ಯ ಮುರಳೀಧರ್ ಜಿ. ಕರಲಗಿಕರ್ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರದರ್ಶನವು ಪ್ರತಿದಿನ ಬೆಳಿಗ್ಗೆ 10.30ರಿಂದ ರಾತ್ರಿ 8.30ರವರೆಗೆ ನಡೆಯಲಿದ್ದು, ಸಾರ್ವಜನಿಕರಿಗೆ ಉಚಿತ ಪ್ರವೇಶವಿರುತ್ತದೆ. ಸೆಪ್ಟೆಂಬರ್ 4ರಂದು ಬೆಳಿಗ್ಗೆ 11.30ಕ್ಕೆ ಎಕ್ಸ್‌ಪೋ ಉದ್ಘಾಟನೆಗೊಳ್ಳಲಿದೆ ಎಂದು ತಿಳಿಸಿದರು.

ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಷನ್ 2001ರಲ್ಲಿ ಸ್ಥಾಪನೆಯಾಗಿದ್ದು, ಜಿಲ್ಲೆಯ ವೃತ್ತಿಪರ ಸಿವಿಲ್ ಇಂಜಿನಿಯರ್‌ಗಳ ಸಂಘವಾಗಿದೆ. ವಿವಿಧ ತಾಂತ್ರಿಕ ಸಭೆಗಳು, ಕಾರ್ಯಾಗಾರಗಳು ಹಾಗೂ ತಾಂತ್ರಿಕ ಭೇಟಿಗಳನ್ನು ಆಯೋಜಿಸುವ ಮೂಲಕ ವೃತ್ತಿಪರ ಸಿವಿಲ್ ಇಂಜಿನಿಯರ್‌ಗಳ ಜ್ಞಾನವನ್ನು ಹೆಚ್ಚಿಸುವ ಮತ್ತು ನವೀಕರಿಸುವ ಕಾರ್ಯದಲ್ಲಿ ಸಂಘ ತೊಡಗಿಸಿಕೊಂಡಿದೆ. ರಕ್ತದಾನ ಶಿಬಿರ, ಆರೋಗ್ಯ ತಪಾಸಣಾ ಶಿಬಿರ, ಸಸಿ ನೆಡುವ ಕಾರ್ಯಕ್ರಮ ಹಾಗೂ ಅಗತ್ಯವಿದ್ದಾಗ ನಿರ್ಗತಿಕರಿಗೆ ದೇಣಿಗೆ ನೀಡುವಂತಹ ವಿವಿಧ ಸಾಮಾಜಿಕ ಚಟುವಟಿಕೆಗಳಲ್ಲಿಯೂ ಸಂಘ ತೊಡಗಿಸಿಕೊಂಡಿದೆ. ವೃತ್ತಿಪರ ಸಿವಿಲ್ ಇಂಜಿನಿಯರ್‌ಗಳ ಬಳಗದಲ್ಲಿ ಸೌಹಾರ್ದತೆ ಮತ್ತು ಭ್ರಾತೃತ್ವವನ್ನು ಉತ್ತೇಜಿಸುವ ನಿಟ್ಟಿನಲ್ಲಿಯೂ ಸಂಘ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.

ಎಕ್ಸ್‌ಪೋ ಉದ್ಘಾಟನೆಯನ್ನು ಶಾಸಕ ಅಲ್ಲಮಪ್ರಭು ಪಾಟೀಲ ನೆರವೇರಿಸಲಿದ್ದಾರೆ. ಮಾಜಿ ಸಚಿವ ಹಾಗೂ ಶಹಾಪುರ ಶಾಸಕ ಶರಣಬಸಪ್ಪ ದರ್ಶನಾಪುರ ಮತ್ತು ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ. ನಮೋಶಿ ದೀಪ ಬೆಳಗಿಸಲಿದ್ದಾರೆ. ಗೌರವಾನ್ವಿತ ಅತಿಥಿಗಳಾಗಿ ಇಮ್ರಾನ್ ಖಾನ್ ಹಾಗೂ ಮುರಳೀಧರ್ ಜಿ. ಕರಲಗಿಕರ್ ಆಗಮಿಸಲಿದ್ದಾರೆ. ಅಧ್ಯಕ್ಷತೆಯನ್ನು ಜಿತೇಂದ್ರ ಎಚ್. ಮಿಶ್ರಾ ವಹಿಸಲಿದ್ದಾರೆ ಎಂದು ತಿಳಿಸಿದರು.

ಪ್ರದರ್ಶನದಲ್ಲಿ ಪೀಠೋಪಕರಣಗಳು, ವಿನ್ಯಾಸ ಪೀಠೋಪಕರಣಗಳು, ಹೋಮ್ ಆಟೊಮೇಷನ್, ಸೌರ ವ್ಯವಸ್ಥೆಗಳು, ಭದ್ರತಾ ವ್ಯವಸ್ಥೆಗಳು ಹಾಗೂ ಲ್ಯಾಂಡ್‌ಸ್ಕೇಪಿಂಗ್ ಸೇರಿದಂತೆ ನಿರ್ಮಾಣ ಕ್ಷೇತ್ರಕ್ಕೆ ಸಂಬಂಧಿಸಿದ ವಿವಿಧ ಉತ್ಪನ್ನಗಳು ಮತ್ತು ತಂತ್ರಜ್ಞಾನಗಳು ಇರಲಿವೆ. 100ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಲಿರುವ ಈ ಎಕ್ಸ್‌ಪೋ ಮನೆ ನಿರ್ಮಿಸುವವರು, ಇಂಜಿನಿಯರ್‌ಗಳು ಹಾಗೂ ಗುತ್ತಿಗೆದಾರರಿಗೆ ಒಂದೇ ಸೂರಿನಡಿ ಸಮಗ್ರ ಮಾಹಿತಿ ಮತ್ತು ಹೊಸ ತಂತ್ರಜ್ಞಾನಗಳ ಪರಿಚಯ ಒದಗಿಸಲಿದೆ ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಅಧ್ಯಕ್ಷ ಜಿತೇಂದ್ರ ಎಚ್. ಮಿಶ್ರಾ, ಅನಿಲ್‌ಕುಮಾರ್ ಎಸ್. ಗಂಗಾಣಿ, ಮುನೀಶ್ ವೈಕುಂಠ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button