ಕಲೆಸಾಂಸ್ಕೃತಿಕ

ಕಲಬುರಗಿ ದಖನ್ ಪರಂಪರೆಯನ್ನು ಎತ್ತಿಹಿಡಿದ ಇಸ್ಲಾಮಿಕ್ ಕಲಾ ಪ್ರದರ್ಶನ

ವೈವಿಧ್ಯಮಯ ಕಲಾಪ್ರಕಾರಗಳ ಮೂಲಕ ಕೋಮು ಸೌಹಾರ್ದತೆಗೆ ಸಂದೇಶ

ಕಲಬುರಗಿ, ಆ.26- ದಖನ್ ಸುಲ್ತಾನರು ಕಲಬುರಗಿಯ ಸಾಂಸ್ಕೃತಿಕ ಹಾಗೂ ಕಲಾತ್ಮಕ ಪರಂಪರೆಗೆ ನೀಡಿದ ಶ್ರೀಮಂತ ಕೊಡುಗೆ ನಗರದ ವಾಸ್ತುಶಿಲ್ಪ, ಕಲೆ ಹಾಗೂ ಕ್ಯಾಲಿಗ್ರಫಿಯಲ್ಲಿ ಸ್ಪಷ್ಟವಾಗಿ ಪ್ರತಿಬಿಂಬಿತವಾಗಿದೆ ಎಂದು ಇತಿಹಾಸಕಾರ ಹಾಗೂ ನ್ಯಾಯವಾದಿ ಡಾ. ಮಕಸೂದ್ ಅಫಜಲ್ ಜಾಗೀರದಾರ್ ಹೇಳಿದರು.

ನಗರದ ಹಿದಾಯತ್ ಸೆಂಟರ್‌ನಲ್ಲಿ ಬುಧವಾರ ಈದ್ ಮಿಲಾದ್-ಉನ್-ನಬಿ ಅಂಗವಾಗಿ ಆಯೋಜಿಸಲಾಗಿದ್ದ ಎರಡು ದಿನಗಳ 6ನೇ ಇಸ್ಲಾಮಿಕ್ ಕಲಾ ಪ್ರದರ್ಶನ ಹಾಗೂ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪ್ರದರ್ಶನದಲ್ಲಿ ವಿವಿಧ ಕಲಾಕೃತಿಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರದರ್ಶನದ ಸಂಚಾಲಕ ಮೊಹಮ್ಮದ್ ಅಯಾಜುದ್ದೀನ್ ಪಟೇಲ್ ಮಾತನಾಡಿ, ವಿವಿಧ ಸಮುದಾಯಗಳ ಕಿರಿಯ ಹಾಗೂ ಹಿರಿಯ ಕಲಾವಿದರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿ ಅವರ ಕಲಾ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶ ಕಲ್ಪಿಸಿರುವುದರಿಂದ ಈ ಕಾರ್ಯಕ್ರಮ ನಗರದಲ್ಲಿ ವಿಶಿಷ್ಟವಾಗಿದೆ ಎಂದರು. ವೈವಿಧ್ಯಮಯ ಇಸ್ಲಾಮಿಕ್ ಕಲಾ ಪ್ರಕಾರಗಳನ್ನು ಪರಿಚಯಿಸುವುದರ ಜೊತೆಗೆ ಕೋಮು ಸೌಹಾರ್ದತೆಯನ್ನು ಉತ್ತೇಜಿಸಲು ಈ ಪ್ರದರ್ಶನ ಉತ್ತಮ ವೇದಿಕೆಯಾಗಿದೆ ಎಂದು ಹೇಳಿದರು.

ಪತ್ರಕರ್ತ ಭವಾನಿ ಸಿಂಗ್ ಠಾಕೂರ್ ಅವರು ವಿವಿಧ ಐತಿಹಾಸಿಕ ಸ್ಮಾರಕಗಳ ಕಲಾತ್ಮಕ ಮಹತ್ವವನ್ನು ವಿವರಿಸಿದರು. ಅನೇಕ ಸ್ಮಾರಕಗಳಲ್ಲಿ ಸುಂದರ ಚಿತ್ರಕಲೆ ಹಾಗೂ ಕಲಾಕೃತಿಗಳು ಕಂಡುಬರುತ್ತವೆ. ಕಲಬುರಗಿಯ ಶ್ರೀಮಂತ ಸಾಂಸ್ಕೃತಿಕ ಪರಂಪರೆಗೆ ಖ್ವಾಜಾ ಬಂದನವಾಜ್ ದರ್ಗಾ ಪ್ರಮುಖ ಉದಾಹರಣೆಯಾಗಿದೆ ಎಂದು ತಿಳಿಸಿದರು.

ಮೊಹಮ್ಮದ್ ರಫೀಕ್ ಪಲ್ಲನ್ ಹಾಗೂ ಖ್ಯಾತ ಕಲಾವಿದ ಟಿ. ದೇವೇಂದ್ರ ಅವರು ಮಾತನಾಡಿ, ಕಲೆಯನ್ನು ಉತ್ತೇಜಿಸುವ ಹಾಗೂ ಕಲಾವಿದರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಆಯೋಜಕರು ಮಾಡುತ್ತಿರುವ ಪ್ರಯತ್ನಗಳನ್ನು ಶ್ಲಾಘಿಸಿದರು.

ಕಾರ್ಯಕ್ರಮದ ಅಂಗವಾಗಿ ಇತ್ತೀಚೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ರಾಷ್ಟ್ರಪತಿ ಭವನದಲ್ಲಿ ಗೌರವ ಸ್ವೀಕರಿಸಿದ ಕಲಾವಿದ ರೆಹಮಾನ್ ಪಟೇಲ್ ಅವರನ್ನು ಸಂಘಟನಾ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.

ಇಸ್ಲಾಮಿಕ್ ಕಲೆಯನ್ನು ಉತ್ತೇಜಿಸುವುದು, ಕಲಬುರಗಿಯ ಐತಿಹಾಸಿಕ ಕಲಾ ಪರಂಪರೆಗಳನ್ನು ಸಂರಕ್ಷಿಸುವುದು ಹಾಗೂ ವಿವಿಧ ಹಿನ್ನೆಲೆಯ ಕಲಾವಿದರಿಗೆ ಪರಸ್ಪರ ಸಂವಾದ ನಡೆಸಿ ತಮ್ಮ ಸೃಜನಶೀಲ ಕೃತಿಗಳನ್ನು ಪ್ರದರ್ಶಿಸಲು ವೇದಿಕೆ ಕಲ್ಪಿಸುವುದು ಪ್ರದರ್ಶನ ಮತ್ತು ವಿಚಾರ ಸಂಕಿರಣದ ಉದ್ದೇಶವಾಗಿದೆ.

ಪ್ರದರ್ಶನವು ಆಗಸ್ಟ್ 27ರಂದು ಸಂಜೆ 6 ಗಂಟೆಯವರೆಗೆ ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಗಿರಲಿದೆ.

Related Articles

Leave a Reply

Your email address will not be published. Required fields are marked *

Back to top button