ಜಿಲ್ಲಾಸುದ್ದಿ

ನಂದೂರು ಕೈಗಾರಿಕಾ ಪ್ರದೇಶಕ್ಕೆ ಜಿಲ್ಲಾಧಿಕಾರಿ ಭೇಟಿ: ಕೈಗಾರಿಕೆಗಳ ಅಭಿವೃದ್ಧಿಗೆ ಚುರುಕು

290 ಕೋಟಿ ರೂ. ವೆಚ್ಚದ ಡೇರಿ ಕ್ಲಾಸಿಕ್ ಐಸ್‌ಕ್ರೀಮ್ ಘಟಕ ನಿರ್ಮಾಣ ಪರಿಶೀಲನೆ; ಟೆಕ್ಸ್‌ಟೈಲ್ ಹಾಗೂ ಆಟೋಮೊಬೈಲ್ ಕ್ಲಸ್ಟರ್‌ಗಳಿಗೂ ವೇಗ ನೀಡಲು ಸೂಚನೆ

ಕಲಬುರಗಿ, ಆ.27: ಜಿಲ್ಲಾಧಿಕಾರಿ ಇಕ್ರಂ ಶರೀಫ್ ಅವರು ಬುಧವಾರ ಶಹಾಬಾದ ರಸ್ತೆಯ ನಂದೂರು–ಕೆಸರಟಗಿ ವಸಾಹತು ಪ್ರದೇಶದ 3ನೇ ಹಂತಕ್ಕೆ ಭೇಟಿ ನೀಡಿ, ಸುಮಾರು 290 ಕೋಟಿ ರೂ. ಹೂಡಿಕೆಯೊಂದಿಗೆ ನಿರ್ಮಾಣವಾಗುತ್ತಿರುವ ಮೆ. ಡೇರಿ ಕ್ಲಾಸಿಕ್ ಐಸ್‌ಕ್ರೀಮ್ ಘಟಕದ ಕಾಮಗಾರಿಯನ್ನು ಪರಿಶೀಲಿಸಿದರು.

ಸುಮಾರು 60 ಎಕರೆ ಪ್ರದೇಶದಲ್ಲಿ ನಿರ್ಮಾಣಗೊಳ್ಳುತ್ತಿರುವ ಈ ಘಟಕದಲ್ಲಿ ಐಸ್‌ಕ್ರೀಮ್, ಫ್ರೋಜನ್ ಡೆಸರ್ಟ್, ಕುಲ್ಫಿ ಸೇರಿದಂತೆ ವಿವಿಧ ಡೇರಿ ಉತ್ಪನ್ನಗಳ ತಯಾರಿಕೆಯ ಜೊತೆಗೆ ಕೋಲ್ಡ್ ಸ್ಟೋರೇಜ್ ಘಟಕವೂ ಸ್ಥಾಪನೆಯಾಗಲಿದೆ. ಘಟಕ ಕಾರ್ಯಾರಂಭಗೊಂಡ ಬಳಿಕ ಸ್ಥಳೀಯವಾಗಿ ಸುಮಾರು 900 ಜನರಿಗೆ ಉದ್ಯೋಗಾವಕಾಶ ದೊರೆಯುವ ನಿರೀಕ್ಷೆಯಿದೆ. ಡೇರಿ ಘಟಕಕ್ಕೆ ಪೂರಕವಾಗಿ ಇನ್ನಷ್ಟು ಕೈಗಾರಿಕೆಗಳು ಸ್ಥಾಪನೆಯಾಗುವ ಸಾಧ್ಯತೆಯಿದ್ದು, ಇದರಿಂದ ಸ್ಥಳೀಯ ಆರ್ಥಿಕ ಚಟುವಟಿಕೆಗಳಿಗೆ ಮತ್ತಷ್ಟು ವೇಗ ಸಿಗಲಿದೆ ಎಂದು ಅಧಿಕಾರಿಗಳು ಜಿಲ್ಲಾಧಿಕಾರಿಗೆ ಮಾಹಿತಿ ನೀಡಿದರು.

ಇದೇ ಸಂದರ್ಭದಲ್ಲಿ ವಸಾಹತು ಪ್ರದೇಶದಲ್ಲಿರುವ ದಾಲ್ ಮಿಲ್ ಉದ್ದಿಮೆದಾರರನ್ನು ಭೇಟಿ ಮಾಡಿದ ಜಿಲ್ಲಾಧಿಕಾರಿ ಇಕ್ರಂ ಶರೀಫ್ ಅವರು, ಕೈಗಾರಿಕೆ ಸ್ಥಾಪನೆಗೆ ನಿವೇಶನ ಪಡೆದುಕೊಂಡು ನಿಗದಿತ ಅವಧಿಯಲ್ಲಿ ಉದ್ದಿಮೆ ಆರಂಭಿಸದ ನಿವೇಶನಗಳನ್ನು ತಕ್ಷಣ ಸರ್ವೆ ಮಾಡಿ ಗುರುತಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಮಹಿಳಾ ಪಾರ್ಕ್ ಸೇರಿದಂತೆ ಕೈಗಾರಿಕಾ ಉದ್ದೇಶಕ್ಕಾಗಿ ಮೀಸಲಾದ ನಿವೇಶನಗಳನ್ನೂ ಪರಿಶೀಲಿಸಿ, ಬಳಕೆಯಾಗದ ನಿವೇಶನಗಳನ್ನು ನಿಯಮಾನುಸಾರ ರದ್ದುಪಡಿಸಿ, ಹೊಸ ಉದ್ದಿಮೆಗಳಿಗೆ ಹಂಚಿಕೆ ಮಾಡುವ ಪ್ರಕ್ರಿಯೆ ಆರಂಭಿಸಬೇಕು ಎಂದು ನಿರ್ದೇಶನ ನೀಡಿದರು.

