ಸಾಲಬಾಧೆಗೆ ರೈತ ಆತ್ಮಹತ್ಯೆ: ಮನೆಯ ಮುಂದಿನ ಬೇವು ಮರಕ್ಕೆ ನೇಣು
ಸುಮಾರು 6.50 ಲಕ್ಷ ರೂ. ಸಾಲ; ಬೆಳೆ ಕೈಕೊಟ್ಟಿದ್ದರಿಂದ ಮಾನಸಿಕವಾಗಿ ನೊಂದಿದ್ದ ರೈತ

ಕಲಬುರಗಿ, ಆ.26- ಸುಮಾರು 6.50 ಲಕ್ಷ ರೂ. ಸಾಲದ ಬಾಧೆಯಿಂದ ನೊಂದ ರೈತರೊಬ್ಬರು ಮನೆಯ ಮುಂದಿನ ಬೇವು ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಆಳಂದ ತಾಲೂಕಿನ ಕಣಮಸ ಗ್ರಾಮದಲ್ಲಿ ನಡೆದಿದೆ. ಮೃತರನ್ನು ರೈತ ಶಾಂತಯ್ಯ ಮಠಪತಿ (65) ಎಂದು ಗುರುತಿಸಲಾಗಿದೆ.
ಮೃತ ರೈತ ಶಾಂತಯ್ಯ ಅವರಿಗೆ ಪತ್ನಿ ನಾಗಮ್ಮ ಹಾಗೂ ನಾಲ್ವರು ಮಕ್ಕಳಿದ್ದು, ಇಬ್ಬರು ಪುತ್ರಿಯರಿಗೆ ಈಗಾಗಲೇ ವಿವಾಹ ಮಾಡಿಕೊಟ್ಟಿದ್ದರು. ಉಳಿದ ಇಬ್ಬರು ಮಕ್ಕಳು ತಮ್ಮ ಕುಟುಂಬದೊಂದಿಗೆ ಜೀವನ ನಡೆಸುತ್ತಿದ್ದಾರೆ ಎನ್ನಲಾಗಿದೆ. ಗ್ರಾಮದ ಹೊರವಲಯದಲ್ಲಿ ಸುಮಾರು ಏಳು ಎಕರೆ 18 ಗುಂಟೆ ಜಮೀನು ಹೊಂದಿದ್ದ ಶಾಂತಯ್ಯ ಅವರು ಹೊಲದ ಅಭಿವೃದ್ಧಿ ಹಾಗೂ ಮಕ್ಕಳ ವಿವಾಹದ ಉದ್ದೇಶಕ್ಕಾಗಿ ವಿವಿಧ ಮೂಲಗಳಿಂದ ಸಾಲ ಪಡೆದಿದ್ದರು.
ತಡಕಲ್ ಪ್ರಗತಿ ಕೃಷ್ಣಾ ಬ್ಯಾಂಕ್‌ನಲ್ಲಿ ಒಂದು ಲಕ್ಷ ರೂ., ಸಂಬಂಧಿ ಶರಣಯ್ಯ ತಂದೆ ಚೆನ್ನಬಸಯ್ಯ ಮಠಪತಿ ಅವರಿಂದ ಮೂರು ಲಕ್ಷ ರೂ. ಹಾಗೂ ಗುರುಪಾದಯ್ಯ ಬಸಲಿಂಗಯ್ಯ ಮಠಪತಿ ಅವರಿಂದ ಎರಡುವರೆ ಲಕ್ಷ ರೂ. ಸಾಲ ಪಡೆದಿದ್ದರು ಎನ್ನಲಾಗಿದೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ಮಳೆ ಪ್ರಮಾಣದಲ್ಲಿ ಏರುಪೇರಾಗಿ ಹೊಲದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಬೆಳೆ ಬಾರದ ಕಾರಣ ಸಾಲ ತೀರಿಸುವ ಬಗ್ಗೆ ಶಾಂತಯ್ಯ ಚಿಂತಿತರಾಗಿದ್ದರು. ಕುಟುಂಬದವರು ಹೇಗಾದರೂ ಸಾಲ ತೀರಿಸೋಣ ಎಂದು ಧೈರ್ಯ ತುಂಬಿದ್ದರು ಎನ್ನಲಾಗಿದೆ.
ಆದರೆ, ಕಳೆದ 25ರಂದು ರಾತ್ರಿ ಪತ್ನಿ ಹಾಗೂ ಪುತ್ರಿಯೊಂದಿಗೆ ಊಟ ಮಾಡಿ ಮಲಗಿದ್ದ ಶಾಂತಯ್ಯ ಅವರು, 26ರಂದು ಬೆಳಗಿನ ಜಾವ ಸುಮಾರು 4 ಗಂಟೆಗೆ ಮೂತ್ರ ವಿಸರ್ಜನೆಗೆಂದು ಮನೆಯ ಅಂಗಳಕ್ಕೆ ತೆರಳಿದ್ದರು. ಈ ವೇಳೆ ಮನೆಯ ಮುಂದಿದ್ದ ಬೇವು ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಳಗ್ಗೆ ಕುಟುಂಬದವರು ಗಮನಿಸಿದಾಗ ಘಟನೆ ಬೆಳಕಿಗೆ ಬಂದಿದೆ.
ಕೂಡಲೇ ಮನೆಯ ಪಕ್ಕದಲ್ಲಿದ್ದ ಬಸಣ್ಣ ತಂದೆ ವಿಠ್ಠಲ್ ಹಿಪ್ಪರಗಿ ಹಾಗೂ ಬಸಣ್ಣ ತಂದೆ ಪೀರಪ್ಪ ಪೂಜಾರಿ ಅವರ ಸಹಾಯದಿಂದ ಮೃತದೇಹವನ್ನು ಮರದಿಂದ ಕೆಳಗಿಳಿಸಲಾಯಿತು. ನಂತರ ಮುಂದಿನ ಕಾನೂನು ಕ್ರಮಕ್ಕಾಗಿ ಖಾಸಗಿ ವಾಹನದಲ್ಲಿ ಆಳಂದ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ಮೃತದೇಹವನ್ನು ರವಾನಿಸಲಾಗಿದೆ.
ಈ ಕುರಿತು ಮೃತರ ಪತ್ನಿ ನಾಗಮ್ಮ ಅವರು ದೂರು ಸಲ್ಲಿಸಿದ್ದು, ಪ್ರಕರಣ ದಾಖಲಾಗಿದೆ. ಪೊಲೀಸರು ಘಟನೆಗೆ ಸಂಬಂಧಿಸಿದಂತೆ ಮುಂದಿನ ತನಿಖೆ ಕೈಗೊಂಡಿದ್ದಾರೆ.