ಇದೇ ಕೈಗಾರಿಕಾ ಪ್ರದೇಶದಲ್ಲಿ ಸುಮಾರು 50 ಎಕರೆ ಜಾಗದಲ್ಲಿ ರಾಜ್ಯ ಸರ್ಕಾರದ ವತಿಯಿಂದ ಸ್ಥಾಪಿಸಲು ಉದ್ದೇಶಿಸಿರುವ ಟೆಕ್ಸ್‌ಟೈಲ್ ಪಾರ್ಕ್ ಕಾಮಗಾರಿ ವಿಳಂಬವಾಗಿರುವುದನ್ನು ಗಮನಿಸಿದ ಜಿಲ್ಲಾಧಿಕಾರಿ, ಯೋಜನೆ ಅನುಷ್ಠಾನಕ್ಕೆ ಇರುವ ಅಡೆತಡೆಗಳನ್ನು ಕೂಡಲೇ ನಿವಾರಿಸಿ ಕಾಮಗಾರಿಗೆ ವೇಗ ನೀಡುವಂತೆ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಿಗೆ ಸೂಚಿಸಿದರು.

ಆಟೋಮೊಬೈಲ್ ಕ್ಲಸ್ಟರ್ ಸ್ಥಳ ಪರಿಶೀಲನೆ

ನಂತರ ಜಿಲ್ಲಾಧಿಕಾರಿ ಕಪನೂರಿನಲ್ಲಿ ಉದ್ದೇಶಿತ ಆಟೋಮೊಬೈಲ್ ಕ್ಲಸ್ಟರ್ ಸ್ಥಾಪನೆ ಸ್ಥಳಕ್ಕೂ ಭೇಟಿ ನೀಡಿ ಪರಿಶೀಲಿಸಿದರು. ಆಟೋಮೊಬೈಲ್ ಘಟಕಗಳನ್ನು ಒಂದೇ ಪ್ರದೇಶದಲ್ಲಿ ಸ್ಥಾಪಿಸುವ ಉದ್ದೇಶದಿಂದ ಕೆಐಎಡಿಬಿಯಿಂದ ಈಗಾಗಲೇ 20 ಎಕರೆ ಪ್ರದೇಶವನ್ನು ಆಟೋಮೊಬೈಲ್ ಕ್ಲಸ್ಟರ್‌ಗಾಗಿ ಮೀಸಲಿಡಲಾಗಿದೆ. ಎಂಎಸ್‌ಸಿಸಿಡಿಪಿ ಯೋಜನೆಯಡಿ ಅನುಮೋದನೆಗಾಗಿ ಪ್ರಸ್ತಾವನೆ ಸರ್ಕಾರದ ಹಂತದಲ್ಲಿ ಬಾಕಿ ಇದೆ ಎಂದು ಅಧಿಕಾರಿಗಳು ಜಿಲ್ಲಾಧಿಕಾರಿಗೆ ಮಾಹಿತಿ ನೀಡಿದರು.

ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಅವರು ಕೈಗಾರಿಕಾ ಪ್ರದೇಶದಲ್ಲಿರುವ ವಿವಿಧ 15 ಘಟಕಗಳ ಕಾರ್ಯಚಟುವಟಿಕೆಗಳನ್ನು ಪರಿಶೀಲಿಸಿ, ಕೈಗಾರಿಕೆಗಳ ಅಭಿವೃದ್ಧಿ ಹಾಗೂ ಉದ್ದಿಮೆದಾರರ ಸಮಸ್ಯೆಗಳ ಕುರಿತು ಮಾಹಿತಿ ಪಡೆದುಕೊಂಡರು.

ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಅಬ್ದುಲ್ ಅಜೀಮ್, ಕೆಐಎಡಿಬಿ ಕಾರ್ಯನಿರ್ವಾಹಕ ಅಭಿಯಂತ ನಾಗೇಶ, ಎಇಇ ಪರಮೇಶ, ಎಇ ಅನೀಲ ಹಾಗೂ ಪ್ರಕಾಶ, ಜವಳಿ ಮತ್ತು ಕೈಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಬಿ.ವಿಠ್ಠಲ ರಾಜು, ಉಪನಿರ್ದೇಶಕ ರಾಘವೇಂದ್ರ ಎಸ್. ಹೊಸಮನಿ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button